Advertisement

ದ ಕಾಕೇಸಿಯನ್‌ ಚಾಕ್‌ ಸರ್ಕಲ್‌

06:00 AM May 13, 2018 | Team Udayavani |

ಜರ್ಮನ್‌ ನಾಟಕಕಾರ ಮತ್ತು ಕತೆಗಾರ ಬೆರ್‌ತೋಲ್ತ್‌ ಬ್ರೆಷ್ಟ್  (Bertolt Brecht) ನ ದ ಕಾಕೇಸಿಯನ್‌ ಚಾಕ್‌ ಸರ್ಕಲ್‌ ಎಂಬ ಪ್ರಖ್ಯಾತ ನಾಟಕದಲ್ಲಿ ಹೀಗೊಂದು ಪ್ರಸಂಗವಿದೆ:
ಕಾಕೇಸಿಯನ್‌ ನಗರವನ್ನಾಳುವ ರಾಜ್ಯಪಾಲನ ಹೆಂಡತಿ ನತೆಲ್ಲಾ , ಮೈಕೆಲ್‌ ಎನ್ನುವ ಗಂಡು ಮಗುವಿಗೆ ಜನ್ಮ ನೀಡಿರುತ್ತಾಳೆ. ಆಗ ರಾಜ್ಯಪಾಲನ ತಮ್ಮ ತನ್ನ ಅಣ್ಣನನ್ನು ಕೊಂದು ತಾನೇ ಅಧಿಕಾರವನ್ನು ಹೊಂದಲು ಹವಣಿಸಿ ದಂಗೆ ಏಳುತ್ತಾನೆ. ರಾಜ್ಯಪಾಲನ ಮಡದಿ ನತೆಲ್ಲಾ ನಗರವನ್ನು ಬಿಟ್ಟು ಓಡಿಹೋಗುತ್ತಾಳೆ. ಓಡಿಹೋಗುವ ಅವಸರದಲ್ಲಿ ತನ್ನ ಮಗುವನ್ನು ಅಲ್ಲಿಯೇ ಬಿಟ್ಟು ಹೋಗುತ್ತಾಳೆ.

Advertisement

ಗ್ರುಷಾ ಎನ್ನುವ ಅಡುಗೆಮನೆಯ ಕೆಲಸದಾಕೆ ನತೆಲ್ಲಾ ಬಿಟ್ಟುಹೋದ ಮೈಕೆಲ್‌ನನ್ನು ವೈರಿಗಳಿಂದ ರಕ್ಷಿಸಲು ಅವನನ್ನು ತೆಗೆದುಕೊಂಡು ಕಾಕೇಸಿಯನ್‌ ನಗರವನ್ನು ಬಿಟ್ಟು ಓಡಿಹೋಗುತ್ತಾಳೆ. ಈ ಮಧ್ಯೆ ಗ್ರುಷಾಳಿಗೆ ಸೈಮನ್‌ ಎಂಬ ಸೈನಿಕನೊಡನೆ ನಿಶ್ಚಿತಾರ್ಥವೂ ಆಗಿರುತ್ತದೆ. ಆದರೂ ಗ್ರುಷಾ, ಆ ಮಗುವಿನ ಸಂರಕ್ಷಣೆಗಾಗಿ ಸರ್ವಸ್ವವನ್ನು ಮುಡಿಪಾಗಿರಿಸಿ, ತನ್ನ ಹೆಚ್ಚಿನ ಸಂಪತ್ತನ್ನೆಲ್ಲ ವ್ಯಯಿಸುತ್ತಾಳೆ. ತನ್ನ ಪ್ರಾಣವನ್ನೂ ಅಪಾಯಕ್ಕೆ ಒಡ್ಡಿ ಅವನನ್ನು ಕಾಪಾಡುತ್ತಾಳೆ.

ಎರಡು ವರ್ಷಗಳ ನಂತರ ಹಿಂದಿನ ರಾಜ್ಯಪಾಲನ ಪಕ್ಷದವರು ಸೈನ್ಯದೊಂದಿಗೆ ಬಂದು ಮತ್ತೆ ಕಾಕೇಸಿಯನ್‌ ನಗರವನ್ನು ತಮ್ಮ ವಶಕ್ಕೆ ಪಡೆದುಕೊಳ್ಳುತ್ತಾರೆ. ಆಗ ರಾಣಿ ನತೆಲ್ಲಾ ಕೂಡ ನಗರಕ್ಕೆ ಹಿಂತಿರುಗುತ್ತಾಳೆ. ರಾಜ್ಯಪಾಲನ ಆಸ್ತಿ ಅವಳಿಗೆ ಸಿಗಬೇಕಾದರೆ ಆಕೆಯ ಮಗ ಮೈಕೆಲ್‌ ಕೂಡ ಅವಳ ಜೊತೆಗಿರಬೇಕಾಗುತ್ತದೆ. ಅದಕ್ಕಾಗಿ ಮೈಕೆಲ್‌ನನ್ನು ಕರೆತರಲು ಕೆಲ ಸೈನಿಕರನ್ನು ಗ್ರುಷಾಳ ಬಳಿ ಕಳುಹಿಸುತ್ತಾಳೆ. ಆ ಸೈನಿಕರು ಗ್ರುಷಾಳಿಂದ ಮೈಕೆಲ್‌ ನನ್ನು ಬಲಾತ್ಕಾರದಿಂದ ಎಳೆದು ತರುತ್ತಾರೆ. ಆಗ ಗ್ರುಷಾ ಬೊಬ್ಬಿಡುತ್ತ ತ‌ನ್ನ ಸಾಕುಮಗನನ್ನು ಹಿಂಬಾಲಿಸಿಕೊಂಡು ಕಾಕೇಸಿಯನ್‌ ನಗರಕ್ಕೆ ಬರುತ್ತಾಳೆ.

ಮಗು ಮೈಕೆಲ್‌ ಯಾರಿಗೆ ಸಲ್ಲಬೇಕು ಎನ್ನುವ ವಿವಾದ ನ್ಯಾಯಾಲಯದ ಮೆಟ್ಟಿಲೇರುತ್ತದೆ. ನ್ಯಾಯಾಲಯದಲ್ಲಿ ನತೆಲ್ಲಾ ಮೈಕೆಲ್‌ನಿಗೆ ಜನ್ಮವಿತ್ತ ತಾಯಿ ತಾನೆಂದು ವಾದಿಸಿ ಅವನನ್ನು ವಶಕ್ಕೆ ಪಡೆಯುವ ಅಧಿಕಾರ ತನ್ನದೆಂದೂ ಪ್ರತಿಪಾದಿಸುತ್ತಾಳೆ. ಹೆತ್ತತಾಯಿ ತಾನಲ್ಲ ನಿಜ, ಆದರೆ ಎರಡು ವರ್ಷಗಳಿಂದ ಅವನನ್ನು ಅಮ್ಮನಂತೆ ಪ್ರೀತಿಯಿಂದ ಸಾಕಿ, ಸಲಹಿದ ತನಗೆ ಅವನನ್ನು ಬಿಟ್ಟಿರಲಾಗದು ಎಂದು ಗ್ರುಷಾ ತನ್ನ ವಿಚಾರವನ್ನು ಮಂಡಿಸುತ್ತಾಳೆ. ನ್ಯಾಯಾಧೀಶ ಅವರಿಬ್ಬರ ವಾದಗಳನ್ನೂ ಆಲಿಸುತ್ತಾನೆ. ಅನಂತರ ಸೀಮೆಸುಣ್ಣದ ಕಡ್ಡಿ (chalk) ಯಿಂದ ಒಂದು ವೃತ್ತವನ್ನೆಳೆದು ಅದರ ಕೇಂದ್ರದಲ್ಲಿ ಮೈಕೆಲ್‌ನನ್ನು ನಿಲ್ಲಿಸುತ್ತಾನೆ ಮತ್ತು ಇಬ್ಬರು ಮಹಿಳೆಯರಿಗೂ ಎರಡು ಕಡೆಗಳಿಂದ ಅವನನ್ನು ತಮ್ಮತ್ತ ಎಳೆಯುವಂತೆ ಹೇಳುತ್ತಾನೆ. ಯಾರು ಮಗುವನ್ನು ತಮ್ಮೆಡೆಗೆ ಎಳೆದುಕೊಳ್ಳುವಲ್ಲಿ ಶಕ್ತರಾಗುತ್ತಾರೆಯೋ ಮಗು ಅವರ ವಶವಾಗುತ್ತದೆ ಎಂದು ಹೇಳುತ್ತಾನೆ.

ನತೆಲ್ಲಾ ತನ್ನ ಮಗನನ್ನು ಜೋರಾಗಿ ತನ್ನತ್ತ ಎಳೆಯುತ್ತಾಳೆ. ಆದರೆ, ತಾನೂ ಈ ಕಡೆಯಿಂದ ಎಳೆದರೆ ಮಗುವಿಗೆ ನೋವಾಗುವುದೆಂದು ಗ್ರುಷಾ ಅವನನ್ನು ತನ್ನತ್ತ ಎಳೆಯದೆ ಬಿಟ್ಟುಬಿಡುತ್ತಾಳೆ. ನ್ಯಾಯಾಧೀಶ ಇನ್ನೊಮ್ಮೆ ಅದೇ ರೀತಿ ಎಳೆದಾಡಲು ಸೂಚಿಸುತ್ತಾನೆ. ಎರಡನೆಯ ಸಲವೂ ಗ್ರುಷಾ ಮೈಕೆಲ್‌ನನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡುವುದಿಲ್ಲ.  ಎರಡು ಬಾರಿಯೂ ಮೈಕೆಲ್‌ನ ನಿಜವಾದ ತಾಯಿ ನತೆಲ್ಲಾ ಜಯಿಸಿದರೂ, ವಿವೇಚನಾಶೀಲನಾದ ನ್ಯಾಯಾಧೀಶ, ಮೈಕೆಲ್‌ನನ್ನು ಅವನ ಸಾಕುತಾಯಿಯಾದ ಗ್ರುಷಾಳ ವಶಕ್ಕೆ ಒಪ್ಪಿಸುತ್ತಾನೆ.  ಮಾತೃತ್ವ ಎಂಬುದು ಯಾರಲ್ಲಿಯೂ ಇರಬಹುದಾದ ಹೃದಯವಂತಿಕೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next