ಗದಗ: ಗದಗ- ಬೆಟಗೇರಿ ಅವಳಿ ನಗರದ ವಿವಿಧೆಡೆ ರಸ್ತೆ ವಿಭಜಕಗಳ ಮಧ್ಯೆ ನೆಟ್ಟಿರುವ ಸಸಿಗಳನ್ನು ಉಳಿಸಿಕೊಳ್ಳಲು ನಗರಸಭೆ ತೋರುವಷ್ಟು ಕಾಳಜಿಯನ್ನು ಬೀಡಾಡಿ ದನಗಳ ದಾಹ ತೀರಿಸುವತ್ತ ಗಮನ ಹರಿಸುತ್ತಿಲ್ಲ. ಹೀಗಾಗಿ ಪ್ರಾಣಿಗಳು ಬಿಸಿಲಿನ ಬೇಗೆಯಿಂದ ದೇಹ ತಣಿಸಿಕೊಳ್ಳಲು ಪೋಲಾಗುವ ನಳ ಹಾಗೂ ರಸ್ತೆಗಳಲ್ಲಿ ನಿಂತ ನೀರಿಗೆ ಬಾಯಿವೊಡ್ಡುವಂತಾಗಿದೆ.
ಹೌದು, ಸತತ ಬರಗಾಲ ಹಾಗೂ ಮಳೆ ಕೊರತೆಯಿಂದಾಗಿ ಬಿಸಿಲಿನ ತಾಪ ದಿನಗಳೆದಂತೆ ಹೆಚ್ಚುತ್ತಿದೆ. ಕಳೆದ ಹದಿನೈದು ದಿನಗಳಿಂದ ಉಷ್ಣಾಂಶ ಗರಿಷ್ಠ 38ರಿಂದ 40 ಡಿಗ್ರಿ ಸೆಲ್ಸಿಯಸ್ ವರೆಗೆ ದಾಖಲಾಗುತ್ತಿದೆ. ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ಜನಸಾಮಾನ್ಯರು ಎಳೆ ನೀರು, ತಂಪು ಪಾನೀಯಗಳಿಗೆ ಮೊರೆ ಹೋಗುತ್ತಿದ್ದಾರೆ. ಆದರೆ, ಬಿರು ಬಿಸಿಲಿನಿಂದ ಪ್ರಾಣಿಗಳಿಗೆ ಕುಡಿಯುವ ನೀರು ಸಿಗದೇ ಅನುಭವಿಸುವ ಸಂಕಷ್ಟ ಅವುಗಳಿಗೇ ಗೊತ್ತು.
ಆಗಾಗ ನಗರಸಭೆ ನಡೆಸಿದ ಬೀಡಾಡಿ ದನಗಳ ಕಾರ್ಯಾಚರಣೆಯಿಂದಾಗಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇತ್ತೀಚೆಗೆ ಬೀಡಾಡಿ ದನಗಳ ಸಂಖ್ಯೆ ಭಾಗಶಃ ಕಡಿಮೆಯಾಗಿವೆ. ಆ ಪೈಕಿ ಬಹುತೇಕ ಮಾಲೀಕರಿಗೆ ಸೇರಿವೆ. ಆದರೆ, ಮಾಲೀಕರ ಮನೆಗಳಲ್ಲಿ ಜಾಗ, ಮೇವಿನ ಕೊರತೆಯಿಂದಾಗಿ ಸೂರ್ಯೋದಯವಾಗುತ್ತಿದ್ದಂತೆ ದನಗಳು ಬೀದಿಗೆ ಬರುತ್ತಿವೆ. ಹೀಗಾಗಿ ನೂರಾರು ದನಗಳು ಹಸಿವು, ದಾಹ ತೀರಿಸಿಕೊಳ್ಳಲು ಪರಿತಪಿಸುವಂತಾಗಿದೆ.
ನಗರಸಭೆ ನೀರಿನ ತೊಟ್ಟಿಗಳು ಮಾಯ!:
ಕೆಲ ವರ್ಷಗಳ ಹಿಂದೆ ಗದಗ- ಬೆಟಗೇರಿ ಅವಳಿ ನಗರದಲ್ಲಿ ಬೀಡಾಡಿ ದನಗಳ ಅನುಕೂಲಕ್ಕಾಗಿ ನಗರಸಭೆಯಿಂದ ಹಳೇ ಬಸ್ ನಿಲ್ದಾಣ, ವೀರೇಶ್ವರ ಗ್ರಂಥಾಲಯ, ಒಕ್ಕಲಗೇರಿ, ಧೋಬಿ ಘಾಟ, ಭೀಷ್ಮ ಕೆರೆ, ಮಹೇಂದ್ರಕರ ಸರ್ಕಲ್, ಪಾಲಾ-ಬಾದಾಮಿ ರಸ್ತೆ, ಬೆಟಗೇರಿ ಸೇರಿದಂತೆ ಸುಮಾರು 8-10 ಕಡೆ ನೀರಿನ ತೊಟ್ಟಿ ಇರಿಸಲಾಗಿತ್ತು. ಅದರೊಂದಿಗೆ ರೈಲ್ವೆ ನಿಲ್ದಾಣದ ಬಳಿ ರೈಲ್ವೆ ಇಲಾಖೆಯಿಂದಲೇ ನೀರಿನ ತೊಟ್ಟಿ ಇಡಲಾಗಿತ್ತು. ಬೇಸಿಗೆ ದಿನಗಳಲ್ಲಿ ಎಲ್ಲ ನೀರಿನ ತೊಟ್ಟಿಗಳನ್ನೂ ನಗರಸಭೆ ಟ್ಯಾಂಕರ್ ಮೂಲಕ ನೀರು ತುಂಬಿಸಲು ವಿಶೇಷ ಒತ್ತು ನೀಡಲಾಗುತ್ತಿತ್ತು. ಆ ಪೈಕಿ ನಗರಸಭೆ ಅಳವಡಿಸಿದ್ದ ನೀರಿನ ತೊಟ್ಟಿಗಳು ಸಿಮೆಂಟಿನದ್ದಾಗಿದ್ದರಿಂದ ರೈಲ್ವೆ ನಿಲ್ದಾಣ ಸಮೀಪದ ದುರ್ಗಾ ದೇವಿ ದೇವಸ್ಥಾನದ ಬಳಿ ಅಳವಡಿಸಿರುವ ತೊಟ್ಟಿ ಹೊರತಾಗಿ ಬಹುತೇಕ ಮಾಯವಾಗಿವೆ ಎಂಬುದು ನಗರಸಭೆ ಮೂಲಗಳ ಹೇಳಿಕೆ.
ಇನ್ನು ರೈಲ್ವೆ ಇಲಾಖೆ ಕಾಮಗಾರಿಯೊಂದರ ನಿಮಿತ್ತ ನಿಲ್ದಾಣದ ಬಳಿ ತೊಟ್ಟಿಯನ್ನೂ ಧ್ವಂಸಗೊಳಿಸಿದ್ದರಿಂದ ಬೀಡಾಡಿ ದನಗಳೊಂದಿಗೆ ಅಲ್ಲಿನ ಟಾಂಗಾಗಳ ಕುದುರೆಗಳೂ ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಟಾಂಗಾ ಕುದುರೆಗಳ ನೀರಿನ ದಾಹ ತೀರಿಸಿಲು ಆನತಿ ದೂರದ ದುರ್ಗಾದ ದೇವಿ ದೇವಸ್ಥಾನದ ಬಳಿ ತೊಟ್ಟಿಗೆ ಕರೆತರುತ್ತಾರೆ ಎಂದು ಹೇಳಲಾಗಿದೆ.
ಆದರೆ, ಬೆಟಗೇರಿ ಬಸ್ ನಿಲ್ದಾಣ, ಸೆಟ್ಲಮೆಂಟ್, ಸ್ಟೇಷನ್ ರಸ್ತೆ, ಗಾಂಧಿ ವೃತ್ತ, ಶಾನಭಾಗ ಹೋಟೆಲ್ ಭಾಗದಲ್ಲಿ ಇಂದಿಗೂ ಹೆಚ್ಚಾಗಿ ಬೀಡಾಡಿ ದನಗಳು ಬೀಡು ಬಿಡುತ್ತಿವೆ. ಆಯಾ ಭಾಗದಲ್ಲಿ ಪ್ರಾಣಿಗಳು ದಾಹ ನೀಗಿಸಿಕೊಳ್ಳಲು ಯಾವುದೇ ವ್ಯವಸ್ಥೆಯಿಲ್ಲದೇ, ಪರದಾಡುವಂತಾಗಿದೆ. ಇನ್ನು ರಸ್ತೆಗಳಲ್ಲಿ ಬೀಡಾಡಿ ದನಗಳ ಅಡ್ಡಾದಿಡ್ಡಿ ಓಡಾಟದಿಂದ ವಾಹನ ಸವಾರರಿಗೆ ಸಂಚಕಾರ ತಂದೊಡ್ಡುತ್ತಿವೆ ಎಂಬುದು ಗಮನಾರ್ಹ.