ಬೆಂಗಳೂರು: ಚಿತ್ರರಂಗಕ್ಕೆ ಅನ್ನದಾತರಾಗಿರುವ ನಿರ್ಮಾಪಕರು ಚೆನ್ನಾಗಿರಬೇಕು ಎಂಬುದನ್ನು ಗಮನದಲ್ಲಿ ಇರಿಸಿಕೊಂಡು ಸಿನಿಮಾ ಮಾಡಿದಾಗ ಮಾತ್ರ ಯಶಸ್ಸು ಸಿಗಲು ಸಾಧ್ಯ ಎಂದು ಹಿರಿಯ ನಿರ್ದೇಶಕ ಸಾಯಿ ಪ್ರಕಾಶ್ ಹೇಳಿದರು.
ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋ ಜಿಸಿದ್ದ “ಬೆಳ್ಳಿ ಹೆಜ್ಜೆ’ ಕಾರ್ಯಕ್ರಮದ ಅತಿಥಿಯಾಗಿ ಮಾತನಾಡಿದ ಅವರು, ಸಿನಿಮಾಗೆ ಬಂಡ ವಾಳ ಹಾಕುವ ನಿರ್ಮಾಪಕನನ್ನು ಉಳಿಸುವುದೇ ನಿರ್ದೇಶಕನ ಮುಂದಿರುವ ದೊಡ್ಡ ಸವಾಲು ಎಂದರು.
ತಮ್ಮ 27 ವರ್ಷದ ಸಿನಿಮಾ ಪಯಣ ಮೆಲುಕುಹಾಕಿದ ಸಾಯಿ ಪ್ರಕಾಶ್, ನಾನು 101 ಸಿನಿಮಾ (86 ಕನ್ನಡ, 16 ತೆಲುಗು ಚಿತ್ರ) ನಿರ್ದೇಶನ ಮಾಡಲು ನನ್ನ ನಿರ್ಮಾಪಕರು, ಕಲಾವಿದರು ಹಾಗೂ ತಂತ್ರಜ್ಞರ ಪ್ರೋತ್ಸಾಹ ಕಾರಣ. ನಾನು ಸಂಪಾದಿಸಿದ ಆಸ್ತಿ ಒಳ್ಳೆಯ ತಂತ್ರಜ್ಞರು ಎಂದರು.
ಕನ್ನಡ ಚಿತ್ರರಂಗಕ್ಕೆ ಬರುವ ಮುನ್ನ ನಾನು ತೆಲುಗು ಚಿತ್ರರಂಗದಲ್ಲಿದ್ದೆ. ಇಲ್ಲಿಗೆ ಬಂದು ನಾನು ಕನ್ನಡ ಕಲಿತೆ. ಕನ್ನಡ ಚಿತ್ರರಂಗದ ಅನೇಕರ ಹಿರಿಯರು ನನ್ನ ಕನ್ನಡ ತಿದ್ದಿದ್ದಾರೆ. ಮಾಡುವ ಕೆಲಸದಲ್ಲಿ ಶ್ರದ್ಧೆ, ಭಕ್ತಿ ಇದ್ದರೆ ನಿಮಗೆ ಭಾಷೆ ಯಾವತ್ತೂ ಅಡ್ಡ ಬರೋದಿಲ್ಲ. ಕನ್ನಡ ಚಿತ್ರರಂಗದ ಬಹುತೇಕ ಎಲ್ಲ ನಟರ ಜತೆ ಕೆಲಸ ಮಾಡಿರುವುದು ನನ್ನ ಅದೃಷ್ಟ. ಇಂತಹ ಭಾಗ್ಯ ಎಲ್ಲರಿಗೂ ಸಿಗದು. ಈ ಪಯಣದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದೇನೆ. ಚಿತ್ರರಂಗದಲ್ಲಿ ನಾನೇನಾದರೂ ಸಾಧನೆ ಮಾಡಿದ್ದರೆ ಅದಕ್ಕೆ ನಾನು ನಂಬಿರುವ ಸಾಯಿಬಾಬಾ ಕಾರಣ ಎಂದರು.
“ಸೆಂಟಿಮೆಂಟ್ ಎಂದರೆ ಸಾಯಿಪ್ರಕಾಶ್ ಎನ್ನುತ್ತಾರೆ. ಆದರೆ, ನಾನು ಆ್ಯಕ್ಷನ್, ಕಾಮಿಡಿ, ಪೌರಾಣಿಕ, ಭಕ್ತಿಪ್ರಧಾನ ಹೀಗೆ ಎಲ್ಲ ರೀತಿಯ ಸಿನಿಮಾ ಮಾಡಿದ್ದೇನೆ. ನನ್ನ ಶೇ.70 ಸಿನಿಮಾಗಳು ಯಶಸ್ಸು ಕಂಡಿವೆ. ಕರ್ನಾಟಕ ನನಗೆ ಎಲ್ಲವನ್ನೂ ಕೊಟ್ಟಿದೆ. ಮುಂದೆಯೂ ಈ ನೆಲದಲ್ಲೇ ಕೆಲಸ ಮಾಡುವ ಆಸೆಯಿದೆ. ನಾವು ಏಳೆಂಟು ದಿನಕ್ಕೆ ಒಂದೊಂದು ಸಿನಿಮಾ ಮಾಡಿದ ಉದಾಹರಣೆಗಳಿವೆ. ಒಂದು ದಿನದಲ್ಲಿ ಎರಡು ಸಿನಿಮಾಗಳನ್ನು ನಿರ್ದೇಶನ ಮಾಡುತ್ತಿದ್ದೆ’ ಎನ್ನುತ್ತಾ ತಮ್ಮ ಸಿನಿ ಜರ್ನಿ ನೆನೆದರು. ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಶಶಿಕುಮಾರ್ ಇದ್ದರು.