ಹನ್ನೆರಡು ವರ್ಷದ ಶ್ವೇತಾಳ ಕೆಮ್ಮು ಎಷ್ಟು ಔಷಧ ಹಾಕಿದರೂ ನಿಲ್ಲದು. ವೈದ್ಯರು, “ಮನೋವಿಜ್ಞಾನಿಗಳ ಬಳಿ ಕರೆದುಕೊಂಡು ಹೋಗಿ’ ಎಂದಾಗ, ಆಕೆಯ ತಾಯಿಗೆ ಗಾಬರಿ. ನನ್ನ ಬಳಿ ತಮ್ಮ ಭಯ- ಉದ್ವಿಗ್ನತೆಯನ್ನು ತೋಡಿಕೊಂಡರು. ಮನಸ್ಸಿಗೆ ಆಘಾತವಾದಾಗ ಕೆಮ್ಮು ಬರಬಹುದೆ? ಎಂಬ ಅನುಮಾನ ಅವರಿಗಿತ್ತು. ಮಾನಸಿಕವಾಗಿ ಏನಾಗಿರಬಹುದು ಎಂಬ ತಳಮಳ. ಜೊತೆಗೆ ಎಡೆಬಿಡದೆ ಕೆಮ್ಮು. ಶಾಲೆಯಲ್ಲಿ ಸರಿಯಾಗಿ ಇರುತ್ತಿದ್ದ ಮಗುವಿಗೆ, ಮನೆಗೆ ಬರುವಾಗ ಕೆಮ್ಮು ಶುರುವಾಗುತ್ತಿತ್ತು. ರಾತ್ರಿಯೆಲ್ಲಾ ಒಣ ಕೆಮ್ಮು. ಯಾವ ಉಪಚಾರಕ್ಕೂ ಅದು ಬಗ್ಗಲಿಲ್ಲ.
ಮೊದಲ ದಿನದ ಸಮಾಲೋಚನೆಯಲ್ಲಿ ಬಹಳ ಮಂಕಾಗಿದ್ದಳು ಶ್ವೇತಾ. ಹಂತ ಹಂತವಾಗಿ ಧೈರ್ಯ ತುಂಬಿದ ಮೇಲೆ ನನ್ನ ಜೊತೆ ಮಾತಾಡುವ ಆತ್ಮವಿಶ್ವಾಸ ಮೂಡಿತು. ಮನೆಯಲ್ಲಿ ಇತ್ತೀಚೆಗೆ ಅವಳ ತಾಯಿಯ ತಮ್ಮನ ಅನುಚಿತ ವರ್ತನೆ ಸ್ವಲ್ಪವೂ ಇಷ್ಟವಾಗುತ್ತಿರಲಿಲ್ಲ. ತಂದೆಯ ನಿಧನದ ನಂತರ ಮನೆಯ ಕಷ್ಟ ನಷ್ಟಗಳಿಗೆ ತಲೆಕೊಡುತ್ತಿರುವ ಮಾಮನಿಗೆ ಇದು ಹಿಂಸೆ ಅಂತ ತಿಳಿಯುತ್ತಿಲ್ಲವೇ? ಅವನ ತೊಡೆಯ ಮೇಲೆ ಕುಳಿತು, ಅವನ ಪ್ರೀತಿಯ ಅಪ್ಪುಗೆಯನ್ನು ಇಷ್ಟಪಡುತ್ತಿದ್ದ ಶ್ವೇತಾಳಿಗೆ, ಕಳೆದವರ್ಷ ವಯಸ್ಸಿಗೆ ಬಂದ ಮೇಲೆ ಹಿತ ಅನ್ನಿಸುತ್ತಿಲ್ಲ. ಶಾಲೆಯಲ್ಲಿ “ಗುಡ್ ಟಚ್, ಬ್ಯಾಡ್ ಟಚ್’ ಹೇಳಿಕೊಟ್ಟಿ¨ªಾರೆ. ಮಾಮ ತಪ್ಪು ಮಾಡುತ್ತಿ¨ªಾನೆ ಅಂತ ತಿಳಿಯುತ್ತಿದೆ. ಆದರೆ, ವಿಧವೆಯಾದ ತಾಯಿಗೆ ಸರ್ವಸ್ವವೂ ಆದ ಮಾಮನ ಮೇಲೆ ದೂರು ಹೇಳುವುದು ಹೇಗೆ? ಆಕೆಗೆ ಬಹಳ ಹಿಂಸೆಯಾಗತೊಡಗಿತು. ಶಾಲೆಯಿಂದ ಮನೆಗೆ ಬರುವುದೇ ಬೇಡ ಅಂತನ್ನಿಸುತ್ತಿತ್ತು.
ಶಾಲೆಯಲ್ಲಿ ಸಮಸ್ಯೆಯನ್ನು ಯಾರ ಬಳಿಯೂ ಹೇಳಿಕೊಂಡಿಲ್ಲ. ಒಳಗೇ ನೊಂದು ಕುಗ್ಗಿ¨ªಾಳೆ. ಒಂದು ದಿನ ಧೈರ್ಯ ಮಾಡಿ ತಾಯಿಗೆ ಹೇಳಿದಾಗ, ತಾಯಿಗೆ ಸಿಟ್ಟು ನೆತ್ತಿಗೇರಿತ್ತು. ಶ್ವೇತಾಳ ಪ್ರತಿಯೊಂದು ಖರ್ಚುವೆಚ್ಚ ತೂಗಿಸುತ್ತಿದ್ದ ತಮ್ಮನ ಮೇಲೆ ಅಪವಾದ ಹೊರಿಸಿದ್ದಕ್ಕಾಗಿ ಏಟು ಸಹ ಬಿದ್ದಿದೆ. ಜೊತೆಗೆ ಮಾಮ ಎಲ್ಲರಿಗೂ ಅಚ್ಚುಮೆಚ್ಚು. ಕುಟುಂಬದಲ್ಲಿ ಗೌರವ ಗಳಿಸಿದ್ದ. ಇವನ ಹಿಂಸೆ ಗೌಪ್ಯವಾಗಿ ಹೀಗೆಯೇ ಮುಂದುವರಿದರೆ, ತನ್ನ ಗತಿ ಏನು ಎಂದು ಚಿಂತೆಗೆ ಒಳಗಾದಾಗ, ಕೆಮ್ಮು ಜಾಸ್ತಿಯಾಗಿದೆ. ತಡೆಯಲಾಗದ ಮಾನಸಿಕ ಒತ್ತಡ ಶರೀರದಲ್ಲಿ ಕಾಯಿಲೆಯಾಗಿ ವ್ಯಕ್ತವಾಗುತ್ತದೆ. ಹೊರಗೆ ಬೀದಿಯಲ್ಲಿ ದೌರ್ಜನ್ಯ ನಡೆದರೆ ಪೊಲೀಸರಿಗೆ ದೂರು ಕೊಡಬಹುದು. ಮನೆಯಲ್ಲೇ ದೌರ್ಜನ್ಯ ನಡೆದರೆ ಯಾರಿಗೆ ದೂರು ಕೊಡಬೇಕು? ಒಲೆ ಹತ್ತಿ ಉರಿದೊಡೆ ನಿಲಬಹುದಲ್ಲದೆ, ಧರೆ ಹೊತ್ತಿ ಉರಿದೊಡೆ ನಿಲಲುಬಹುದೆ?
ಸಾಮಾಜಿಕ ಪಿಡುಗಾಗಿರುವ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಮನೆಯಲ್ಲಿ ಗೊತ್ತಿಲ್ಲದೆ ನಡೆಯುತ್ತದೆ. ಯಾರಿಗೂ ಅನುಮಾನ ಬಾರದು ಅನ್ನುವ ಖಾತ್ರಿಯ ಮೇಲೆ ಗಂಡಸರು ಹೆಣ್ಣು ಮಗುವನ್ನು ಭೋಗದ ವಸ್ತುವನ್ನಾಗಿ ನೋಡುವ ಸಂಭವ ಜಾಸ್ತಿ. ಎಳೆಯ ಮನಸ್ಸಿನ ಮೇಲೆ ಆಗುವ ಮಾನಸಿಕ ಆಘಾತದ ಬಗ್ಗೆ ಅರಿವು ಕಡಿಮೆ. ಕೆಲವೊಮ್ಮೆ ಅನಗತ್ಯ ಅವಲಂಬನೆಗಳು ದೌರ್ಜನ್ಯಕ್ಕೆ ಅವಕಾಶ ಮಾಡಿಕೊಡುತ್ತವೆ. ತಾಯಿಯಲ್ಲಿ ಸ್ವಾವಲಂಬನೆಯನ್ನು ಹುಟ್ಟು ಹಾಕಿ, ಮಗಳ ದುಃಖ- ದುಮ್ಮಾನಗಳನ್ನು ಮುಕ್ತವಾಗಿ ಅರ್ಥಮಾಡಿಕೊಳ್ಳುವ ಶಕ್ತಿ ಬೆಳೆಸಿ, ಶ್ವೇತಾಳಿಗೆ ಆತ್ಮಸ್ಥೈರ್ಯವನ್ನು ಮೂಡಿಸಿ, ಆತ್ಮರಕ್ಷಣೆಯ ಮಾರ್ಗೋಪಾಯಗಳನ್ನು ಹೇಳಿಕೊಡಲಾಗಿ, ಶ್ವೇತಾಳ ಕೆಮ್ಮು ನಿಂತಿತು. ದೌರ್ಜನ್ಯವನ್ನು ಸಹಿಸಿಕೊಳ್ಳುವುದು ಅಪರಾಧ.
ಡಾ. ಶುಭಾ ಮಧುಸೂದನ್