ಮಂಗಳೂರು: ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಬಚ್ಚೇಗೌಡ ವಿರುದ್ಧ ಮೈತ್ರಿ ಪಕ್ಷದಿಂದ ಸ್ಪರ್ಧಿಸಿದ್ದ ವೀರಪ್ಪ ಮೊಯ್ಲಿ ಅವರಿಗೆ ಹಿನ್ನಡೆಯಾಗುತ್ತಿದ್ದಂತೆ ಕರಾವಳಿಯಲ್ಲಿ ಅವರ ಸೋಲಿಗೆ ಎತ್ತಿನಹೊಳೆ ಯೋಜನೆ ಕಾರಣ ಎನ್ನುವ ಪರಿಸರವಾದಿಗಳ ಕೂಗು ಆರಂಭವಾಗಿದೆ.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಭಾವವಿದ್ದು, ಇಂದಿನ ಈ ಪರಿಸ್ಥಿತಿಗೆ ಎತ್ತಿನಹೊಳೆ ಯೋಜನೆ ಕಾಮಗಾರಿಯೂ ಒಂದು ಕಾರಣ ಎಂದು ಪರಿಸರವಾದಿಗಳು ಈಗಾಗಲೇ ಆಕ್ರೋಶ ವ್ಯಕ್ತಪಡಿಸಿದ್ದರು. ಯೋಜನೆ ಕೈಬಿಡಬೇಕು ಎಂದು ಒತ್ತಾಯಿಸಿ ಜಿಲ್ಲೆಯಲ್ಲಿ ಈ ಹಿಂದೆ ಅನೇಕ ಪ್ರತಿಭಟನೆಗಳು ನಡೆದಿದ್ದವು. ಈ ಯೋಜನೆಗೆ ಕಾರಣರಾದ ವೀರಪ್ಪ ಮೊಲಿ ಮತ್ತು ಸದಾನಂದ ಗೌಡ ಚುನಾವಣೆಯಲ್ಲಿ ಸೋಲಬೇಕು ಎಂದು ಆಶಿಸಿದ್ದರು. ಕೆಲವು ವರ್ಷಗಳ ಹಿಂದೆ ವೀರಪ್ಪ ಮೊಯ್ಲಿ ಅವರು ಮಂಗಳೂರಿಗೆ ಆಗಮಿಸಿದ್ದಾಗ ಕಪ್ಪು ಬಾವುಟ ಪ್ರದರ್ಶನ ಕೂಡ ನಡೆದಿತ್ತು. ಪ್ರಸ್ತುತ ಮತ್ತೆ ಕರಾವಳಿಯಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಜೀವನದಿ ಗಳಾದ ಕುಮಾರಧಾರಾ, ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಇಲ್ಲ.
ಜಿಲ್ಲೆಯಲ್ಲಿ ಪರಿಸರವಾದಿಗಳು ಮೊಲಿ ಅವರನ್ನು ವಿರೋಧಿಸಲು ಕಾರಣ ಇದೆ. ಇತ್ತೀಚೆಗೆ ಚಿಕ್ಕಬಳ್ಳಾಪುರ ದಲ್ಲಿ ನಡೆದ ಲೋಕಸಭಾ ಚುನಾವಣೆ ಪ್ರಚಾರದ ವೇಳೆ, “ಬಯಲು ಸೀಮೆಗೆ ಎತ್ತಿನಹೊಳೆ ನೀರು ಹರಿಸಿಯೇ ನಾನು ಪ್ರಾಣ ಬಿಡುತ್ತೇನೆ. ಇದಕ್ಕೆ ಅನೇಕ ಮಂದಿ ವಿರೋಧಿಸುತ್ತಿದ್ದಾರೆ. ಆದರೆ ನಾನು ಹೆದರುವುದಿಲ್ಲ. ಈ ಭಾಗಕ್ಕೆ ನೀರು ಹರಿಸದೆ ಸಾಯುವುದಿಲ್ಲ. ಎತ್ತಿನಹೊಳೆ ಯೋಜನೆಯಿಂದ ಕರಾವಳಿ ಭಾಗದ ಜನರು ನನಗೆ ಕಪ್ಪು ಪತಾಕೆ ಹಾರಿಸಿದರು. ನಾನು ಅವರ ವಿರೋಧ ಕಟ್ಟಿಕೊಂಡೆ. ಯಾಕೆ ಸ್ವಂತ ಊರಿನವರ ವಿರೋಧ ಕಟ್ಟಿಕೊಳ್ಳುತ್ತಿಯಾ ಅಂತ ನನ್ನ ಕೆಲವು ಹಿತೈಷಿಗಳು ಹೇಳಿದರು. ಆದರೆ ಎತ್ತಿನ ಹೊಳೆ ನೀರನ್ನು ಇತ್ತ ಹರಿಸುತ್ತೇನೆ ಎಂದು ಚಿಕ್ಕಬಳ್ಳಾಪುರ ಜನರಿಗೆ ಮಾತುಕೊಟ್ಟಿದ್ದೇನೆ’ ಎಂದಿದ್ದರು.
ಪರಿಸರವಾದಿ ದಿನೇಶ್ ಹೊಳ್ಳ “ಉದಯವಾಣಿ’ಗೆ ಪ್ರತಿಕ್ರಿಯಿಸಿ, ಮೊಯ್ಲಿ ತುಳುನಾಡಿನ ಜನರ ಲಾಭ ತೆಗೆದುಕೊಂಡು, ಎತ್ತಿನಹೊಳೆ ವಿಚಾರದಲ್ಲಿ ಇಲ್ಲಿನ ಜನರಿಗೆ ದ್ರೋಹ ಬಗೆದದ್ದೇ ಅವರ ಸೋಲಿಗೆ ಕಾರಣ. ಬಯಲು ಸೀಮೆಗೆ ಎತ್ತಿನಹೊಳೆ ನೀರು ಹರಿಸುತ್ತೇನೆ ಎಂದು ಎರಡು ಚುನಾವಣೆಯಲ್ಲೂ ಹೇಳಿದ್ದರು. ಆದರೆ ಇಂದಿಗೂ ಅದು ಸಾಕಾರಗೊಳ್ಳಲಿಲ್ಲ. ಇದೇ ಕಾರಣಕ್ಕೆ ಅಲ್ಲಿನ ಮತದಾರರು ಮೊಲಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಬಯಲು ಸೀಮೆಗೆ ಕುಡಿಯುವ ನೀರಿಗೆ ಪರ್ಯಾಯ ಯೋಜನೆಯನ್ನು ರೂಪಿಸಲಿ. ಎತ್ತಿನಹೊಳೆ ಯೋಜನೆಗೆ ಕಾರಣೀಕರ್ತರಾದ ವೀರಪ್ಪ ಮೊಯ್ಲಿ ಅವರ ಸೋಲು ನಮಗೆ ಸಂತಸ ತಂದಿದೆ. ಅದೇ ರೀತಿ ಸದಾನಂದ ಗೌಡ ಅವರು ಕೂಡ ಸೋಲಬೇಕಿತ್ತು ಎಂದು ತಿಳಿಸಿದ್ದಾರೆ.
ಕರಾವಳಿಯಲ್ಲಿ ಮಳೆ ಇಲ್ಲದೆ ನೀರಿಗೆ ಬರ ಇದೆ. ಇದಕ್ಕೆ ಎತ್ತಿನಹೊಳೆ ಯೋಜನೆಯೇ ಮೂಲ ಕಾರಣ ಎಂದು ಆಕ್ರೋಶಿಸಿ ಪರಿಸರವಾದಿಗಳು ಎತ್ತಿನ ಹೊಳೆ ರೂವಾರಿಗಳಿಗೆ ಸ್ವಾಗತ ಕೋರುವ ಬ್ಯಾನರ್ ಅನ್ನು ಇತ್ತೀಚೆಗೆ ನಗರದ ಅನೇಕ ಕಡೆಗಳಲ್ಲಿ ಅಳವಡಿಸಿದ್ದರು.