Advertisement

ಮಾನವನ ಸಾಧಕ ಬಾಧಕಗಳಿಗೆ ಕಾರಣ ಮನಸ್ಸು

09:50 PM Dec 15, 2019 | Lakshmi GovindaRaj |

ಚಿಂತಾಮಣಿ: ಮಾನವನ ಸಾಧಕ ಬಾಧಕಗಳಿಗೆ ಕಾರಣ ಮನಸ್ಸು. ಈ ಮನಸ್ಸಿನ ಮೇಲೆ ನಡೆಯುವ ಮಾಯೆಯ ಆಕ್ರಮಣವು ನಿಂತಾಗ ಮಾತ್ರ ನಿಶ್ಚಲವಾದ ತತ್ವ ಗೋಚರವಾಗುತ್ತದೆ ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್‌.ಜಯರಾಮ್‌ ಅಭಿಪ್ರಾಯಪಟ್ಟರು. ಕೈವಾರದ ಶ್ರೀ ಯೋಗಿನಾರೇಯಣ ಮಠದ ವತಿಯಿಂದ ಬೆಂಗಳೂರು ಯಲಹಂಕದ ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಧರ್ಮ ಚಿಂತನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಆಸ್ತಿ ಹಿಂದೆ ಬರುವುದಿಲ್ಲ: ಇಂದ್ರಿಯ ನಿಗ್ರಹಿಸದ ಹೊರತು ಮಾಯೆಯ ಆಕ್ರಮಣವನ್ನು ಹೊಡೆದೊಡಿಸಲು ಸಾಧ್ಯವಿಲ್ಲ. ಕಣ್ಣಿಗೆ ಕಾಣುವ ಬಹಿರಂಗದ ಮಾಯಾ ಜಗತ್ತನ್ನು ನಂಬಿ ಮೋಸ ಹೋಗಬಾರದು. ಪ್ರಾಪಂಚಿಕ ವಿಷಯಗಳಲ್ಲಿ ಆಸಕ್ತನಾಗಿ ಜೀವನಪೂರ್ತಿ ಸವೆಸಿ ದೇಹಾಂತ್ಯವಾಗುವ ಸಮಯದಲ್ಲಿ ಸಂಪಾದಿಸಿದ ಆಸ್ತಿ ಯಾವುದು ಹಿಂದೆ ಬರುವುದಿಲ್ಲ. ಈ ಸತ್ಯವನ್ನು ಅರಿತು ಆತ್ಮೋದ್ಧಾರಕ್ಕಾಗಿ ಹಾಗೂ ಸಮಾಜದ ಒಳಿತಿಗಾಗಿ ನಿಷ್ಕಾಮ ಕರ್ಮಿಯಾಗಿ ಕೆಲಸ ಮಾಡಬೇಕು ಎಂದರು.

ಗುರುವಿನ ಮಾರ್ಗದರ್ಶನ ಅಗತ್ಯ: ಭಕ್ತಿಯ ಬಾಹ್ಯಾಡಂಬರದಿಂದ ಮುಕ್ತಿ ಸಿಗುವುದಿಲ್ಲ. ಅಂತರಂಗದ ಸಾಧನೆ ಶ್ರೇಷ್ಠವಾದದ್ದು. ಅಂತರಂಗದಲ್ಲಿ ದ್ವೇಷ, ಅಸೂಯೆ, ಸ್ವಾರ್ಥ ಮುಂತಾದ ಕಲ್ಮಷ ತೆಗೆದು, ಅಲ್ಲಿ ಭವ್ಯ ಮಂದಿರ ನಿರ್ಮಿಸಿ, ಮಾನಸಪೂಜೆಯನ್ನು ನಿರಂತರವಾಗಿ ಮಾಡಬೇಕು. ಗುರುವಿನ ಮಾರ್ಗದರ್ಶನವಿಲ್ಲದೆ ಅಂತರಂಗದ ಸಾಧನೆ ಸಾಧ್ಯವಿಲ್ಲ ಎಂಧರು. ಮಾನವ ಜನ್ಮದಲ್ಲಿ ಪ್ರತಿಯೊಬ್ಬರೂ ಗುರುಭಕ್ತಿಯಲ್ಲಿ ತೊಡಗಬೇಕು. ಗುರುಭಕ್ತಿಯಿಂದ ಆತ್ಮಚಿಂತನೆ ಪ್ರಾರಂಭವಾಗುತ್ತದೆ. ಆತ್ಮಚಿಂತನೆಯಿಂದ ಆತ್ಮಜ್ಞಾನವು ಸಿಗುತ್ತದೆ. ಹಲವಾರು ಶಾಸ್ತ್ರಗಳ ಓದಿಗಿಂತಲೂ ಆತ್ಮಜ್ಞಾನ ಪವಿತ್ರ ಹಾಗೂ ಶ್ರೇಷ್ಠವಾದದ್ದು ಎಂದರು.

ಆಧ್ಯಾತ್ಮದ ಲೇಪನ: ಹಿರಿಯ ಆಧ್ಯಾತ್ಮ ಚಿಂತಕ ಡಾ.ಬಾಬುಕೃಷ್ಣಮೂರ್ತಿ ಮಾತನಾಡಿ, ಕೈವಾರದ ತಾತಯ್ಯನವರು ಬಳೆಗಾರನಾಗಿ ಊರೂರು ಸುತ್ತಿ ಸಾಮಾನ್ಯ ಜನರ ಜೀವನದ ಸೂಕ್ಷ್ಮ ಸಂವೇದನೆಗಳಿಗೆ ಮಾನವೀಯತೆ ನೆಲೆಗಟ್ಟಿನಲ್ಲಿ ಆಧ್ಯಾತ್ಮದ ಲೇಪನ ನೀಡಿ ಕೀರ್ತನೆಗಳಾಗಿಸಿದ್ದಾರೆ.  ಸರಳವಾದ ಭಾಷೆಯಲ್ಲಿ ಪರತತ್ವದ ಚಿಂತನೆಗಳನ್ನು ಓರೆಗಚ್ಚಿದ್ದಾರೆ. ಮನಸ್ಸುಗಳಲ್ಲಿರುವ ದುಃಖ, ದುಮ್ಮಾನಗಳಿಗೆ ಸಾಂತ್ವನದ ನುಡಿಗಳನ್ನು ನುಡಿದಿದ್ದಾರೆ.

ಆತ್ಮಶಕ್ತಿಯ ಮಹತ್ವವನ್ನು ಜಗತ್ತಿಗೆ ಸಾರಿದ್ದಾರೆ. ತಾತಯ್ಯನವರು ಕಾಲಜ್ಞಾನದ ಭವಿಷ್ಯವಾಣಿಯಿಂದ ಮಾನವಕುಲವನ್ನು ಎಚ್ಚರಿಸಿದ್ದಾರೆ ಎಂದರು. ಕಾರ್ಯಕ್ರಮಕ್ಕೂ ಮೊದಲು ಯಲಹಂಕದಲ್ಲಿರುವ ಶ್ರೀನಿವಾಸ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ದೇವಾಲಯದಿಂದ ಕಾರ್ಯಕ್ರಮ ನಡೆಯುವ ಸ್ಥಳದವರೆಗೂ ಶೋಭಾಯಾತ್ರೆಯಲ್ಲಿ ಬರಲಾಯಿತು. ಮಹಿಳೆಯರು ಕಳಶಗಳನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿದರು.

Advertisement

ಶ್ರೀಯೋಗಿನಾರೇಯಣ ಸಂಕೀರ್ತನಾ ಯೋಜನೆ ಸಂಚಾಲಕರಾದ ವಾನರಾಶಿ ಬಾಲಕೃಷ್ಣ ಭಾಗವತರ್‌ರವರು ಪ್ರಾರ್ಥಿಸಿದರು. ಯಲಹಂಕದ ಹಲವಾರು ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಜಿಪಂ ಅಧ್ಯಕ್ಷ ಚಿಕ್ಕನರಸಿಂಹಯ್ಯ, ವೈ.ಜಿ.ಕೇಶವ, ವಿ.ಮುನಿರಾಜು, ಎನ್‌.ಮುನಿರಾಜು, ಸೂರ್ಯಪ್ರಕಾಶ್‌, ಗಿರೀಶ್‌, ಎಂ.ವಿ.ಎಂ.ಶ್ರೀನಿವಾಸ ಮೂರ್ತಿ, ಚಿತ್ರ ನಿರ್ಮಾಪಕ ವಿ.ರಾಮು, ದಿಲೀಪ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next