ದಾವಣಗೆರೆ: ರಾಜ್ಯದಲ್ಲಿ ಬರ ಮತ್ತು ಅತಿವೃಷ್ಟಿಯಿಂದ 16 ಸಾವಿರ ಕೋಟಿಯಷ್ಟು ಬೆಳೆ ಹಾನಿ, ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದರೂ ಕೇಂದ್ರ ಸರ್ಕಾರ ಈವರೆಗೆ ಯಾವುದೇ ರೀತಿಯ ಆರ್ಥಿಕ ನೆರವು ನೀಡಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ದೂರಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಮಳೆ ಕೊರತೆ, ಮಲೆನಾಡು, ಕರಾವಳಿಯಲ್ಲಿ ಅತಿವೃಷ್ಟಿಯಿಂದ ಆಗಿರುವ ಹಾನಿಯ ಬಗ್ಗೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆಯವರೇ ಕೇಂದ್ರದ ಗೃಹ ಸಚಿವ ರಾಜನಾಥ್‌ಸಿಂಗ್ ಅವರಿಗೆ ಮೂರು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೆ, ಕೇಂದ್ರ ಸರ್ಕಾರ ಯಾವುದೇ ರೀತಿಯ ಆರ್ಥಿಕ ನೆರವು ನೀಡಿಲ್ಲ ಎಂದರು.
ಕಂದಾಯ ಸಚಿವರು ಮನವಿ ಸಲ್ಲಿಸಿದ ನಂತರ ಕೇಂದ್ರದಿಂದ ಬರ ಅಧ್ಯಯನ ತಂಡ ರಾಜ್ಯದಲ್ಲಿ ಪರಿಶೀಲನೆ ನಡೆಸುತ್ತಿದೆ. ಅಧ್ಯಯನ ತಂಡ ಕೇಂದ್ರಕ್ಕೆ ವರದಿ ಸಲ್ಲಿಸಿದ ನಂತರವಾದರೂ ಆರ್ಥಿಕ ನೆರವು ಸಿಗಲಿದೆಯೇ ಎಂದು ಕಾದು ನೋಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡದೇ ಹೋದರೂ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ರಾಜ್ಯ ಸರ್ಕಾರ ಬರಪೀಡಿತ 100 ತಾಲೂಕುಗಳಿಗೆ ತಲಾ 50 ಲಕ್ಷ ಅನುದಾನ ಮಂಜೂರು ಮಾಡಿದ್ದು, ಈಗಾಗಲೇ 25 ಲಕ್ಷ ರೂ.ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಈಗಿರುವ ಬೆಳೆ ವಿಮೆ ಯೋಜನೆಯಲ್ಲಿ ಕೆಲವಾರು ಲೋಪದೋಷಗಳಿವೆ. ಖಾಸಗಿ ವಿಮಾ ಕಂಪನಿಗಳಿಂದ ರೈತರಿಗೆ ಅನಾನುಕೂಲ ಆಗುತ್ತಿರುವುದನ್ನು ಮನಗಂಡು ರಾಜ್ಯ ಸರ್ಕಾರದಿಂದಲೇ ಪ್ರತ್ಯೇಕವಾದ ಬೆಳೆ ವಿಮೆ ಯೋಜನೆ ಜಾರಿಯ ಬಗ್ಗೆ ಚಿಂತನೆ ನಡೆಸಲಾಗಿದೆ.
– ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ.