Advertisement

ಹಿಂದೂ ಸಂಖ್ಯೆ ಕುಸಿದ ಕಾರಣ ಜನಗಣತಿ ಬಹಿರಂಗವಾಗಿಲ್ಲ

01:23 AM Feb 15, 2020 | Sriram |

ಉಡುಪಿ: ಭಾರತದಲ್ಲಿ ಹಿಂದೂಗಳ ಜನಸಂಖ್ಯೆ ಕುಸಿತ ಕಂಡು ಬಂದಿದೆ. ಹೀಗಾಗಿ 2011ರ ಜನಗಣತಿಯನ್ನೂ ಬಹಿರಂಗಪಡಿಸಿಲ್ಲ ಎಂದು ಚಿಂತಕ, ಪ್ರಾಧ್ಯಾಪಕ ಪ್ರೊ| ನಂದನ ಪ್ರಭು ಹೇಳಿದ್ದಾರೆ.

Advertisement

ಉಡುಪಿ ಆರೆಸ್ಸೆಸ್‌ ಕಾರ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ “ಹಿಂದುತ್ವದ ಆವಶ್ಯಕತೆ- ಪೌರತ್ವದ ಅನಿವಾರ್ಯತೆ’ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ಹಿಂದೂಗಳ ಜನಸಂಖ್ಯೆ ಶೇ. 85 ಎನ್ನುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಜನಸಂಖ್ಯೆ ಶೇ. 79ಕ್ಕೆ ಇಳಿದಿದೆ.ಇತರ ಮತೀಯರ ಸಂಖ್ಯೆ ಹೆಚ್ಚಿದೆ ಎನ್ನುವುದನ್ನು ಮುಚ್ಚಿಡಲು, ಹಿಂದೂ ಸಂಸ್ಕೃತಿ ಉಳಿಸುವುದು ಅಗತ್ಯ ಎಂಬ ಭಾವನೆ ಬರಬಹುದು ಎಂಬ ಕಾರಣಕ್ಕೆ 2011ರ ಜನಗಣತಿಯನ್ನು ಇಂದಿಗೂ ನಿಖರವಾಗಿ ಬಹಿರಂಗಪಡಿಸಿಲ್ಲ ಎಂದರು.

ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿ ಸುವವರು ಮುಂದಿನ ಅಂಶಗಳನ್ನು ಗಮನಿಸಬೇಕು. ಇಲ್ಲಿನ ಮುಸ್ಲಿಮರಿಗೆ ಯಾವುದೇ ತೊಂದರೆ ಇಲ್ಲ. ಹೊರಗಿನಿಂದ ಬರುವವರು ಅರ್ಜಿ ಸಲ್ಲಿಸಿದರೆ ಕಾನೂನು ಪ್ರಕಾರ ಪೌರತ್ವ ನೀಡಲಾಗುತ್ತದೆ. ನೇಪಾಲದಿಂದ ಬಂದ ಹಿಂದೂಗಳು, ಶ್ರೀಲಂಕಾದ ತಮಿಳರು, ಟಿಬೆಟಿಯನ್‌ ಬೌದ್ಧರ ವಿಚಾರಗಳಲ್ಲಿ ಧಾರ್ಮಿಕ ಸಂಘರ್ಷ ಆಗಿರದೆ ಪಾಕಿಸ್ಥಾನ, ಬಾಂಗ್ಲಾದಲ್ಲಿ ಧಾರ್ಮಿಕ ಸಂಘರ್ಷದಿಂದ ಬಂದ ಅಲ್ಪಸಂಖ್ಯಾಕರಿಗೆ ಮಾತ್ರ ಪೌರತ್ವ ಕೊಡುವ ವಿಚಾರವಾಗಿದೆ ಎಂದರು.

ಹಿಂದುತ್ವ ರಾಷ್ಟ್ರದ ಅಸ್ಮಿತೆ
ಹಿಂದುತ್ವ ಎನ್ನುವುದು ಪ್ರತಿಕ್ರಿಯಾತ್ಮಕವಾದುದಲ್ಲ. ಇದು ರಾಷ್ಟ್ರದ ಅಸ್ಮಿತೆ (ಐಡೆಂಟಿಟಿ). ಪ್ರಪಂಚದ ಎಲ್ಲ ರಾಷ್ಟ್ರಗಳಲ್ಲಿಯೂ ಇದು ಇದೆ. ಭಾರತದ ರಾಷ್ಟ್ರೀಯತೆಯನ್ನು ಹಿಂದೂ ಐಡೆಂಟಿಟಿಯಿಂದ ಸುಮಾರು 2,000 ವರ್ಷಗಳಿಂದ ಗುರುತಿಸಲಾಗಿದೆ. ಅದಕ್ಕೂ ಹಿಂದೆ ಸನಾತನ ಎಂಬ ಹೆಸರಿತ್ತು ಎಂದು ಪ್ರಭು ವಿಶ್ಲೇಷಿಸಿದರು.

ಹಿಂದುತ್ವದಲ್ಲಿ ಸಾಂಸ್ಕೃತಿಕ, ಧಾರ್ಮಿಕ ಅಂಶಗಳೂ ಇವೆ. ಜತೆಗೆ ಜೀವನದೃಷ್ಟಿ- ವಿಶ್ವದೃಷ್ಟಿಯೂ ಇದೆ. ವೇದ ಪ್ರಾಮಾಣ್ಯವನ್ನು ಒಪ್ಪದ, ದೇವರನ್ನೂ ಒಪ್ಪದ ನಾಸ್ತಿಕರಿಗೂ ಹಿಂದುತ್ವದಲ್ಲಿ ಸ್ಥಾನವಿದೆ. ಇಸ್ಲಾಂ, ಕ್ರೈಸ್ತ ಮತಗಳಲ್ಲಿ ಪ್ರಭುತ್ವದ ಮೂಲಕ ಧಾರ್ಮಿಕ ಹಿಡಿತ ಸಾಧಿಸುವ ಕ್ರಮವಿದೆ ಎಂದರು.

Advertisement

ಆರೆಸ್ಸೆಸ್‌ ಜಿಲ್ಲಾ ಸಂಘಚಾಲಕ್‌ ಡಾ| ನಾರಾಯಣ ಶೆಣೈ, ನಗರ ಸಂಘಚಾಲಕ್‌ ರಾಮಚಂದ್ರ ಸನಿಲ್‌ ಉಪಸ್ಥಿತರಿದ್ದರು. ನಗರ ಬೌದ್ಧಿಕ್‌ ಪ್ರಮುಖ್‌ ಗಣೇಶ್‌ ಅಂಬಲಪಾಡಿ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next