Advertisement

ಬಂಡುಕೋರರೊಂದಿಗೆ ಸಂಧಾನ ಫ‌ಲಿಸಿದ ಕೇಂದ್ರದ ಪ್ರಯತ್ನ

10:49 PM Sep 04, 2024 | Team Udayavani |

ಈಶಾನ್ಯ ರಾಜ್ಯಗಳಲ್ಲಿ ಒಂದಾದ ತ್ರಿಪುರಾದ ಎರಡು ಬಂಡುಕೋರ ಸಂಘಟನೆಗಳೊಂದಿಗೆ ಅಲ್ಲಿನ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಬುಧವಾರ ಶಾಂತಿ ಒಪ್ಪಂದಕ್ಕೆ ಅಂಕಿತ ಹಾಕಿವೆ. ಈ ಮೂಲಕ ಕೇಂದ್ರ ಸರಕಾರ ಬಂಡುಕೋರ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈಶಾನ್ಯ ರಾಜ್ಯಗಳಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮಹತ್ತರ ಹೆಜ್ಜೆ ಇರಿಸಿದೆ.

Advertisement

ತ್ರಿಪುರಾ ಸಹಿತ ಈಶಾನ್ಯ ರಾಜ್ಯಗಳಲ್ಲಿ ಸ್ಥಳೀಯ ಬುಡಕಟ್ಟು ಸಮುದಾಯಗಳ ಜನರು ಸರಕಾರದ ವಿರುದ್ಧ ಬಂಡುಕೋರ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿವೆ. ಬಂಡುಕೋರ ಸಂಘಟನೆಗಳ ವಿರುದ್ಧ ಸರಕಾರ ನಿಷ್ಠುರ ಕ್ರಮ ಕೈಗೊಂಡರೂ ಸ್ಥಳೀಯ ಜನರ ಪರೋಕ್ಷ ಬೆಂಬಲದ ಪರಿಣಾಮವಾಗಿ ಆಡಳಿತಾ ರೂಢ ಸರಕಾರಗಳಿಗೆ ಈ ಸಂಘಟನೆಗಳ ಬಂಡುಕೋರ ಚಟುವಟಿಕೆ ಗಳನ್ನು ಹತೋಟಿಗೆ ತರುವುದೇ ಬಲುದೊಡ್ಡ ಸವಾಲಿನ ಕಾರ್ಯ.

ಇತ್ತೀಚಿನ ವರ್ಷಗಳಲ್ಲಿ ಈ ರಾಜ್ಯಗಳಲ್ಲಿ ಬಂಡುಕೋರ ಸಂಘಟನೆಗಳ ವಿಧ್ವಂಸಕ ಕೃತ್ಯಗಳು, ಹಿಂಸಾಚಾರ ಒಂದಿಷ್ಟು ಕಡಿಮೆಯಾಗಿವೆಯಾದರೂ ಆಗೊಮ್ಮೆ ಈಗೊಮ್ಮೆ ಎಂಬಂತೆ ಈ ಸಂಘಟನೆಗಳ ಕಾರ್ಯಕರ್ತರು ದಾಳಿ ನಡೆಸಿ ಭೀತಿಯ ವಾತಾವರಣವನ್ನು ಮೂಡಿಸುತ್ತಲೇ ಬಂದಿದ್ದಾರೆ. ಒಂದೆಡೆ ಯಿಂದ ಕೇಂದ್ರ ಸರಕಾರ ಈಶಾನ್ಯ ರಾಜ್ಯಗಳನ್ನು ದೇಶದ ಮುಖ್ಯವಾಹಿನಿಗೆ ಜೋಡಿಸಿ, ಅಭಿವೃದ್ಧಿ ಪಥದಲ್ಲಿ ಮುಂದಕ್ಕೊಯ್ಯಲು ಪಣತೊಟ್ಟು ಕೋಟ್ಯಂತರ ರೂ. ವೆಚ್ಚದಲ್ಲಿ ವಿವಿಧ ಸಾರಿಗೆ ಸಂಪರ್ಕ ಯೋಜನೆಗಳ ಅನುಷ್ಠಾನ ಮತ್ತು ಕೈಗಾರಿಕೆ ಸ್ಥಾಪಿಸುವ ಮೂಲಕ ಈ ರಾಜ್ಯಗಳ ಜನರ ಜೀವನಮಟ್ಟ ಸುಧಾರಣೆಗೆ ಮುಂದಾಗಿದೆ. ಇನ್ನೊಂದೆಡೆಯಿಂದ ಸರಕಾರ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳಿಗೆ ತಲೆನೋವಾಗಿ ಪರಿಣಮಿಸಿರುವ ಬಂಡುಕೋರ ಸಂಘಟನೆಗಳ ಚಟುವಟಿಕೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಠಿನ ಕ್ರಮದ ಜತೆ ಜತೆಯಲ್ಲಿ ಸಂಧಾನ ಮೂಲಕ ಮನವೊಲಿಸುವ ಕಾರ್ಯ ಮಾಡುತ್ತ ಬಂದಿದೆ.

ಕೇಂದ್ರ ಸರಕಾರದ ಈ ಪ್ರಯತ್ನಕ್ಕೆ ಬುಧವಾರ ಭಾಗಶಃ ಯಶಸ್ಸು ಲಭಿಸಿದ್ದು ತ್ರಿಪುರಾದ ಎರಡು ಪ್ರಮುಖ ಬಂಡುಕೋರ ಗುಂಪುಗಳಾದ ರಾಷ್ಟ್ರೀಯ ತ್ರಿಪುರಾ ಮುಕ್ತಿ ರಂಗ ಮತ್ತು ಅಲ್‌ ತ್ರಿಪುರಾ ಟೈಗರ್‌ ಫೋರ್ಸ್‌ನೊಂದಿಗೆ ಶಾಂತಿ ಒಪ್ಪಂದ ಮಾಡಿಕೊಂಡಿದೆ. ಈ ಎರಡೂ ಬಂಡುಕೋರ ಸಂಘಟನೆಗಳು ಕಳೆದ ಮೂರೂವರೆ ದಶಕಗಳಿಂದ ಸರಕಾರದ ವಿರುದ್ಧ ಸಶಸ್ತ್ರ ಹೋರಾಟದಲ್ಲಿ ನಿರತವಾಗಿದ್ದವು. ಈ ತ್ರಿಪಕ್ಷೀಯ ಒಪ್ಪಂದದ ಬಳಿಕ ಈ ಬಂಡುಕೋರ ಸಂಘ ಟನೆಗಳ ಸದಸ್ಯರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಸಮಾಜದ ಮುಖ್ಯವಾಹಿನಿಗೆ ಸೇರ್ಪ ಡೆಗೊಳ್ಳಲಿದ್ದಾರೆ. ಈ ಬೆಳವಣಿಗೆಯ ಬಳಿಕ ಈಶಾನ್ಯ ರಾಜ್ಯಗಳಲ್ಲಿನ ಇನ್ನಷ್ಟು ಬಂಡುಕೋರ ಸಂಘಟನೆಗಳು ಸರಕಾರದೊಂದಿಗೆ ಮಾತುಕತೆಗೆ ಮುಂದಾಗುವ ಆಶಾವಾದ ಮೂಡಿದೆ. ಈಶಾನ್ಯದ ಇತರ ರಾಜ್ಯಗಳಾದ ಮಣಿಪುರ, ನಾಗಾಲ್ಯಾಂಡ್‌, ಮೇಘಾಲಯ, ಮಿಜೋರಾಂಗಳಲ್ಲಿಯೂ ಬಂಡುಕೋರ ಸಂಘಟನೆ ಸಕ್ರಿಯವಾಗಿವೆ. ಈ ರಾಜ್ಯಗಳಲ್ಲಿನ ಬಂಡು ಕೋರ ಸಂಘಟನೆಗಳ ಜತೆಗೂ ಕೇಂದ್ರ ಸರಕಾರ ಮಾತುಕತೆ ನಡೆಸುತ್ತಲೇ ಬಂದಿದೆಯಾದರೂ ಸಂಧಾನಕ್ಕೆ ಬರುವಲ್ಲಿ ವಿಫ‌ಲವಾಗಿದೆ. ಮಣಿಪುರದಲ್ಲಿ ಸದ್ಯ ನಡೆಯುತ್ತಿರುವ ಹಿಂಸಾಚಾರದಲ್ಲಿ ಬಂಡುಕೋರ ಸಂಘಟನೆಗಳ ಕೈವಾಡ ವಿರುವುದು ಈಗಾಗಲೇ ಸಾಬೀತಾಗಿದ್ದು, ಬುಡಕಟ್ಟು ಸಮುದಾಯಗಳು ನಡೆಸುತ್ತಿರುವ ಹೋರಾಟಕ್ಕೆ ಈ ಸಂಘಟನೆಗಳು ಬೆಂಬಲ ನೀಡುತ್ತಿರುವುದರಿಂದ ಹಿಂಸಾಚಾರಕ್ಕೆ ಕಡಿವಾಣ ಹಾಕುವ ಸರಕಾರದ ಪ್ರಯತ್ನಕ್ಕೆ ಈವರೆಗೆ ಯಶ ಲಭಿಸಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಇಲ್ಲಿನ ಬಂಡುಕೋರ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಬಂಡುಕೋರರ ಆಕ್ರೋಶ ತಣ್ಣಗಾಗಿಸುವ ಪ್ರಯತ್ನಕ್ಕೆ ಮುಂದಾಗಬೇಕು.

Advertisement

Udayavani is now on Telegram. Click here to join our channel and stay updated with the latest news.

Next