Advertisement

ವೈರಸ್‌ ತಡೆಯುವುದೇ ಸವಾಲು ; ಈ ಬಾರಿ ಹಜ್‌ ಯಾತ್ರೆ ಇಲ್ಲ?

03:09 PM Jun 17, 2020 | mahesh |

ರಿಯಾಧ್‌: ಕೋವಿಡ್‌ ಪ್ರಕರಣಗಳಿಗೆ ಯಾವುದೇ ಲಗಾಮು ಹಾಕಲು ಸಾಧ್ಯವಾಗದೇ ಇರುವುದರಿಂದ ಮತ್ತು ವಿಶ್ವಾದ್ಯಂತ ಸೋಂಕಿನ ಪ್ರಮಾಣ ಹೆಚ್ಚುತ್ತಿರುವುದರಿಂದ ಸುರಕ್ಷತೆ ದೃಷ್ಟಿಯಿಂದ ಈ ಬಾರಿ ಹಜ್‌ ಯಾತ್ರೆಯನ್ನು ನಡೆಸಲದೇ ಇರಲು ಸೌದಿ ಅರೇಬಿಯಾ ಚಿಂತನೆ ನಡೆಸಿದೆ.

Advertisement

ಒಂದು ವೇಳೆ ಹಜ್‌ ಯಾತ್ರೆ ರದ್ದುಗೊಂಡಿದ್ದೇ ಆದಲ್ಲಿ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಹಜ್‌ ಯಾತ್ರೆ ನಡೆಯದ ವರ್ಷವಾಗಿ ದಾಖಲೆ ಪುಟಕ್ಕೆ ಸೇರ್ಪಡೆಯಾಗಲಿದೆ. ಜುಲೈ ಅನಂತರದ ತಿಂಗಳಿನಲ್ಲಾದರೂ ಹಜ್‌ ಯಾತ್ರೆ ನಡೆಸುವುದು ಸಾಧ್ಯವೇ ಎಂಬ ಬಗ್ಗೆ ಹೇಳುವಂತೆ ಮುಸ್ಲಿಂ ರಾಷ್ಟ್ರಗಳು ರಿಯಾಧ್‌ ಮೇಲೆ ಒತ್ತಡ ಹೇರುತ್ತಿವೆ. ಈ ಬಾರಿ ಹಜ್‌ ಯಾತ್ರೆಯನ್ನು ರದ್ದು ಪಡಿಸುವುದು ಆ ದೇಶಗಳಿಗೆ ಅಷ್ಟು ಸಮರ್ಪಕವಾಗಿ ಕಂಡಿಲ್ಲ ಎಂದು ಹೇಳಲಾಗಿದೆ. ಆದರೆ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಆಗಮಿಸುವ ವೇಳೆ ಸಾಂಕ್ರಾಮಿಕ ಕಾಯಿಲೆ ಅಧ್ವಾನವನ್ನೇ ಸೃಷ್ಟಿಸಬಹುದು ಎಂಬ ಆತಂಕ ಸೌದಿ ಅರೇಬಿಯಾದ್ದಾಗಿದೆ. ಅಲ್ಲದೇ ಇದರಿಂದಾಗುವ ಆರ್ಥಿಕ ಹೊರೆ ಮತ್ತು ರಾಜಕೀಯ ಸಮಸ್ಯೆಗಳ ಬಗ್ಗೆ ಸೌದಿ ಅರೇಬಿಯಾ ಸ್ಪಷ್ಟವಾಗಿ ಇಳಿದುಕೊಂಡಿದ್ದು, ಈ ಹಿನ್ನೆಲೆಯಲ್ಲಿ ಯಾವುದೇ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ ಎಂಬ ತೀರ್ಮಾನವನ್ನು ಮಾಡಿದೆ ಎನ್ನಲಾಗಿದೆ.

ಹಜ್‌ ಯಾತ್ರೆಯ ವೇಳೆ ಸುಮಾರು 25 ಲಕ್ಷ ಮಂದಿ ಆಗಮಿಸುತ್ತಾರೆ. ವರ್ಷವೂ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಅವರ ನಿರ್ವಹಣೆ ಸುಲಭವಾದ್ದೇನಲ್ಲ. ಶೀಘ್ರ ಈ ಕುರಿತ ನಿರ್ಧಾರವನ್ನು ಪ್ರಕಟಿಸಲಾಗುವುದು ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ. ಆದರೆ ಇಡೀ ಯಾತ್ರೆ ರದ್ದು ಮಾಡುವುದು ಅಥವಾ ಅದನ್ನು ಆಯೋಜನೆ ಮಾಡುತ್ತೇವೆ ಎನ್ನುವುದೂ ಸಂದಿಗ್ಧದ ಪರಿಸ್ಥಿತಿ ಎಂದು ಅವರು ಹೇಳಿದ್ದಾರೆ. ಇತ್ತ ಅನೇಕ ರಾಷ್ಟ್ರಗಳು ಸೌದಿ ಅರೇಬಿಯಾದ ನಿರ್ಧಾರವನ್ನೂ ಎದುರು ನೋಡುತ್ತಿವೆ.

ಇತ್ತ ಅತಿ ಹೆಚ್ಚು ಮುಸ್ಲಿಮರನ್ನು ಹೊಂದಿರುವ ದೇಶವಾದ ಇಂಡೋನೇಷ್ಯಾ ಈ ಬಾರಿ ಯಾರನ್ನೂ ಯಾತ್ರೆಗೆ ತೆರಳಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದರೂ, ಸೌದಿ ತನ್ನ ನಿರ್ಧಾರ ತಿಳಿಸಬೇಕು ಎಂಬ ನಿರೀಕ್ಷೆಯಲ್ಲಿದೆ. ಮಲೇಷ್ಯಾ, ಸೆನೆಗಲ್‌, ಟರ್ಕಿ, ಈಜಿಪ್ಟ್, ಲೆಬನಾನ್‌, ಬಲ್ಗೇರಿಯಾಗಳೂ ಇದೇ ನಿರೀಕ್ಷೆಯಲ್ಲಿವೆ. ಫ್ರಾನ್ಸ್‌ ಧರ್ಮ ಗುರುಗಳು ಮುಸ್ಲಿ ಮರು ಮುಂದಿನ ವರ್ಷದವರೆಗೆ ಯಾತ್ರೆ ಮುಂದೂಡಬೇಕು ಎಂಬ ಆಗ್ರಹ ವನ್ನು ಮಂಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next