Advertisement

ಮಂಗಳೂರು-ಬೆಂಗಳೂರು ರೈಲು ಮಾರ್ಗ: ಗುಡ್ಡ ಕುಸಿದರೆ ತೆರವುಗೊಳಿಸುವುದೇ ಸವಾಲು

12:02 PM Jul 08, 2019 | keerthan |

ಸುಬ್ರಹ್ಮಣ್ಯ : ಬೆಂಗಳೂರು- ಮಂಗಳೂರು ನಡುವೆ ಪ್ರತೀ ವರ್ಷ ಮಳೆಗಾಲದಲ್ಲಿ ರೈಲು ಸಂಚಾರ ಅನುಮಾನ. ಇದಕ್ಕೆ ಕಾರಣ ಪಶ್ಚಿಮ ಘಟ್ಟದ ಮೂಲಕ ಹಾದುಹೋಗುವ ರೈಲು ಮಾರ್ಗದಲ್ಲಿ ಗುಡ್ಡ ಕುಸಿತ.

Advertisement

ಸಕಲೇಶಪುರ – ಸುಬ್ರಹ್ಮಣ್ಯ ರೈಲು ಮಾರ್ಗದ ಮಧ್ಯೆ ಕಳೆದ ಬಾರಿ ಅತಿವೃಷ್ಟಿ ಸಂದರ್ಭ 65 ಕಡೆ ಭೂಕುಸಿತ ಸಂಭವಿಸಿ ತಿಂಗಳುಗಟ್ಟಲೆ ರೈಲು ಓಡಾಟ ಸ್ಥಗಿತಗೊಂಡಿತ್ತು. ಮಾರ್ಗದ ಎರಡೂ ಕಡೆ ಗುಡ್ಡಗಳು ಈಗಲೂ ಬಾಯೆ¤ರೆದೇ ಇವೆ. ಹೀಗಾಗಿ ಈ ಬಾರಿಯೂ ಮಳೆ ಜೋರಾದಾಗ ಭೂಕುಸಿತ ಪುನರಾವರ್ತನೆಯಾಗುವ ಸಾಧ್ಯತೆ ಹೆಚ್ಚು.

ದೊಡ್ಡ ಸವಾಲು
ಈ ರೈಲು ಮಾರ್ಗ ನಿರ್ಮಾಣವಾದ ಬಳಿಕ ಇಷ್ಟು ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದಿರಲಿಲ್ಲ. ಸಿರಿಬಾಗಿಲು, ಎಡಕುಮೇರಿ, ಕಡಗರಹಳ್ಳ, ದೋಣಿಗಲ್‌ -ಅತೀ ಹೆಚ್ಚು ಗುಡ್ಡ ಕುಸಿತ ಅನುಭವಿಸಿದ ಪ್ರದೇಶಗಳಿವು. ಹಳಿ ಮೇಲೆ ಬಿದ್ದ ಮಣ್ಣು ತೆರವು ಮಾಡಿ ಹಳಿಯನ್ನು ಪೂರ್ವ ಸ್ಥಿತಿಗೆ ತರುವುದು ರೈಲ್ವೇ ಇಲಾಖೆಗೆ ದೊಡ್ಡ ಸವಾಲು.

ಹಳಿ ಮೇಲೆ ಬಂಡೆಕಲ್ಲುಗಳು
ಮಣ್ಣಿನ ಜತೆಗೆ ಬಂಡೆಕಲ್ಲುಗಳು ಬೀಳುವುದರಿಂದ ಹಳಿಗಳು ಸಂಪೂರ್ಣ ನಾಶವಾಗುತ್ತವೆ. ಹಿಟಾಚಿ ಮತ್ತು ಕಾರ್ಮಿಕರ ಸಹಾಯದಿಂದ ತೆರವು, ದುರಸ್ತಿ ನಡೆಸಬೇಕು. ಮಳೆ ಸುರಿಯುವಾಗ ಹಿಟಾಚಿ ಯಂತ್ರಗಳನ್ನು ಮಣ್ಣು ಕುಸಿದಲ್ಲಿಗೆ ಒಯ್ಯುವುದು ಕೂಡ ಸವಾಲೇ ಸರಿ. ಸ್ಥಳವು ಇಕ್ಕಟ್ಟಾಗಿದ್ದರೆ, ಅಕ್ಕಪಕ್ಕ ಪ್ರಪಾತಗಳಿದ್ದರೆ ಜಾಗದ ಕೊರತೆಯಿಂದ ಟಿಪ್ಪರ್‌ ಬಳಸಿ ಮಣ್ಣು ಸ್ಥಳಾಂತರಿಸುವುದಕ್ಕೂ ಸಾಧ್ಯವಾಗದು.

ಸವಾಲುಗಳು ಏನೇನು?
ಹಳಿ ಮೇಲೆ ಬಿದ್ದ ಮಣ್ಣು, ಬಂಡೆಗಲ್ಲು ತೆರವು ಕಷ್ಟದ ಕೆಲಸ. ಕಾಡಾನೆಗಳ ಭಯ ಇನ್ನೊಂದೆಡೆ. ಕೆಲಸ ಮಾಡುತ್ತಿರುವಾಗಲೇ ಮತ್ತೆ ಗುಡ್ಡ ಕುಸಿಯುವ ಭೀತಿ. ಒಂದು ಕಡೆ ಮಣ್ಣು ತೆರವುಗೊಳಿಸಿ ಇನ್ನೊಂದೆಡೆಗೆ ಹೋದಾಗ ದಾರಿಯಲ್ಲಿ ಮಣ್ಣು ಕುಸಿದು ಕಾರ್ಮಿಕರು, ಅಧಿಕಾರಿಗಳು ದಿಗ್ಬಂಧನಕ್ಕೆ ಒಳಗಾದ ಉದಾಹರಣೆಗಳೂ ಇವೆ. ಮಣ್ಣು ತೆರವು ಮಾಡಿದ ಬಳಿಕ ಹಳಿ ದುರಸ್ತಿಯಾಗಬೇಕು. ಆಮೇಲೆ ಪ್ರಾಯೋಗಿಕ ಸಂಚಾರ ನಡೆಸಿಯೇ ರೈಲು ಸಂಚಾರಕ್ಕೆ ಅಧಿಕಾರಿಗಳು ಅನುಮತಿ ನೀಡುತ್ತಾರೆ.

Advertisement

2 ಎಕರೆ ಗುಡ್ಡ ಜರಿದಿತ್ತು
ಸುಬ್ರಹ್ಮಣ್ಯ-ಸಕಲೇಶಪುರ ರೈಲು ಮಾರ್ಗದ ಸಿರಿಬಾಗಿಲು ಮಾರ್ಗ 86ರ ಬಳಿ ಕಳೆದ ವರ್ಷ ಭಾರೀ ಗಾತ್ರದ ಗುಡ್ಡ ಜರಿದು ಮಣ್ಣು ಮತ್ತು ಬಂಡೆಗಲ್ಲು ರೈಲು ಸುರಂಗದ ಮೇಲೆ ಬಿದ್ದಿತ್ತು. 170 ಮೀ. ಉದ್ದದ ಸುರಂಗ ಸಂಪೂರ್ಣ ಮುಚ್ಚಿತ್ತು. ಮೇಲ್ಭಾಗದಲ್ಲಿ 25 ಮೀ.ನಷ್ಟು ಎತ್ತರಕ್ಕೆ ಮಣ್ಣು ಆವರಿಸಿತ್ತು. ಆಗ ಸುಮಾರು ಎರಡು ಎಕ್ರೆ ವಿಸ್ತಾರದಲ್ಲಿ ಗುಡ್ಡ ಜರಿದುದು ಗುಡ್ಡ ಕುಸಿತ ಘಟನೆಯ ತೀವ್ರತೆಗೆ ಸಾಕ್ಷಿ.

ಕಟ್ಟೆಚ್ಚರ ವಹಿಸಲಾಗುತ್ತಿದೆ
ಸುಬ್ರಹ್ಮಣ್ಯ-ಸಕಲೇಶಪುರ ರೈಲು ಮಾರ್ಗದಲ್ಲಿ ಗುಡ್ಡ ಜರಿತ ಕುರಿತು ನಿಗಾ ವಹಿಸಲಾಗುತ್ತಿದೆ. ರಾತ್ರಿ ಹೊತ್ತು ಪೆಟ್ರೋಲ್‌ ಮ್ಯಾನ್‌ ನಿಯೋಜಿಸಲಾಗಿದೆ. ಇಲಾಖೆಯ ತಾಂತ್ರಿಕ ಅಧಿಕಾರಿಗಳು ಮಾರ್ಗದ ಸುರಕ್ಷತೆ ಮತ್ತು ಗುಣಮಟ್ಟ ಪರಿಶೀಲನೆಯ ಕುರಿತು ಕಟ್ಟೆಚ್ಚರ ವಹಿಸುತ್ತಿದ್ದಾರೆ.
– ಗೋಪಿನಾಥ್‌ ರೈಲ್ವೇ ಅಧಿಕಾರಿ, ಮೈಸೂರು ರೈಲ್ವೇ ವಿಭಾಗ

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next