Advertisement

ಕೋವಿಡ್ ಸಮಯದಲ್ಲಿ ಸಿನಿಮಾ ಹವಾ ಇಡೋದೇ ಸವಾಲು!

01:00 PM Jul 31, 2020 | mahesh |

ಚಿತ್ರಮಂದಿರಗಳು ಮುಚ್ಚಿ ನಾಲ್ಕು ತಿಂಗಳು ಕಳೆಯುತ್ತಾ ಬಂದಿದೆ. ಅಪ್ಪಟ ಸಿನಿಮಾ ಪ್ರೇಕ್ಷಕನಿಗೆ ತನ್ನ ನೆಚ್ಚಿನ ನಟನ ಸಿನಿಮಾಗಳನ್ನು ನೋಡುವ ತವಕ ಹೆಚ್ಚುತ್ತಿದೆ. ಆದರೆ, ಕೋವಿಡ್ ಮಾತ್ರ ಸದ್ಯಕ್ಕೆ ಅದಕ್ಕೆ ಅವಕಾಶ ಕೊಡುವ ಲಕ್ಷಣಗಳು ಕಾಣುತ್ತಿಲ್ಲ. ಆಗಸ್ಟ್‌ನಲ್ಲೂ ಚಿತ್ರಮಂದಿರಗಳು ತೆರೆಯುವ ಯಾವ ಸೂಚನೆಯೂ ಇಲ್ಲ. ಒಂದು ವೇಳೆ ಚಿತ್ರಮಂದಿರ ತೆರೆದರೂ ಈಗಲೇ ಸಿನಿಮಾ ಬಿಡುಗಡೆ ಮಾಡಲು ಅನೇಕ ನಿರ್ಮಾಪಕರು ಸಿದ್ಧರಿಲ್ಲ. ಜನರಲ್ಲಿ ಕೋವಿಡ್ ಭಯ ದೂರವಾದ ನಂತರವಷ್ಟೇ ಸಿನಿಮಾ ಬಿಡುಗಡೆ ಎನ್ನುತ್ತಿದ್ದಾರೆ. ಆದರೆ, ಸಿನಿಮಾ ಮಂದಿಗೆ ತಮ್ಮ ಸಿನಿಮಾಗಳನ್ನು ಚಾಲ್ತಿಯಲ್ಲಿ ಡೋದೇ ಒಂದು ಸವಾಲು. ಇಲ್ಲವಾದಲ್ಲಿ ಎಲ್ಲಿ ಪ್ರೇಕ್ಷಕ ತಮ್ಮ ಸಿನಿಮಾವನ್ನು ಮರೆತು ಬಿಡುತ್ತಾನೋ ಎಂಬ ಭಯ ಒಂದು ಕಡೆಯಾದರೆ, ಸಿನಿಮಾ ಅಪ್‌ಡೇಟ್ಸ್‌ ಗಾಗಿ ಕುತೂಹಲದಿಂದ ಎದುರು ನೋಡುತ್ತಿರುವ ಸಿನಿಪ್ರೇಮಿಗಳಿಗೆ ಹೊಸದನ್ನು ನೀಡುವ ಅನಿವಾರ್ಯತೆಯೂ ಸಿನಿಮಾ ಮಂದಿಗಿದೆ. ಅದೇ ಕಾರಣದಿಂದ ಒಂದಷ್ಟು ಚಿತ್ರತಂಡಗಳು ತಮ್ಮ ಚಿತ್ರದ ಹೊಸ ಪೋಸ್ಟರ್‌, ಫ‌ಸ್ಟ್‌ಲುಕ್‌, ಲಿರಿಕಲ್‌ ವಿಡಿಯೋ, ಹಾಡು, ಮೋಶನ್‌ ಪೋಸ್ಟರ್‌ … ಹೀಗೆ ಒಂದೊಂದನ್ನೇ ಬಿಡುಗಡೆ ಮಾಡುತ್ತಾ ಸಿನಿಮಾ ಅಪ್‌ಡೇಟ್ಸ್‌ ಕೊಡುತ್ತಿವೆ. ಇದಕ್ಕೆ ಹಬ್ಬ, ಹುಟ್ಟುಹಬ್ಬ, ವಿಶೇಷ ದಿನಗಳು ಒಂದು ನೆಪವಷ್ಟೇ.

Advertisement

ಇತ್ತೀಚೆಗೆ ಆ ತರಹ ಪೋಸ್ಟರ್‌, ಹಾಡು ಮೂಲಕ ಅಭಿಮಾನಿಗಳನ್ನು ಖುಷಿಪಡಿಸಿದ ಸಿನಿಮಾಗಳ ಬಗ್ಗೆ ಹೇಳ್ಳೋದಾದರೆ ಮುಖ್ಯವಾಗಿ ಪೊಗರು. ಧ್ರುವ ಸರ್ಜಾ ನಾಯಕರಾಗಿರುವ
ಪೊಗರು ಸಿನಿಮಾದ ಖರಾಬು ಸಾಂಗ್‌ ಲಾಕ್‌ಡೌನ್‌ ವೇಳೆಯಲ್ಲೇ ಬಿಡುಗಡೆಯಾಗಿ ದೊಡ್ಡ ಹಿಟ್‌ ಆಗಿದೆ. ಅದರಲ್ಲೂ ಮಾಸ್‌ ಅಭಿಮಾನಿಗಳ ಈ ಹಾಡಿಗೆ ಫಿದಾ ಆಗಿದ್ದಾರೆ. ಇನ್ನು ದರ್ಶನ್‌ ಅಭಿನಯದ “ರಾಬರ್ಟ್‌’ ಚಿತ್ರದ ಪೋಸ್ಟರ್‌ಗಳು ಕೂಡಾ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ. ಇತ್ತೀಚೆಗೆ ಆ ಚಿತ್ರದ ನಿರ್ಮಾಪಕ ಉಮಾಪತಿಯವರ ಹುಟ್ಟುಹಬ್ಬಕ್ಕೆ ರಾಬರ್ಟ್‌ ತಂಡ ಚಿತ್ರದ ಪೋಸ್ಟರ್‌ವೊಂದನ್ನು ಬಿಡುಗಡೆ ಮಾಡಿ ಶುಭಕೋರಿದೆ.

ಇನ್ನು, ಬಹುನಿರೀಕ್ಷಿತ ಕೆಜಿಎಫ್-2 ಚಿತ್ರದಲ್ಲಿ ಸಂಜಯ್‌ ದತ್‌ ಅವರ ಅಧೀರ ಪಾತ್ರದ ಲುಕ್‌ ಅನ್ನು ಬಿಡುಗಡೆ ಮಾಡಿದೆ. ಪುನೀತ್‌ ರಾಜ್‌ ಕುಮಾರ್‌ ಅವರ “ಯುವರತ್ನ’ ಚಿತ್ರದ
ಪೋಸ್ಟರ್‌ ಇಂದು (ಜುಲೈ 31) ಬಿಡುಗಡೆಯಾಗುತ್ತಿದೆ. ಇಷ್ಟೇ ಅಲ್ಲದೇ, ಇನ್ನೊಂದಿಷ್ಟು ಮಂದಿ ಹೊಸಬರು ಕೂಡಾ ತಮ್ಮ ಸಿನಿಮಾದ ಪೋಸ್ಟರ್‌, ಲಿರಿಕಲ್ ವೀಡಿಯೋ ಸಾಂಗ್
ಅನ್ನು ಬಿಡುಗಡೆ ಮಾಡಿವೆ. ಸಹಜವಾಗಿಯೇ ಒಂದು ಪ್ರಶ್ನೆ ಬರುತ್ತದೆ. ಅದೇನೆಂದರೆ ಇಡೀ ಚಿತ್ರರಂಗ ಸ್ತಬ್ಧವಾಗಿರುವ ಈ ಸಮಯದಲ್ಲಿ ಈ ತರಹ ಪೋಸ್ಟರ್‌ ಮತ್ತಿತರ ಅಂಶಗಳನ್ನು ಬಿಡುಗಡೆ ಮಾಡಿದರೆ ಅದರಿಂದ ಸಿನಿಮಾಗಳಿಗೆ ಲಾಭವಿದೆಯೇ ಎಂದು ನೀವು ಕೇಳಬಹುದು. ಇಲ್ಲಿ ಲಾಭ-ನಷ್ಟದ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಇಂತಹ ಸಮಯದಲ್ಲಿ ಸಿನಿಮಾವನ್ನು ಚಾಲ್ತಿಯಲ್ಲಿಡೋದು ಮುಖ್ಯ. ಪಕ್ಕಾ ಗಾಂಧಿನಗರದ ಭಾಷೆಯಲ್ಲಿ ಹೇಳ್ಳೋದಾದರೆ ಹವಾ ಮೆಂಟೇನ್‌ ಮಾಡೋದು!

ಇದೊಂಥರ ದೂರದೃಷ್ಟಿತ್ವದ ಲೆಕ್ಕಾಚಾರ ಎನ್ನಬಹುದು. ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಚಿತ್ರಮಂದಿರ ತೆರೆಯುತ್ತಿದ್ದಂತೆ ಸಾಲು ಸಾಲು ಸಿನಿಮಾಗಳು ಬಿಡುಗಡೆಯ ಸರತಿಯಲ್ಲಿ ನಿಲ್ಲಲಿವೆ. ಹಾಗಾಗಿ, ಪ್ರೇಕ್ಷಕನಿಗೆ ತಮ್ಮ ಸಿನಿಮಾಗಳ ಆಗು-ಹೋಗುಗಳನ್ನು ನೀಡುವ ಜವಾಬ್ದಾರಿ ಸಿನಿಮಾ ಮಂದಿಗಿದೆ. ಏಕೆಂದರೆ ಪ್ರೇಕ್ಷಕನಿಗೆ ಆಯ್ಕೆಗಳು ಹೆಚ್ಚಿವೆ ಮತ್ತು ಹೊಸ ಹೊಸ ಮನರಂಜನಾ ಮಾಧ್ಯಮಗಳು ಕೂಡಾ ತೆರೆದುಕೊಳ್ಳುತ್ತಿವೆ. ಈ ಎಲ್ಲಾ ಕಾರಣಗಳಿಂದಾಗಿ ಸಿನಿಮಾ ಮಂದಿ ತಮ್ಮ ಸಿನಿಮಾಗಳ ಅಪ್‌ ಡೇಟ್‌ಗೆ ಹೊಸ ಮಾರ್ಗ ಹುಡುಕುತ್ತಲೇ ಇರಬೇಕಾಗುತ್ತದೆ.

ರವಿ ಪ್ರಕಾಶ್‌ ರೈ

Advertisement
Advertisement

Udayavani is now on Telegram. Click here to join our channel and stay updated with the latest news.

Next