Advertisement

ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರ ಹೊಂದಿಸೋದೇ ಸವಾಲು

01:20 PM Nov 12, 2017 | |

ಬೆಂಗಳೂರು: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇಂಗ್ಲಿಷ್‌, ವಿಜ್ಞಾನ, ಗಣಿತ ಹಾಗೂ ಸಮಾಜ ವಿಜ್ಞಾನ
ವಿಷಯದ ಶಿಕ್ಷಕರನ್ನು ಹೊಂದಿಸುವುದೇ ಸಾರ್ವಜನಿಕ ಶಿಕ್ಷಣ ಇಲಾಖೆಗೆ ದೊಡ್ಡ ಸವಾಲಾಗಿದೆ.

Advertisement

ಸುಮಾರು 10,000 ಪದವೀಧರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಇದಾದ ನಂತರವೂ ಸುಮಾರು
55,000 ಶಿಕ್ಷಕರನ್ನು ಹಿರಿಯ ಪ್ರಾಥಮಿಕ ಶಾಲೆಗೆ ಹೊಂದಿಸ ಬೇಕಾದ ಅನಿವಾರ್ಯತೆ ಇದೆ. ಕಿರಿಯ ಪ್ರಾಥಮಿಕ ಶಾಲೆ (1ರಿಂದ5ನೇ ತರಗತಿ)ಯಲ್ಲಿ ಸಮಾಜ ವಿಜ್ಞಾನ ವಿಷಯಾಧಾರಿತವಾಗಿ ಬೋಧನೆ ಮಾಡಬಲ್ಲ ಸಾಮರ್ಥ್ಯ ಹೊಂದಿರುವ 1.50 ಲಕ್ಷ ಶಿಕ್ಷಕರು ಇದ್ದಾರೆ. ಹಿರಿಯ ಪ್ರಾಥಮಿಕ ಶಾಲೆ (6ರಿಂದ 8ನೇ ತರಗತಿ)ಯಲ್ಲಿ ವಿಷಯಾಧಾರಿತವಾಗಿ ಬೋಧನೆ ಮಾಡುವ ಶಿಕ್ಷಕರ ಕೊರತೆ ಇದೆ.

ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಜತೆಗೆ ಮೂರ್‍ನಾಲ್ಕು ವರ್ಷಗಳಲ್ಲಿ ನಿವೃತ್ತಿ ಹೊಂದುವ ಶಿಕ್ಷಕರ ಸಂಖ್ಯೆಯೂ ಅಧಿಕವಾಗಿದೆ. ವಿಜ್ಞಾನ, ಗಣಿತ ಹಾಗೂ ಇಂಗ್ಲಿಷ್‌ ಶಿಕ್ಷಕರು ನಿವೃತ್ತಿಯಾದ ನಂತರ ಆ ಹುದ್ದೆಗಳು ಖಾಲಿಯಾಗಲಿವೆ. ಅದೇ ವಿಷಯದ ಬೋಧಕರನ್ನು ನೇಮಿಸಿಕೊಳ್ಳುವ ಅಗತ್ಯವಿದೆ.

2016-17ರ ಡೈಸ್‌ ವರದಿಯ ಪ್ರಕಾರ ರಾಜ್ಯದಲ್ಲಿ 21,441 ಕಿರಿಯ ಪ್ರಾಥಮಿಕ ಹಾಗೂ 22,454 ಹಿರಿಯ ಪ್ರಾಥಮಿಕ ಶಾಲೆಗಳಿವೆ. ಹಿರಿಯ ಪ್ರಾಥಮಿಕ ಶಾಲೆಗೆ 48,998 ಶಿಕ್ಷಕರ ಹುದ್ದೆ ಮಂಜೂರಾಗಿದ್ದು, 42,117 ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಹಿರಿಯ ಪ್ರಾಥಮಿಕ ಶಾಲೆಗೆ 1,45,720 ಹುದ್ದೆಗಳು ಮಂಜೂರಾಗಿದ್ದು, 1,24,019 ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ.

68 ಸಾವಿರ ಅರ್ಜಿ: ಇಂಗ್ಲಿಷ್‌ ವಿಷಯಕ್ಕೆ 4,531, ಸಮಾಜ ವಿಜ್ಞಾನಕ್ಕೆ 1,236 ಹಾಗೂ ಗಣಿತ ಮತ್ತು ವಿಜ್ಞಾನಕ್ಕೆ 4,233 ಪದವೀಧರ ಶಿಕ್ಷಕರು ಸೇರಿದಂತೆ 10,000 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಜಿಲ್ಲಾವಾರು
ಸಂಯುಕ್ತ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. 10 ಸಾವಿರ ಹುದ್ದೆಗಳಿಗೆ 68,828
ಅರ್ಜಿಗಳು ಬಂದಿದೆ. ಜಿಲ್ಲಾಮಟ್ಟದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುವುದರಿಂದ ಆಯಾ ಜಿಲ್ಲೆಯಲ್ಲಿ ಲಭ್ಯವಿರುವ ಹುದ್ದೆಗಳಿಗೆ ಅನುಗುಣವಾಗಿ ಒಬ್ಬನೇ ಅಭ್ಯರ್ಥಿ ಎರಡು ಅಥವಾ ಮೂರು ವಿಷಯಕ್ಕೂ ಅರ್ಜಿ ಸಲ್ಲಿಸಿರುವ ಸಾಧ್ಯತೆ ಇದೆ.

Advertisement

ಅರ್ಜಿ ಸಲ್ಲಿಸಲು ಆಗುತ್ತಿಲ್ಲ: ಪದವಿಯಲ್ಲಿ ಇಂಗ್ಲಿಷ್‌ ಐಚ್ಛಿಕ ವಿಷಯವಾಗಿ ತೆಗೆದುಕೊಂಡು, ಬಿ.ಇಡಿ ಪೂರೈಸಿದ
ಅಭ್ಯರ್ಥಿಗಳಿಗೆ ಸಮಾಜ ವಿಜ್ಞಾನ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಹಾಗೆಯೇ ಶಿಕ್ಷಕರ ಅರ್ಹತಾ
ಪರೀಕ್ಷೆಯಲ್ಲಿ ಶೇ.50ರಷ್ಟಕ್ಕಿಂತ ಕಡಿಮೆ ಅಂಕ ಪಡೆದು ತೇರ್ಗಡೆಯಾದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು
ಸಾಧ್ಯವಾಗುತ್ತಿಲ್ಲ. ಅಲ್ಲದೇ, ಕೆಲವೊಂದು ವಿಷಯಕ್ಕೆ ಶಿಕ್ಷಕರ ನೇಮಕಾತಿಯನ್ನೇ ಮಾಡಿಕೊಂಡಿಲ್ಲ ಎಂದು ಶಿಕ್ಷಕ ಹುದ್ದೆಯ ಆಕಾಂಕ್ಷಿ ಅಭ್ಯರ್ಥಿಗಳು ಆರೋಪಿಸಿದ್ದಾರೆ.

ಪರೀಕ್ಷೆಗೆ ಸಿದ್ಧತೆ
10 ಸಾವಿರ ಶಿಕ್ಷಕರ ನೇಮಕಕ್ಕೆ ಸಂಯುಕ್ತ ಸ್ಪರ್ಧಾತ್ಮಕ ಪರೀಕ್ಷೆ ನ.11ರಿಂದ ಡಿ.10ರ ತನಕ ನಾಲ್ಕು ಹಂತಗಳಲ್ಲಿ
ನಡೆಯಲಿದೆ. ಜಿಲ್ಲಾ ಕೇಂದ್ರ, ಪರೀಕ್ಷೆ ಭದ್ರತಾ ಹಾಗೂ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪರೀಕ್ಷಾ ಪ್ರವೇಶ ಪತ್ರವನ್ನು ಆನ್‌ಲೈನ್‌ ಮೂಲಕ ಒದಗಿಸುವುದು ಸೇರಿದಂತೆ ಎಲ್ಲಾ ರೀತಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪರೀಕ್ಷೆಯನ್ನು ಗೊಂದಲವಿಲ್ಲದೆ ನಡೆಸುವ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಕೇಂದ್ರೀಕೃತ ದಾಖಲಾತಿ ಘಟಕಗಳ ಅಧಿಕಾರಿಗಳು ಸೇರಿಕೊಂಡು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಪತ್ರದ ಮೂಲಕ ಮಾತುಕತೆ ನಡೆಸುತ್ತಿದ್ದಾರೆ.

ಎಲ್ಲಾ ವಿಷಯಗಳ ಶಿಕ್ಷಕರನ್ನು ಒಮ್ಮೆಗೇ ನೇಮಿಸಿಕೊಳ್ಳಲು ಸಾಧ್ಯವಿಲ್ಲ. ಸರ್ಕಾರ ನೀಡಿರುವ ಸೂಚನೆಯಂತೆ ಈ ವರ್ಷ ವಿಜ್ಞಾನ, ಗಣಿತ,ಇಂಗ್ಲಿಷ್‌ ಹಾಗೂ ಸಮಾಜ ವಿಜ್ಞಾನ ಶಿಕ್ಷಕರ ನೇಮಕಾತಿ ನಡೆಯುತ್ತಿದೆ. ಹಿರಿಯ ಪ್ರಾಥಮಿಕ ಶಾಲೆಗೆ ಇನ್ನೂ 55 ಸಾವಿರ ಶಿಕ್ಷಕರನ್ನು ಹೊಂದಿಸಬೇಕಾದ ಅನಿವಾರ್ಯತೆ ಇದೆ.
– ಕೆ.ರತ್ನಯ್ಯ, ಉಪ ನಿರ್ದೇಶಕ, ಕೇಂದ್ರೀಕೃತ
ದಾಖಲಾತಿ ಘಟಕ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next