Advertisement

ಬೆಳೆಯುತ್ತಲೇ ಇದೆ ಸರಣಿ ಕಳ್ಳತನ ಸರಪಳಿ

02:45 PM Aug 19, 2022 | Team Udayavani |

ಹುಬ್ಬಳ್ಳಿ: ಕೋವಿಡ್‌-19 ನಂತರದಲ್ಲಿ ರಾಜ್ಯಾದ್ಯಂತ ಕಳ್ಳರ ತಂಡಗಳು ಸಕ್ರಿಯವಾಗಿದ್ದು, ಅಂಗಡಿ ಮತ್ತು ಮನೆಗಳ ಸರಣಿ ಕಳ್ಳತನ ಹೆಚ್ಚುತ್ತಿದೆ. ಇದಕ್ಕೆ ಹು-ಧಾ ಮಹಾನಗರವು ಹೊರತಾಗಿಲ್ಲ.

Advertisement

ಅವಳಿ ನಗರದಲ್ಲಿ ಕಳೆದ ಎರಡ್ಮೂರು ತಿಂಗಳಿನಿಂದ ಸರಣಿ ಕಳ್ಳತನಗಳು ಅವ್ಯಾಹತವಾಗಿ ನಡೆಯುತ್ತಿದ್ದು, ಹೆಚ್ಚಾಗಿ ಅಂಗಡಿಗಳೇ ಗುರಿಯಾಗುತ್ತಿವೆ. ಪ್ರತಿ 10-15 ದಿನಗಳೊಳಗೆ ಒಂದಿಲ್ಲೊಂದು ಕಡೆ ಸರಣಿ ಕಳ್ಳತನ ನಡೆಯುತ್ತಿದೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಹಾಗೂ ಬೆಂಗಳೂರಿನ ಕಲಾಸಿಪಾಳ್ಯ ಮತ್ತು ತುಮಕೂರು ತಂಡದವರು ರಾಜ್ಯಾದ್ಯಂತ ಸರಣಿಗಳ್ಳತನ ಕೃತ್ಯಗಳನ್ನು ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಕಳ್ಳರು ಗುಂಪು ರಾತ್ರಿವೇಳೆ ಕೈಚಳಕ ತೋರಿ ಕ್ಷಣಾರ್ಧದಲ್ಲಿ ನಗರದಿಂದ ಪರಾರಿಯಾಗುತ್ತಿದ್ದಾರೆ. ಕೆಲವು ಕಳ್ಳತನದ ಪ್ರಕರಣಗಳನ್ನು ಪೊಲೀಸರಿಗೆ ಇದುವರೆಗೆ ಪತ್ತೆ ಮಾಡಲು ಆಗುತ್ತಿಲ್ಲ. ಪೊಲೀಸರು ಈಗಾಗಲೇ ಒಂದೆರಡು ಪ್ರಕರಣ ಭೇದಿಸಿ ಅಂತಾರಾಜ್ಯ ಮತ್ತು ಅಂತರ್ಜಿಲ್ಲಾ ಕಳ್ಳರನ್ನು ಬಂಧಿಸಿದ್ದಾರೇನೋ ಸರಿ. ಆದರೆ, ಇನ್ನೂ ಕೆಲವು ಕಳ್ಳರ ಗುಂಪು ಸಕ್ರಿಯವಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಯಾಗಿದೆ.

ನಗರದಲ್ಲಿನ್ನೂ ಕೆಲ ಕಳ್ಳರ ತಂಡ ಸಕ್ರಿಯ?

ಗೋಕುಲ ರಸ್ತೆ ಪೊಲೀಸರು ಮಹಾರಾಷ್ಟ್ರ ಮತ್ತು ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಅಂತಾರಾಜ್ಯ ಕಳ್ಳರನ್ನು, ಕೇಶ್ವಾಪುರ ಪೊಲೀಸರು ಹಗಲು ಹೊತ್ತಿನಲ್ಲೆ ಮನೆಯ ಕೀಲಿ ಮುರಿದು ಕಳ್ಳತನ ಮಾಡುತ್ತಿದ್ದವರನ್ನು, ಶಹರ ಠಾಣೆ ಪೊಲೀಸರು ಅಂಗಡಿಗಳ ಸರಣಿ ಕಳ್ಳತನ ಮಾಡಿದ್ದ ಅಂತರ್ಜಿಲ್ಲಾ ಕಳ್ಳರನ್ನು ಬಂಧಿಸಿ, ಕಳ್ಳತನ ಪ್ರಕರಣಗಳನ್ನು ಭೇದಿಸಿದ್ದಾರೆ. ಆದರೆ ಬಂಧಿತರೆಲ್ಲರೂ ಒಂದು ಗುಂಪು ಮಾಡಿಕೊಂಡು ನಗರಕ್ಕೆ ಬಂದು, ರಾತ್ರಿಹೊತ್ತು ಕಳ್ಳತನ ಮಾಡಿಕೊಂಡು ತಲೆಮರೆಸಿಕೊಂಡಿದ್ದರು. ಪೊಲೀಸರು ಸಿಸಿ ಕ್ಯಾಮರಾ ದೃಶ್ಯಾವಳಿ ಹಾಗೂ ಕಳ್ಳರು ಬಿಟ್ಟು ಹೋದ ಒಂದಿಷ್ಟು ಸುಳಿವಿನ ಆಧಾರ ಮೇಲೆ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಇದೇರೀತಿಯ ಕಳ್ಳರ ಪ್ರತ್ಯೇಕ ತಂಡಗಳು ಸಕ್ರಿಯವಾಗಿವೆ ಎಂದು ಹೇಳಲಾಗುತ್ತಿದೆ.

Advertisement

ಕಳ್ಳರು ಮೊದಲು ಅಂಗಡಿಗಳನ್ನು ಅಷ್ಟಾಗಿ ಕಳ್ಳತನ ಮಾಡುತ್ತಿರಲಿಲ್ಲ. ಈಗ ಅಂಗಡಿ, ಮನೆಗಳನ್ನು ಸರಣಿಯಾಗಿ ಕಳವು ಮಾಡುತ್ತಿದ್ದಾರೆ. ಪೊಲೀಸರು ರಾತ್ರಿಗಸ್ತು ಅಷ್ಟಾಗಿ ಮಾಡುತ್ತಿಲ್ಲ. ನಿಗದಿಪಡಿಸಿದ ಪಾಯಿಂಟ್‌ನಲ್ಲಿ ಕೆಲಹೊತ್ತು ಇದ್ದು, ಹಿರಿಯ ಅಧಿಕಾರಿಗಳಿಗೆ ವಾಟ್ಸ್‌ಆ್ಯಪ್‌ನಲ್ಲಿ ಲೋಕೇಶನ್‌ ಸಂದೇಶ ಕಳುಹಿಸಿ ಹೋಗುತ್ತಾರೆ. ಮುಖ್ಯ ರಸ್ತೆಗಳಲ್ಲೇ ಪೊಲೀಸರ ವಾಹನಗಳು ತಿರುಗಾಡುತ್ತವೆ ವಿನಃ ಒಳರಸ್ತೆಗಳಿಗೆ ಬರುವುದಿಲ್ಲ. ಹೀಗಾಗಿ ಕಳ್ಳರು ಅವರ ಸಮಯ ನೋಡಿಕೊಂಡು ಕರಾಮತ್ತು ತೋರುತ್ತಿದ್ದಾರೆ. -ವಿನಾಯಕ ಎಚ್‌., ಅಂಗಡಿಕಾರ, ಗೋಪನಕೊಪ್ಪ

ಪೊಲೀಸರಿಗೆ ಪ್ರತಿದಿನ ಗಸ್ತು ತಿರುಗಲು ಒಂದು ರೂಟ್‌ ಮತ್ತು ಸಮಯ ನಿಗದಿಪಡಿಸಿ μಕ್ಸ್‌ ಪಾಯಿಂಟ್‌ ನೀಡಲಾಗಿದೆ. ಅಲ್ಲಿಗೆ ಅವರು ಕಡ್ಡಾಯವಾಗಿ ಹೋಗಲೇಬೇಕು. ರಾತ್ರಿಗಸ್ತಿನ ಬಗೆಗಿನ ಅಪಸ್ವರದ ಬಗ್ಗೆ ಪರಿಶೀಲಿಸುವೆ. ಧಾರವಾಡ ಮತ್ತು ಹುಬ್ಬಳ್ಳಿ ಶಹರ ಠಾಣೆಗಳಲ್ಲಿ ನಡೆದ ಸರಣಿಗಳ್ಳತನಗಳನ್ನು ಈಗಾಗಲೇ ಪತ್ತೆ ಮಾಡಲಾಗಿದೆ. ಅಶೋಕನಗರ ಮತ್ತು ವಿದ್ಯಾನಗರ ಠಾಣೆ ವ್ಯಾಪ್ತಿಯಲ್ಲಿ ನಡೆದ ಸರಣಿಗಳ್ಳತನ ಪತ್ತೆಗೆ ತಂಡ ರಚಿಸಲಾಗಿದೆ. –ಲಾಭೂ ರಾಮ, ಹು-ಧಾ ಪೊಲೀಸ್‌ ಆಯುಕ್ತ

-­ಶಿವಶಂಕರ ಕಂಠಿ

Advertisement

Udayavani is now on Telegram. Click here to join our channel and stay updated with the latest news.

Next