Advertisement
ಕೋವಿಡ್ 19 ಸೋಂಕಿನ ಭೀತಿಯಿಂದಾಗಿ ವಿತರಣ ವ್ಯವಸ್ಥೆ ಬಹುತೇಕ ಸ್ಥಗಿತವಾಗಿದೆ. ಇದರಿಂದಾಗಿ ಖಾಲಿ ಅನಿಲ ಜಾಡಿಗಳು ಮರುಪೂರಣ ಘಟಕಗಳಿಗೆ ಮರಳಿ ಬರುತ್ತಿಲ್ಲ. ಸುರತ್ಕಲ್ ಎಚ್‌ಪಿಸಿಎಲ್ ಕಂಪೆನಿಗೆ ಕೇರಳದ ಕಣ್ಣೂರು, ಕೋಯಿಕ್ಕೋಡ್‌ಗಳಲ್ಲಿ ಸೇಲ್ಸ್ ಏರಿಯಾವಿದ್ದು ಅಲ್ಲಿಂದಲೂ ರೀಫಿಲ್‌ಗೆ ಬರಬೇಕಿದೆ. ಕಣ್ಣೂರಿನಲ್ಲಿ ಡೆಲಿವರಿ ಬಾಯ್‌ಗಳು ಕೆಲಸ ನಿಲ್ಲಿಸಿರುವುದರಿಂದ ಖಾಲಿ ಸಿಲಿಂಡರ್‌ಗಳು ಗ್ರಾಹಕರ ಮನೆಗಳಲ್ಲೇ ಉಳಿದುಕೊಂಡಿವೆ. ಗ್ರಾಹಕರು ಬುಕ್ ಮಾಡಿ ಕಾಯುತ್ತಿದ್ದಾರಾದರೂ ಪೂರೈಸಲು ಸಾಧ್ಯವಾಗುತ್ತಿಲ್ಲ.
ಮರುಪೂರಣ ಘಟಕಗಳಲ್ಲಿರುವ ನೌಕರರು ಕೂಡ ಕೋವಿಡ್ 19 ಸೋಂಕಿನ ಭಯದಿಂದ ಕೆಲಸ ಮಾಡಲು ಒಪ್ಪುತ್ತಿಲ್ಲ. ಗುತ್ತಿಗೆ ಆಧಾರಿತ ಲಾರಿಗಳು ಲೋಡಿಂಗ್‌ಗೆ ಬರುತ್ತಿಲ್ಲ. ಕೆಲವು ಕಡೆ ಸ್ವಂತ ಲಾರಿಗಳನ್ನು ಹೊಂದಿರುವ ಡೀಲರ್‌ಗಳು ಜಾಡಿಗಳನ್ನು ಕೊಂಡೊಯ್ದು ಗ್ರಾಹಕರಿಗೆ ಪೂರೈಸುತ್ತಿದ್ದಾರೆ. ಅನಿಲ ಕಂಪೆನಿಗಳು ಲಾರಿಗಳ ಚಾಲಕರ ಆರೋಗ್ಯ ತಪಾಸಣೆ ನಡೆಸಿ, ವಾಹನ ಮತ್ತು ಅನಿಲ ಜಾಡಿಗಳನ್ನು ರಾಸಾಯನಿಕದಿಂದ ತೊಳೆದು ಮತ್ತೆ ತುಂಬಿಸಿ ಕಳುಹಿಸಿಕೊಡುವುದೇ ಮೊದಲಾದ ಉಪಕ್ರಮಗಳ ಮೂಲಕ ಗ್ರಾಹಕರನ್ನು ತಲುಪಲು ಹರಸಾಹಸ ಪಡುತ್ತಿವೆ.