Advertisement

ಕೇಂದ್ರಕ್ಕೆ ಕೇಳಿದ್ದು 2400 ಕೋಟಿ-ಕೊಟ್ಟಿದ್ದು 950 ಕೋಟಿ

10:25 AM May 08, 2019 | Suhan S |

ಹುಬ್ಬಳ್ಳಿ: ರೈತರಿಗೆ ಇನ್‌ಪುಟ್ ಸಬ್ಸಿಡಿ ಕುರಿತಾಗಿ ಕೇಂದ್ರ ಸರಕಾರಕ್ಕೆ 2,400 ಕೋಟಿ ರೂ. ಬೇಡಿಕೆ ಸಲ್ಲಿಸಿದ್ದು, ಕೇವಲ 950 ಕೋಟಿ ರೂ. ಮಾತ್ರ ಕೇಂದ್ರ ಬಿಡುಗಡೆ ಮಾಡಿದೆ. ಚುನಾವಣೆ ನೀತಿ ಸಂಹಿತೆ ಮುಗಿದ ನಂತರ ಬಂದ ಹಣ ಹಂಚಿಕೆ ಮಾಡಲಾಗುವುದು ಎಂದು ಕೃಷಿ ಸಚಿವ ಶಿವಶಂಕರ ರೆಡ್ಡಿ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳೆ ನಷ್ಟದ ಕುರಿತಾಗಿ ಕೇಂದ್ರಕ್ಕೆ ವರದಿ ಸಲ್ಲಿಸಲಾಗಿದೆ. ಇನ್‌ಪುಟ್ ಸಬ್ಸಿಡಿ ನೀಡಿಕೆ ಬಗ್ಗೆ ಸಮಗ್ರ ವರದಿ ಸಲ್ಲಿಸಿ ಹಣ ಬಿಡುಗಡೆಗೆ ಕೋರಲಾಗಿತ್ತು. ಆದರೆ, ಕೇಂದ್ರ ಸರಕಾರ ನಾವು ಸಲ್ಲಿಸಿದ ಬೇಡಿಕೆಯ ಶೇ.50 ಹಣ ಬಿಡುಗಡೆ ಮಾಡಿಲ್ಲ. ಪ್ರಸ್ತುತ ಬಂದ ಹಣದ ಹಂಚಿಕೆಗೆ ನೀತಿ ಸಂಹಿತೆ ಅಡ್ಡಿಯಾಗಿದ್ದು, ಇದು ಮುಗಿಯುತ್ತಿದ್ದಂತೆಯೇ ಹಣದ ಹಂಚಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಬೆಳೆ ವಿಮೆ ಅಸಮಾಧಾನ: ಕೇಂದ್ರ ಸರಕಾರದ ಪ್ರಧಾನಮಂತ್ರಿ ಫ‌ಸಲ್ ಬಿಮಾ ಯೋಜನೆಯಲ್ಲಿನ ಕೆಲ ನಿಯಮಾವಳಿಗಳ ಬಗ್ಗೆ ನಮಗೂ ಅಸಮಾಧಾನವಿದೆ. ಯೋಜನೆ ಮಾರ್ಗದರ್ಶಿ ನಿಯಮಗಳ ಸರಳೀಕರಣ ಅವಶ್ಯವಾಗಿದೆ. ಯೋಜನೆಗಳಲ್ಲಿನ ಹಲವು ತಾಂತ್ರಿಕ ಲೋಪದೋಷಗಳ ಕಾರಣದಿಂದ ಬೆಳೆ ವಿಮೆ ಪರಿಹಾರ ಸಮರ್ಪಕವಾಗಿ ರೈತರಿಗೆ ಸೇರುತ್ತಿಲ್ಲ ಎಂದರು.

ಪ್ರಧಾನಮಂತ್ರಿ ಫ‌ಸಲ್ ಬಿಮಾ ಯೋಜನೆಯಲ್ಲಿನ ಲೋಪಗಳನ್ನು ಸರಿಪಡಿಸುವುದು, ರೈತರಿಗೆ ಹೆಚ್ಚು ಪ್ರಯೋಜನಕಾರಿಯಾದ ಕ್ರಮ ಜಾರಿಗೊಳಿಸುವ ಕುರಿತಾಗಿ ಕೇಂದ್ರ ಸರಕಾರದೊಂದಿಗೆ ಚರ್ಚಿಸಲಾಗುತ್ತಿದೆ ಎಂದರು.

ಪ್ರಚಾರಕ್ಕೆ ಸೀಮಿತ: ಕೇಂದ್ರ ಸರಕಾರ ವಿವಿಧ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ)ಘೋಷಣೆ ಮಾಡಿದೆ. ಆದರೆ ಅದರ ಅನುಷ್ಠಾನ ಸಮರ್ಪಕವಾಗಿ ಆಗುತ್ತಿಲ್ಲ. ಎಂಎಸ್‌ಪಿ ಅಡಿಯಲ್ಲಿ ಖರೀದಿಸಿದ ಕೆಲವೊಂದು ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿ ನಿಗದಿತ ಹಣವನ್ನು ಕೇಂದ್ರ ಸರಕಾರ ನೀಡದ ಕಾರಣ ರಾಜ್ಯ ಸರಕಾರವೇ ಭರಿಸುತ್ತಿದೆ ಎಂದರು.

Advertisement

ಭತ್ತ, ಗೋಧಿ ಇನ್ನಿತರ ಬೆಳೆಗಳಿಗೆ ಕೇಂದ್ರ ಸರಕಾರ ಎಂಎಸ್‌ಪಿ ನಿಗದಿಯ ದರದ ಹಣ ನೀಡುತ್ತಿದೆ. ಆದರೆ, ನಮ್ಮಲ್ಲಿ ಗೋದಿ ಹೆಚ್ಚು ಬೆಳೆಯಲ್ಲ. ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳಿಗೆ ಕೇಂದ್ರ ಸರಕಾರ ಹಣ ನೀಡುತ್ತಿಲ್ಲ. ರಾಜ್ಯ ಸರಕಾರವೇ ಎಂಎಸ್‌ಪಿ ನಿಗದಿತ ದರದಲ್ಲಿ ಖರೀದಿ ಮಾಡಬೇಕಿದ್ದು, ಹೆಚ್ಚಿನ ಪ್ರಮಾಣದ ಖರೀದಿ ಸಾಧ್ಯವಾಗುತ್ತಿಲ್ಲ. ಎಂಎಸ್‌ಪಿ ಘೋಷಣೆ ಮಾಡಿದ ಬೆಳೆಗಳ ಖರೀದಿಗೆ ಅರ್ಧದಷ್ಟು ಹಣವನ್ನು ಕೇಂದ್ರ ಸರಕಾರ ನೀಡಬೇಕು, ಅದನ್ನು ನೀಡುತ್ತಿಲ್ಲ. ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ದರ ಬಿದ್ದರೂ, ರಾಜ್ಯ ಸರಕಾರ ಪೂರ್ಣ ಪ್ರಮಾಣ ಹಣ ನೀಡಿ ಖರೀದಿ ಮಾಡದಂತಾಗಿದೆ ಎಂದರು.

ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ನೀಡುವ ಡಾ| ಎಂ.ಎಸ್‌. ಸ್ವಾಮಿನಾಥನ್‌ ವರದಿ ಜಾರಿ ಭರವಸೆಯಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಹಿಂದೆ ಸರಿದಿದೆ. ಕೇವಲ ಬೆಂಬಲ ಬೆಲೆ ನೀಡುವುದಾಗಿ ತಿಳಿಸುತ್ತಿದೆ. ವರದಿಯಂತೆ ರೈತರ ಶ್ರಮ, ಭೂಮಿಯ ಬಾಡಿಗೆ ಇನ್ನಿತರ ವೆಚ್ಚ ಸೇರಿಸಿ ಕನಿಷ್ಠ ಬೆಂಬಲ ಬೆಲೆ ನಿಗದಿಗೆ ಕೇಂದ್ರ ಸರಕಾರ ಒಪ್ಪುತ್ತಿಲ್ಲ ಎಂದು ಸಚಿವರು ತಿಳಿಸಿದರು.

ಎರಡು ಕ್ಷೇತ್ರದಲ್ಲಿ ಗೆಲುವು: ಕುಂದಗೋಳ ಹಾಗೂ ಚಿಂಚೋಳಿ ಎರಡೂ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಸಚಿವ ಶಿವಶಂಕರ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next