ಬಾಗಲಕೋಟೆ: ಕೇಂದ್ರ ಗೃಹ ಇಲಾಖೆ ಜಂಟಿ ಕಾರ್ಯದರ್ಶಿ ಪ್ರಕಾಶ ನೇತೃತ್ವದ ಕೇಂದ್ರ ಪ್ರವಾಹ ಅಧ್ಯಯನ ತಂಡ ಸೋಮವಾರ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳ ಅಧ್ಯಯನ ನಡೆಸಿತು.
ಮುಧೋಳ ತಾಲೂಕಿನ ಯಾದವಾಡ ಹಾಗೂ ಚಿಚಖಂಡಿ ಸೇತುವೆ, ಸಂಪೂರ್ಣ ಹಾಳಾಗಿರುವ ಪಾಲಿಹೌಸ್, ಅಲ್ಲಿ ತೇಲಿ ಬಂದು ದಡ ತಲುಪಿದ್ದ ಜಾನುವಾರು ವೀಕ್ಷಿಸಿತು.
ಇದೇ ಸಂದರ್ಭದಲ್ಲಿ ರೈತ ವೆಂಕನಗೌಡ ಪಾಟೀಲ, ವಿ.ಕೆ.ಪಾಟೀಲ ಹಾಗೂ ಸುಭಾಸ ಬುದ್ನಿ ಹಾನಿಗೊಳಗಾದ ಕಬ್ಬನ್ನು ಹೊರ ಹಾಕಲು ಪ್ರತಿ ಎಕರೆಗೆ 25 ಸಾವಿರ ರೂ. ಖರ್ಚಾಗಲಿದ್ದು, ಹಾಳಾದ ಕಬ್ಬಿಗೆ ಎಕರೆಗೆ 1ಲಕ್ಷ ರೂ. ವರೆಗೆ ಪರಿಹಾರ ನೀಡುವಂತೆ ಕೇಂದ್ರ ತಂಡಕ್ಕೆ ಒತ್ತಾಯಿಸಿದರು. ದಾಳಿಂಬೆ ಸಂಪೂರ್ಣ ನಾಶವಾಗಿದ್ದು, ಪ್ರತಿ ಎಕರೆಗೆ 7 ಲಕ್ಷ ರೂ. ಹಾನಿಯಾಗಿದೆ. ಪುನಃ ಗಿಡ ಬೆಳೆಸಿ ಫಲ ಸಿಗಬೇಕಾದರೆ 3 ವರ್ಷ ಕಾಯಬೇಕು. ಅಲ್ಲಿಯವರೆಗೆ ಯಾವುದೇ ಆದಾಯ ಇಲ್ಲದ ಕಾರಣ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದರು. ಕಲಾದಗಿ ಸಮೀಪದ ಗೋವಿಂದಕೊಪ್ಪ ಗ್ರಾಮದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಆರ್.ಪಾಟೀಲ ತೋಟಗಾರಿಕೆ ಬೆಳೆ ಹಾನಿಯಾಗಿರುವುದನ್ನು ಮನವರಿಕೆ ಮಾಡಿದರು.
ಕೇಂದ್ರ ಅಧ್ಯಯನ ತಂಡದಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ಲೆಕ್ಕಪತ್ರ ಶಾಖೆಯ ನಿರ್ದೇಶಕ ಎಸ್.ಸಿ. ಮೀನಾ, ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಪುಣ್ಣುಸ್ವಾಮಿ, ಕೇಂದ್ರ ಜಲಸಂಪನ್ಮೂಲದ ಬೆಂಗಳೂರಿನ ಪ್ರಾದೇಶಿಕ ಕಚೇರಿಯ ಎಸ್.ಇ ಜಿತೇಂದ್ರ ಪನವಾರ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಪ್ರಾದೇಶಿಕ ಕಚೇರಿಯ ವಿಜಯಕುಮಾರ, ಗ್ರಾಮೀಣಾಭಿವೃದ್ಧ್ದಿ ಸಚಿವಾಲಯದ ಮಾಣಿಕ ಚಂದ್ರ ಪಂಡಿತ ಹಾಗೂ ಇಂಧನ ಸಚಿವಾಲಯದ ಉಪ ನಿರ್ದೇಶಕ ಓ.ಪಿ.ಸುಮನ್ ಇದ್ದರು.