Advertisement
ತಿಂಗಳಿಗೆ ಬೇಕಾಗುವ ಸಾಮಗ್ರಿಗಳನ್ನು ಗ್ರಾಂ ಲೆಕ್ಕದಲ್ಲಿ ಹಂಚಿಕೆ ಮಾಡಲಾಗಿದ್ದು ಇದನ್ನು ತೂಕ ಮಾಡಿ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸುವುದು ಈಗ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ಸವಾಲಾಗಿದೆ. ಕೋವಿಡ್-19 ಕರ್ತವ್ಯದ ಜತೆ ಆಹಾರ ಸಾಮಗ್ರಿಗಳನ್ನು ಗ್ರಾಂ ಲೆಕ್ಕದಲ್ಲಿ ತೂಕ ಮಾಡುವ ಹೊಣೆಗಾರಿಕೆಯೂ ಕಾರ್ಯಕರ್ತೆಯರ ಮೇಲಿದೆ.
3ರಿಂದ 6 ವರ್ಷ ವಯಸ್ಸಿನ ಮಗುವಿಗೆ ತಿಂಗಳೊಂದಕ್ಕೆ ಹಾಲಿನ ಪುಡಿ 0.390 ಗ್ರಾಂ., ಸಕ್ಕರೆ 130 ಗ್ರಾಂ, ಅಕ್ಕಿ 1.560 ಕೆಜಿ, ತೊಗರಿಬೇಳೆ 0.153 ಗ್ರಾಂ, ಉಪ್ಪು 0.052 ಗ್ರಾಂ, ಮೆಣಸು 0.026, ಸಾಸಿವೆ 0.034 ಇತ್ಯಾದಿ ನೀಡಲಾಗುತ್ತಿದೆ. ಮಾತೃಪೂರ್ಣ ಯೋಜನೆಯಡಿ ಗರ್ಭಿಣಿ/ಬಾಣಂತಿಗೆ ತಿಂಗಳೊಂದಕ್ಕೆ ಹಾಲಿನ ಪುಡಿ 0.520 ಗ್ರಾಂ, ಅಕ್ಕಿ 3.900 ಕೆಜಿ, ಸಕ್ಕರೆ 0.130 ಗ್ರಾಂ, ಬೆಲ್ಲ 0.598 ಗ್ರಾಂ, ಮೆಣಸು 0.026 ಗ್ರಾಂ, ಸಾಸಿವೆ 0.017 ಗ್ರಾಂ, ಎಣ್ಣೆ 0.078 ಗ್ರಾಂ, ಉಪ್ಪು 0.078 ಗ್ರಾಂ ಇತ್ಯಾದಿಗಳನ್ನು ನೀಡಬೇಕಾಗಿದೆ. ಪ್ಯಾಕೆಟ್ ಬದಲು ಚಿಲ್ಲರೆ
“ಮೇ ತಿಂಗಳಿನಲ್ಲಿ ಮಾತೃಪೂರ್ಣ ಯೋಜನೆಯಡಿ ಪ್ರತಿ ಫಲಾನುಭವಿಗೆ 8.5 ಕೆಜಿ ಅಕ್ಕಿ, ಅರ್ಧ ಕೆಜಿ ನೆಲಗಡಲೆ, ಅರ್ಧ ಕೇಜಿ ಬೇಳೆಯನ್ನೊಳಗೊಂಡ ಪ್ಯಾಕೆಟ್ ನೀಡಲಾಗಿತ್ತು. ಆದರೆ ಜೂನ್‌ನಲ್ಲಿ ಸಾಮಗ್ರಿಗಳನ್ನು ಬಿಡಿಬಿಡಿಯಾಗಿ ನೀಡಲಾಗಿದೆ. ಈ ರೀತಿ ಎಲ್ಲ ಸಾಮಗ್ರಿಗಳನ್ನು ಅತೀ ಕಡಿಮೆ ಪ್ರಮಾಣದಲ್ಲಿ ನೀಡುವ ಬದಲು ಮುಖ್ಯವಾದ ಕೆಲವು ಸಾಮಗ್ರಿಗಳನ್ನು ಒಂದು ಪ್ಯಾಕೆಟ್‌ನಲ್ಲಿ ನೀಡಬಹುದು. ಉಳಿದ ಸಣ್ಣಪುಟ್ಟ ಸಾಮಗ್ರಿಗಳು ಸಾಮಾನ್ಯವಾಗಿ ಹೆಚ್ಚಿನವರ ಮನೆಗಳಲ್ಲಿ ಇರುವುದರಿಂದ ಅವುಗಳನ್ನೇ ಬಳಸಿಕೊಳ್ಳಬಹುದು. ಮುಂದಿನ ತಿಂಗಳಿನಿಂದ ಸರಕಾರ ಪ್ಯಾಕೆಟ್‌ನಲ್ಲಿಯೇ ಆಹಾರ ಸಾಮಗ್ರಿಗಳನ್ನು ನೀಡಿದರೆ ವಿತರಣೆಗೆ ಅನುಕೂಲ. ಗ್ರಾಂ ಲೆಕ್ಕದಲ್ಲಿ ತೂಕ ಮಾಡುವುದು ದೊಡ್ಡ ಸವಾಲಿನ ಕೆಲಸವಾಗಿದೆ’ ಎನ್ನುತ್ತಾರೆ ಕಾರ್ಯಕರ್ತೆಯರು.
Related Articles
ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರಂತೆ ಕೋವಿಡ್-19 ನಿಯಂತ್ರಣ, ಪತ್ತೆ ಕಾರ್ಯದಲ್ಲಿ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆಯ ಜತೆ ಕೈ ಜೋಡಿಸಿದ್ದಾರೆ. ವಿವಿಧ ರೀತಿಯ ಸಮೀಕ್ಷೆಗಳಲ್ಲೂ ಇದ್ದಾರೆ. ಇದರ ನಡುವೆ ಪ್ರತಿ ಮಗು, ಗರ್ಭಿಣಿ, ಬಾಣಂತಿಯರಿಗೆ ಪೌಷ್ಟಿಕ ಆಹಾರ ತಲುಪಿಸುತ್ತಿದ್ದಾರೆ. ಮಕ್ಕಳಿಗೆ ಚುಚ್ಚುಮದ್ದು ಒದಗಿಸುವುದು, ಮಾತೃವಂದನಾ ಯೋಜನೆಗೆ ಫಲಾನುಭವಿಗಳನ್ನು ನೋಂದಣಿ ಮಾಡಿಕೊಳ್ಳುವುದು ಮೊದಲಾದ ಕೆಲಸಗಳೂ ಅವರದೇ. ಇದರ ನಡುವೆಯೂ ಕ್ಲಪ್ತ ಸಮಯದಲ್ಲಿ ಫಲಾನುಭವಿಗಳಿಗೆ ಆಹಾರ ತಲುಪಿಸಲಾಗುತ್ತಿದೆ ಎನ್ನುತ್ತಾರೆ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಮುಂದಾಳುಗಳು.
Advertisement
ಪ್ಯಾಕೆಟ್‌ನಲ್ಲಿಯೇ ನೀಡಿಆಹಾರ ಸಾಮಗ್ರಿಗಳನ್ನು ಪ್ರತಿಯೊಬ್ಬರಿಗೂ ಗ್ರಾಂ ಲೆಕ್ಕದಲ್ಲಿ ತೂಕ ಮಾಡಿಕೊಡುವುದು ಒಂದು ರೀತಿಯ ಸವಾಲು. ಪ್ಯಾಕೆಟ್‌ನಲ್ಲಿಯೇ ನೀಡಿದರೆ ಉತ್ತಮ. ಅಂಗನವಾಡಿ ಕಾರ್ಯರ್ತೆಯರಿಗೂ ವಿಶೇಷ ಪ್ಯಾಕೇಜ್ ನೀಡಲು, ಬಾಕಿ ಇರುವ ಗೌರವಧನ ಬಿಡುಗಡೆ ಮಾಡಲು ಸರಕಾರವನ್ನು ಒತ್ತಾಯಿಸಿದ್ದೇವೆ.
- ಜಯಲಕ್ಷ್ಮೀ ಬಿ.ಆರ್., ರಾಜ್ಯಾಧ್ಯಕ್ಷೆ,
ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಸಂಘ