Advertisement

ಸವಾಲು ಮೆಟ್ಟಿನಿಂತ ಮಾಡೆರ್ನಾ

01:17 AM Nov 18, 2020 | mahesh |

ಹೊಸದಿಲ್ಲಿ: ಸದ್ಯದಲ್ಲೇ ಲಭ್ಯವಾಗಲಿರುವ ಅಮೆರಿಕದ ಮಾಡೆರ್ನಾ ಲಸಿಕೆಯು ಕೋವಿಡ್ ವಿರುದ್ಧ ಶೇ.94.5ರಷ್ಟು ಪರಿಣಾಮಕಾರಿ ಎಂಬುದು ಮಾನವನ ಮೇಲಿನ ಪ್ರಯೋಗ­ದಿಂದ ಸಾಬೀತಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಅಷ್ಟೇ ಅಲ್ಲ, ಕೊರೊನಾ ಲಸಿಕೆಗೆ ಸಂಬಂಧಿಸಿದ ಅತಿ ದೊಡ್ಡ ಸವಾಲಾದ “ಅಲ್ಟ್ರಾ ಕೋಲ್ಡ್‌ ಟೆಂಪರೇಚರ್‌'(ಅತ್ಯಧಿಕ ಶೀತ ತಾಪಮಾನ) ವಿಚಾರದಲ್ಲೂ ಒಂದು ಹೆಜ್ಜೆ ಮುಂದಿರುವುದಾಗಿ ಮಾಡೆರ್ನಾ ಹೇಳಿದೆ. ಈ ಲಸಿಕೆಯು 30 ದಿನಗಳ ಕಾಲ ಫ್ರಿಜ್‌ನಲ್ಲಿ ಸುರಕ್ಷಿತವಾಗಿ­ರುತ್ತದೆ. ಅಲ್ಲದೆ, ಇದನ್ನು ದೀರ್ಘ‌ಕಾಲದ ಬಳಕೆಗಾಗಿ ಸಾಮಾನ್ಯ ಫ್ರೀಜರ್‌ನಲ್ಲೂ ಇಡಬಹುದು ಎಂದು ಕಂಪನಿ ಹೇಳಿದೆ.

Advertisement

ಭಾರತದಿಂದ ಆಫ್ರಿಕಾದವರೆಗೆ ಹಲವು ದೇಶಗಳಲ್ಲಿ ಲಸಿಕೆಯನ್ನು ಕುಗ್ರಾಮಗಳಿಗೆ ತಲುಪಿಸುವುದು ಕಷ್ಟದ ಕೆಲಸ. ಪೂರೈಕೆ ಹಾಗೂ ಸಾಗಣೆ ಸಮಸ್ಯೆಯ ಜೊತೆಗೆ “ಲಸಿಕೆಯನ್ನು ಸುರಕ್ಷಿತವಾಗಿಡುವ ತಾಪಮಾನ’ದ್ದೇ ದೊಡ್ಡ ಸವಾಲು. “ಮಂಜುಗಡ್ಡೆಯಂತೆ ಗಟ್ಟಿಯಾದ ಮಾಂಸ’­ಕ್ಕಿಂತಲೂ ಅತ್ಯಧಿಕ ತಾಪಮಾನದಲ್ಲಿಟ್ಟರೆ ಮಾತ್ರವೇ ಲಸಿಕೆ ಸುರಕ್ಷಿತವಾಗಿರುತ್ತದೆ. ಹೀಗಾಗಿ, ಮಾಡೆರ್ನಾ ವ್ಯಾಕ್ಸಿನ್‌ ಹೊಸ ಭರವಸೆ ಮೂಡಿಸಿದೆ. ಕಳೆದ ವಾರ ಘೋಷಿಸಲ್ಪಟ್ಟ ಫೈಜರ್‌ ಲಸಿಕೆಯನ್ನು ಮೈನಸ್‌ 70 ಡಿಗ್ರಿಯಲ್ಲಿ ಇಟ್ಟರಷ್ಟೇ ಅದು ಸುರಕ್ಷಿತವಾಗಿರುತ್ತದೆ ಮತ್ತು ರೆಫ್ರಿಜರೇಟರ್‌ನಲ್ಲೂ ಅದರ ಬಾಳಿಕೆ ಕೇವಲ 5 ದಿನಗಳಷ್ಟೇ ಎಂದು ಕಂಪನಿ ಹೇಳಿತ್ತು. ಇದೇ ವೇಳೆ, ಕೆಲವೇ ದಿನಗಳಲ್ಲಿ ಆಸ್ಟ್ರಜೆನಿಕಾ ಕಂಪನಿಯು ತನ್ನ ಲಸಿಕೆಯ ದತ್ತಾಂಶವನ್ನು ಬಿಡುಗಡೆ ಮಾಡಲಿದೆ.

4 ತಿಂಗಳಲ್ಲೇ ಗಣನೀಯ ಇಳಿಕೆ: ಕಳೆದ 4 ತಿಂಗಳಲ್ಲೇ ದೇಶದ ದೈನಂದಿನ ಸೋಂಕಿತರ ಸಂಖ್ಯೆ 30 ಸಾವಿರದಿಂದ ಕೆಳಗಿಳಿದಿದ್ದು, ಸೋಮವಾರದಿಂದ ಮಂಗಳವಾರಕ್ಕೆ 29,163 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಅವಧಿಯಲ್ಲಿ449 ಮಂದಿ ಮೃತಪಟ್ಟಿದ್ದು, ಅಸುನೀಗಿದವರ ಸಂಖ್ಯೆ 1,30,519 ಆಗಿದೆ. ಈ ಹಿಂದೆ ಜು.15ರಂದು ಸೋಂಕಿತರ ಸಂಖ್ಯೆ 30 ಸಾವಿರಕ್ಕಿಂತ ಕಡಿಮೆಯಿತ್ತು.

ಕೊರೊನಾ ವಕ್ಕರಿಸಿ ವರ್ಷ ಪೂರ್ಣ ಜಗತ್ತನ್ನೇ ಅಲ್ಲೋಲಕಲ್ಲೋಲ ವಾಗಿಸಿದ, ಮನುಕುಲವನ್ನೇ ನರಕಕ್ಕೆ ದೂಡಿದ ಕೊರೊನಾ ಸೋಂಕು ಚೀನದ ವುಹಾನ್‌ನಲ್ಲಿ ಪತ್ತೆಯಾಗಿ ಮಂಗಳವಾರಕ್ಕೆ ವರ್ಷ ತುಂಬಿದೆ. ವುಹಾನ್‌ನ ವನ್ಯಜೀವಿ ಮಾರುಕಟ್ಟೆಯಲ್ಲಿ 2019ರ ನವೆ ಂಬರ್‌ 17ರಂದು 55 ವರ್ಷದ ವ್ಯಕ್ತಿಯ ದೇಹ ಪ್ರವೇಶಿಸಿದ ಕೋವಿಡ್‌-19 ವೈರಸ್‌, ನಂತರದಲ್ಲಿ 190 ದೇಶಗಳನ್ನು ಆವರಿಸಿ, 13 ಲಕ್ಷಕ್ಕೂ ಅಧಿಕ ಮಂದಿಯನ್ನು ಬಲಿಪಡೆದಿದೆ. ಜಗತ್ತಿನಾದ್ಯಂತ 5 ಕೋಟಿಗೂ ಅಧಿಕ ಮಂದಿಯನ್ನು ಈ ಸೋಂಕು ಬಾಧಿಸಿದೆ.

ಪ್ರಮುಖ ಲಸಿಕೆಗಳು
ಫೈಜರ್‌/ಬಯೋನ್‌ಟೆಕ್‌
ಎಷ್ಟು ಪರಿಣಾಮಕಾರಿ? 90%
ಬಳಕೆಗೆ ಸಿದ್ಧ- ಡಿಸೆಂಬರ್‌ 2020
3ನೇ ಹಂತದ ಪ್ರಯೋಗ ಆರಂಭ- ಜುಲೈ

Advertisement

ಸ್ಪುಟ್ನಿಕ್‌ 5/ಗಮಲೇಯಾ ಸಂಶೋಧನಾ ಸಂಸ್ಥೆ
ಎಷ್ಟು ಪರಿಣಾಮಕಾರಿ? 92%
ಸಂಗ್ರಹಿಸಲು ಬೇಕಾದ ತಾಪಮಾನ 2- 80c
ಬಳಕೆಗೆ ಸಿದ್ಧ- ಡಿಸೆಂಬರ್‌ 2020 (ಭಾರತದಲ್ಲಿ 3ನೇ ಹಂತದ ಪ್ರಯೋಗ 2021ರ ಮಾರ್ಚ್‌ನಲ್ಲಿ ಪೂರ್ಣ)
3ನೇ ಹಂತದ ಪ್ರಯೋಗ ಆರಂಭ- ಆಗಸ್ಟ್‌

ಆಸ್ಟ್ರಜೆನಿಕಾ/ಆಕ್ಸ್‌ಫ‌ರ್ಡ್‌ ವಿವಿ
ಎಷ್ಟು ಪರಿಣಾಮಕಾರಿ?- ಮಾಹಿತಿ ಬಹಿರಂಗವಾಗಿಲ್ಲ
ಸಂಗ್ರಹಿಸಲು ಬೇಕಾದ ತಾಪಮಾನ 2- 80c
ಬಳಕೆಗೆ ಸಿದ್ಧ- ಡಿಸೆಂಬರ್‌ 2020
2, 3ನೇ ಹಂತದ ಪ್ರಯೋಗ ಆರಂಭ- ಮೇ

Advertisement

Udayavani is now on Telegram. Click here to join our channel and stay updated with the latest news.

Next