Advertisement
ನಗರದ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ 11ರ ಗುರುವಾರ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಆರೋಪಪಟ್ಟಿಯ ಕೈಪಿಡಿ ಬಿಡುಗಡೆ ಮಾಡಲಾಗುವುದು. ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಕೈಪಿಡಿ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು.
Related Articles
ಇದಕ್ಕೂ ಮುನ್ನ ಪಾವಗಡದ ಹಲವು ಜೆಡಿಎಸ್ ಮುಖಂಡರನ್ನು ಬಿಜೆಪಿಗೆ ಬರಮಾಡಿಕೊಂಡು ಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ, ಮೇ 18ರಿಂದ ಒಂದೂಕಾಲು ತಿಂಗಳು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಪ್ರವಾಸ ಕೈಗೊಳ್ಳುವ ಬಗ್ಗೆ ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಹೇಳಿದ್ದೆ. ಅದರಂತೆ ಅಂದು ಬೆಳಗ್ಗೆ 9 ಗಂಟೆಗೆ ತುಮಕೂರಿನ ಸಿದ್ಧಗಂಗಾ ಮಠಕ್ಕೆ ತೆರಳಿ ಸಿದ್ಧಗಂಗಾ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಅಲ್ಲಿಂದಲೇ ಪ್ರವಾಸ ಆರಂಭಿಸುವುದಾಗಿ ಹೇಳಿದರು.
Advertisement
ತಮ್ಮ ಜಿಲ್ಲಾ ಪ್ರವಾಸದ ವೇಳೆ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳ ಜನರು ಹೆಚ್ಚಾಗಿರುವ ಮೊಹಲ್ಲಾಗಳಿಗೆ ಭೇಟಿ ನೀಡಲಾಗುವುದು. ಆ ಜಿಲ್ಲೆಯ ಮುಖಂಡರು ಮತ್ತು ಪ್ರಮುಖ ಕಾರ್ಯಕರ್ತರೊಂದಿಗೆ ಕುಳಿತು ಸಂಘಟನೆ ಬಲಪಡಿಸುವ ಬಗ್ಗೆ ಚರ್ಚಿಸಲಾಗುವುದು. ಸಂಜೆ ಆ ಜಿಲ್ಲೆಯ ಯಾವುದಾದರೂ ಒಂದು ತಾಲೂಕಿನಲ್ಲಿ ಬಹಿರಂಗ ಸಭೆ ಏರ್ಪಡಿಸಲಾಗುವುದು ಎಂದು ಹೇಳಿದರು.
ಎಸ್‌ಸಿ, ಎಸ್ಟಿ, ಓಬಿಸಿ ಮೇಲೆ ಕಣ್ಣು:ದೇಶದಲ್ಲಿ ಬಿಜೆಪಿ ಗಾಳಿ ಬೀಸುತ್ತಿದ್ದು, ಇದಕ್ಕೆ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 325 ಸೀಟು ಗೆದ್ದಿರುವುದೇ ಸಾಕ್ಷಿ. ಅದರಲ್ಲೂ 75 ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗದ ಜನ ನಮ್ಮ ಪರವಾಗಿದ್ದಾರೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅದೇ ರೀತಿ ರಾಜ್ಯದಲ್ಲೂ ಈ ಸಮುದಾಯವನ್ನು ಒಲಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸಲಿದ್ದು, ನನ್ನ ಜಿಲ್ಲಾ ಪ್ರವಾಸದ ವೇಳೆ ಈ ಸಮುದಾಯದ ಮುಖಂಡರು, ಕಾರ್ಯಕರ್ತರನ್ನು ಒಟ್ಟು ಸೇರಿಸಬೇಕು. ಸಾರ್ವಜನಿಕ ಸಭೆಗಳಲ್ಲಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಸೂಚಿಸಿರುವುದಾಗಿ ತಿಳಿಸಿದರು. ರಾಜ್ಯದಲ್ಲಿ ಜನರನ್ನು ಮರುಳು ಮಾಡಿ ಚುನಾವಣೆ ಗೆಲ್ಲಲು ಕಾಂಗ್ರೆಸ್ ಎಲ್ಲಾ ವಾಮ ಮಾರ್ಗಗಳನ್ನು ಅನುಸರಿಸಲು ಸಿದ್ಧವಾಗಿದೆ. ಜೆಡಿಎಸ್‌ನಲ್ಲಿ ಏನಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದ್ದು, ಆ ಪಕ್ಷದ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಮ್ಮ ಹೋರಾಟ ಏನೇ ಇದ್ದರೂ ಅದು ಕಾಂಗ್ರೆಸ್ ವಿರುದ್ಧ. ಆದ್ದರಿಂದ ಎಚ್ಚರಿಕೆಯಿಂದ ರಾಜಕಾರಣ ಮಾಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದ ಅವರು, ಇನ್ನು 8-9 ತಿಂಗಳಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡು ಚುನಾವಣಾ ಕಣಕ್ಕೆ ಧುಮುಕಬೇಕಿದ್ದು, ಅದಕ್ಕೆ ಸಿದ್ಧವಿರುವಂತೆ ಸೂಚನೆ ನೀಡಿದರು.