Advertisement

ಅಸ್ಪ್ರಶ್ಯತೆ ನಿರ್ಮೂಲನೆಯೇ ಸವಾಲು

02:48 PM Aug 20, 2019 | Team Udayavani |

ಚಿತ್ರದುರ್ಗ: ಡಾ| ಬಾಬು ಜಗಜೀವನರಾಮ್‌ ದೇಶದ ಪ್ರಧಾನಿಯಾಗಬೇಕಿತ್ತು. ಆದರೆ ಜಾತಿ ರಾಜಕಾರಣದ ಕಾರಣಕ್ಕೆ ಅವಕಾಶ ಕಳೆದುಕೊಂಡರು ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಡಾ| ಬಾಬು ಜಗಜೀವನರಾಮ್‌ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಾಗೂ ಚಿತ್ರದುರ್ಗದ ಬಾಪೂಜಿ ಸಮೂಹ ಸಂಸ್ಥೆಗಳ ಸಹಯೋಗದಲ್ಲಿ ಸೋಮವಾರ ನಡೆದ ಡಾ| ಬಾಬು ಜಗಜೀವನರಾಮ್‌ ಅವರ ಜೀವನ ಮತ್ತು ಸಾಧನೆ ಕುರಿತ ಉಪನ್ಯಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶರಣರು ಆಶೀರ್ವಚನ ನೀಡಿದರು.

ಜಾತಿ ಹಾಗೂ ಮೂಲಭೂತ ವಾದ ಅನೇಕರನ್ನು ಅಧಿಕಾರ ವಂಚಿತರನ್ನಾಗಿ ಮಾಡಿದೆ. ಅದರಲ್ಲಿ ಬಾಬೂಜಿ ಕೂಡ ಒಬ್ಬರು. ಅಸ್ಪ್ರಶ್ಯತೆಯ ಕೆಸರಿನಲ್ಲಿ ಅರಳಿದ ತಾವರೆಯಾಗಿದ್ದಾರೆ. ಅಸ್ಪ್ರತೆಯಂತಹ ಸಮಸ್ಯೆ ಎಲ್ಲಾ ಕಾಲ, ದೇಶ, ಆಡಳಿತಕ್ಕೂ ಸವಾಲಾಗಿವೆ. ಇದುವರೆಗೆ ಯಾರೂ ಅದನ್ನು ಬೇರು ಸಹಿತ ಕಿತ್ತು ಹಾಕಲು ಸಾಧ್ಯವಾಗಿಲ್ಲ ಎಂದರು.

ಬಸವ ಯುಗದಲ್ಲಿ ಕುಲ ಹಾಗೂ 18 ಜಾತಿಗಳ ನಾಯಕರು ಒಂದೇ ಸೂರಿನಡಿ ಕುಳಿತು ಚರ್ಚಿಸುತ್ತಿದ್ದರು. ಆನಂತರ ಅಂತಹ ವಾತಾವರಣ ಎಲ್ಲಿಯೂ ಕಾಣಸಿಗಲಿಲ್ಲ. ನಂತರ ಬಂದ ಗಾಂಧೀಜಿ ಸರ್ವೋದಯಕ್ಕೆ ಚಾಲನೆ ನೀಡಿದರು. ಬಸವ ಯುಗ ಮತ್ತು ಗಾಂಧಿ ಯುಗದಲ್ಲಿ ಜಾತಿ ವಿನಾಶಕ್ಕೆ ಒಂದಷ್ಟು ಪ್ರಯೋಗಗಳು ನಡೆದಿವೆ. ಈ ಇಬ್ಬರ ಧೈರ್ಯ ಮತ್ತು ಸಾಮರ್ಥ್ಯವನ್ನು ಮೆಚ್ಚಬೇಕು. ಆನಂತರ ಬಂದ ಜಯಪ್ರಕಾಶ್‌ ನಾರಾಯಣ್‌ ರಾಜಕೀಯ ಧ್ರುವೀಕರಣ ಮಾಡಿದರು ಎಂದು ತಿಳಿಸಿದರು.

ಸರ್ಕಾರಿ ಕಲಾ ಕಾಲೇಜು ಸ್ನಾತಕೋತ್ತರ ವಿಭಾಗದ ಕನ್ನಡ ಪ್ರಾಧ್ಯಾಪಕ ಪ್ರೊ| ಜೆ. ಕರಿಯಪ್ಪ ಮಾಳಿಗೆ ಮಾತನಾಡಿ, ಉನ್ನತ ಶಿಕ್ಷಣ ಹಾಗೂ ವ್ಯಕ್ತಿತ್ವದಿಂದ ದೇಶದ ಉನ್ನತ ಹುದ್ದೆಯನ್ನು ಪಡೆಯಲು ಸಾಧ್ಯ. ಬುದ್ಧನ ನಾಡು ಬಿಹಾರದ ಹಿಂದುಳಿದ ಜಿಲ್ಲೆಯಲ್ಲಿ ಜನಿಸಿದ ಬಾಬೂಜಿ, ದೇಶದ ಪ್ರತಿಷ್ಠಿತ ಹಿಂದು ವಿಶ್ವವಿದ್ಯಾಲಯದಲ್ಲಿ ವಿಜ್ಞಾನ ಪದವಿ ಪಡೆದಿದ್ದರು ಎಂದರು.

Advertisement

ಸ್ವಾತಂತ್ರ್ಯ ಪೂರ್ವ ಹಾಗೂ ನಂತರದ ಭಾರತದಲ್ಲಿ ಹಲವು ಬಗೆಯ ಹೋರಾಟಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಮತ್ತು ಬೆಳಗಿಕೊಂಡ ಕೆಲವೇ ಕೆಲವು ಪ್ರಮುಖರಲ್ಲಿ ಬಾಬು ಜಗಜೀವನರಾಮ್‌ ಪ್ರಮುಖರು. ದೇಶದ ಶ್ರೇಣಿಕೃತ ವ್ಯವಸ್ಥೆಯಲ್ಲಿನ ಜಾತಿ ಪದ್ಧತಿಗಳಿಂದ ಅನೇಕ ಅವಮಾನ, ಶೋಷಣೆ ಅನುಭವಿಸಿ ಹಿಂದುಳಿದ ಮತ್ತು ದಲಿತ ಸಮುದಾಯಗಳ ಪರ, ಜಾತಿ ವ್ಯವಸ್ಥೆ ವಿರುದ್ಧ, ದಬ್ಟಾಳಿಕೆ, ದೌರ್ಜನ್ಯಗಳ ವಿರುದ್ಧ ನಿರಂತರ ಹೋರಾಟ ಮಾಡಬೇಕೆಂದು ಕರೆ ನೀಡಿದ್ದರು ಎಂದು ತಿಳಿಸಿದರು.

ಡಾ| ಬಿ.ಆರ್‌. ಅಂಬೇಡ್ಕರ್‌ ಅವರ ಸಂವಿಧಾನ ಆಶಯಗಳನ್ನು ಜಗಜೀವನರಾಮ್‌ ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತಂದರು. ಕೃಷಿ ಮತ್ತು ಆಹಾರ ಸಚಿವರಾಗಿದ್ದಾಗ ಹಸಿದಿದ್ದ ದೇಶದ ಒಡಲನ್ನು ತುಂಬಿಸಿ ಹಸಿರು ಕ್ರಾಂತಿಯ ಹರಿಕಾರರಾದರು ಎಂದರು.

ಡಾ| ಬಾಬು ಜಗಜೀವನರಾಮ್‌ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ| ಶರಣಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ| ಎಸ್‌. ವಿದ್ಯಾಶಂಕರ್‌, ಬಾಪೂಜಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಕೆ.ಎಂ. ವೀರೇಶ್‌, ಎಸ್‌ಆರ್‌ಎಸ್‌ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ರವಿ, ಪ್ರಾಚಾರ್ಯೆ ಪ್ರೊ| ಎಂ.ಆರ್‌. ಜಯಲಕ್ಷ್ಮೀ ಉಪಸ್ಥಿತರಿದ್ದರು.

ಇಂದಿನ ರಾಜಕೀಯ ಪಕ್ಷಗಳು ಅಧಿಕಾರಕ್ಕಾಗಿ ಏನೆಲ್ಲಾ ಅನಾಚಾರ ಮಾಡುವುದನ್ನು ನೋಡಿದ್ದೇವೆ. ಆದರೆ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸ್ವಾತಂತ್ರ್ಯಾ ನಂತರ ದೇಶಕ್ಕಾಗಿ ಎಲ್ಲಾ ಪಕ್ಷಗಳು ಒಂದಾಗಿ ಅಧಿಕಾರ ನಡೆಸಿದ್ದವು. ಈ ವೇಳೆ ಬಾಬು ಜಗಜೀವನರಾಮ್‌ ಉಪಪ್ರಧಾನಿಯಾಗಿ ದೇಶಕ್ಕೆ ಸ್ಪಷ್ಟ ದಿಕ್ಕು ತೋರಿದ್ದರು.• ಡಾ| ಶಿವಮೂರ್ತಿ ಮುರುಘಾ ಶರಣರು.

Advertisement

Udayavani is now on Telegram. Click here to join our channel and stay updated with the latest news.

Next