Advertisement

ಕ್ಯಾಚಿ ಟೈಟಲ್ ಅರ್ಥ ಆಗೋದೇ ಕಷ್ಟ

11:30 PM Jul 04, 2019 | mahesh |
ಕೆಲವರು ತಮ್ಮ ಚಿತ್ರ ತನ್ನ ಕಥಾಹಂದರ, ತಾರಾಗಣದ ಮೂಲಕ ಸುದ್ದಿಯಾಗಬೇಕು ಎಂದು ಬಯಸಿದರೆ, ಇನ್ನು ಕೆಲವರು ತಮ್ಮ ಚಿತ್ರ ಟೈಟಲ್ ಮೂಲಕವೇ ಸುದ್ದಿಯಾಗಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ತಮ್ಮ ಚಿತ್ರಕ್ಕೆ ವಿಚಿತ್ರ ಹೆಸರುಗಳನ್ನು ಇಡುವುದು ಆ ಮೂಲಕ ಗಮನ ಸೆಳೆಯುವ ಕಸರತ್ತು ಮಾಡುತ್ತಾರೆ. ಅದರಲ್ಲೂ ಕಳೆದ ಕೆಲ ವರ್ಷಗಳಿಂದ ಚಿತ್ರರಂಗದಲ್ಲಿ ಇಂಥದ್ದೊಂದು ಅರ್ಥವಿರದ ವ್ಯರ್ಥ ಪ್ರಯತ್ನ ಆಗಾಗ್ಗೆ ನಡೆಯುತ್ತಲೇ ಇರುತ್ತದೆ. ಇತ್ತೀಚೆಗೆ ಅಂಥದ್ದೇ ಒಂದು ಚಿತ್ರತಂಡ ತಮ್ಮ ಚಿತ್ರಕ್ಕೆ ವಿಚಿತ್ರ ಹೆಸರಟನ್ನಿಟ್ಟು, ಪ್ರೇಕ್ಷಕರ ತಲೆ ಕೆರೆದುಕೊಳ್ಳುವಂತೆ ಮಾಡಿದೆ.ಅಂದಹಾಗೆ, ಆ ಚಿತ್ರದ ಹೆಸರು ‘ಕಿರು ಮಿನ್ಕಣಜ’

‘ಕಿರು’ ಎನ್ನುವ ಪದಕ್ಕಾದರೂ ಎಲ್ಲರಿಗೂ ಅರ್ಥ ತಿಳಿದಿದೆ. ಆದರೆ ಈ ‘ಮಿನ್ಕಣಜ’ ಎಂಬ ಪದಕ್ಕೆ ಅರ್ಥವೇನು ಅಂದ್ರೆ, ‘ಕನ್ನಡದಲ್ಲಿ ಇಂಥದ್ದೊಂದು ಪದವೇ ಇಲ್ಲ. ಇಂಗ್ಲೀಷ್‌ನಲ್ಲಿ ಈ ಪದವಿದೆ. ಕನ್ನಡದಲ್ಲಿ ಇಲ್ಲಿಯವರೆಗೆ ಯಾರೂ ಈ ಪದ ಬಳಸದಿದ್ದರಿಂದ, ಚಿತ್ರಕ್ಕೆ ಕ್ಯಾಚಿ ಆಗಿರಲಿ ಎನ್ನುವ ಕಾರಣಕ್ಕೆ ಈ ಪದವನ್ನು ಬಳಸಿಕೊಂಡಿದ್ದೇವೆ’ ಎನ್ನುತ್ತದೆ ಚಿತ್ರತಂಡ.

Advertisement

ಇನ್ನು ಅರ್ಥವಿರದ ಅಥವಾ ಅರ್ಥ ಗೊತ್ತಿರದ ಈ ‘ಕಿರು ಮಿನ್ಕಣಜ’ ಶೀರ್ಷಿಕೆಯ ಚಿತ್ರಕ್ಕೆ ಮಂಜು ಎಂ. ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸದ್ಯ ಈ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಪೂರ್ಣಗೊಂಡಿದ್ದು, ಸದ್ಯ ಚಿತ್ರ ಸೆನ್ಸಾರ್‌ ಅಂಗಳದಲ್ಲಿದೆ. ಇತ್ತೀಚೆಗೆ ಈ ಚಿತ್ರತಂಡ ಚಿತ್ರದ ಪ್ರಚಾರದ ಮೊದಲ ಹಂತವಾಗಿ ಒಂದು ಹಾಡನ್ನು ಬಿಡುಗಡೆ ಮಾಡಿದೆ.

ಚಿತ್ರ ಸಾಹಿತಿ ಡಾ. ವಿ ನಾಗೇಂದ್ರ ಪ್ರಸಾದ್‌, ಮಾಜಿ ಸಚಿವ ಟಿ.ಬಿ ಜಯಚಂದ್ರ, ಕರಿಸುಬ್ಬು, ದಿನೇಶ್‌ ಗಾಂಧಿ ಮೊದಲಾದವರು ಕಾರ್ಯಕ್ರಮದಲ್ಲಿ ಹಾಜರಿದ್ದು, ‘ಕಿರು ಮಿನ್ಕಣಜ’ ಚಿತ್ರದ ಮೊದಲ ಹಾಡನ್ನು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಇನ್ನು ಚಿತ್ರದ ಬಗ್ಗೆ ಬೇರೇನೂ ಮಾಹಿತಿಯನ್ನು ಬಿಟ್ಟುಕೊಡದ ಚಿತ್ರತಂಡ, ‘ಚಿತ್ರದ ಟೈಟಲ್ ಬಗ್ಗೆ ಹೇಳಿದ್ರೆ, ಕಥೆಯ ಸಾಲನ್ನು ಬಿಟ್ಟುಕೊಟ್ಟಂತೆ ಆಗುತ್ತದೆ. ಸಸ್ಪೆನ್ಸ್‌-ಥ್ರಿಲ್ಲರ್‌ ಜೊತೆಗೊಂದು ಸುಂದರ ಪ್ರೇಮಕಥೆ ಇರಲಿದೆ. ಒಂದು ವಸ್ತುವಿನ ಮೇಲೆ ಕೇಂದ್ರಿಕೃತಗೊಂಡು, ಅಪರಾಧಗಳು ಆಗುತ್ತಾ ಹೋಗುತ್ತದೆ. ಮುಂದಿನ ತಿಂಗಳು ತೆರೆ ಕಾಣಲಿರುವುದರಿಂದ, ಪ್ರತಿವಾರ ಒಂದೊಂದೇ ಹಾಡನ್ನು ಬಿಡುಗಡೆ ಮಾಡಲಾಗುವುದು’ ಎಂದು ಹೇಳಿ ಸುಮ್ಮನಾಯಿತು. ಸದ್ಯ ಅಷ್ಟಾದರೂ ಚಿತ್ರತಂಡ ಹೇಳಿತಲ್ಲ ಎಂಬ ಸಮಾಧಾನದಿಂದ ಪತ್ರಕರ್ತರು ಕೂಡ ಚಿತ್ರದ ಬಗ್ಗೆ ಹೆಚ್ಚೇನು ಪ್ರಶ್ನೆ ಕೇಳಲು ಮುಂದಾಗಲಿಲ್ಲ. ‘ಕಿರು ಮಿನ್ಕಣಜ’ ಚಿತ್ರದಲ್ಲಿ ನವನಟ­ರಾದ ರವಿ ಚಂದ್ರ. ವಿ, ಅರ್ಜುನ್‌ ರಮೇಶ್‌ ನಾಯಕ ನಟರಾಗಿ ಕಾಣಿಸಿ­ಕೊಳ್ಳುತ್ತಿ­ದ್ದಾರೆ. ಚಿತ್ರದಲ್ಲಿ ವರ್ಷಿಕಾ ನಾಯಕ್‌ ನಾಯಕಿ­ಯಾಗಿ ಕಾಣಿಸಿ­ಕೊಳ್ಳುತ್ತಿದ್ದಾರೆ. ಉಳಿದಂತೆ ಖಳನಾಗಿ ಜೀವನ್‌ ನೀನಾಸಂ, ಶ್ರೀಧರ ನಾಯಕ್‌, ಶ್ರುತಿ ನಾಯಕ್‌ ಹರೀಶ್‌ ನೀನಾಸಂ, ಗೋಪಾಲ್ ಮಹರಾಜ, ಮುಂತಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿ­ದ್ದಾರೆ.

ಚಿತ್ರದಲ್ಲಿ ಒಟ್ಟು ಐದು ಹಾಡುಗ­ಳಿದ್ದು, ಧ್ರುವ­ರಾಜ್‌ ಎಸ್‌-ಗಂಧರ್ವ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಸುರೇಶ್‌ ಬಾಬು ಛಾಯಾಗ್ರಹಣ, ಸುಪ್ರೀತ್‌ ಶಂಕರ್‌ ಸಂಕಲನ ಕಾರ್ಯವಿದೆ. ಜನಾರ್ಧನ್‌ ಆರ್‌. (ದಸೂಡಿ) ಈ ಚಿತ್ರವನ್ನು ನಿರ್ಮಿಸಿ­ದ್ದಾರೆ. ಮಂಡ್ಯ, ಪಾಂಡವಪುರ, ಬೆಂಗಳೂರು ಮೊದಲಾದ ಕಡೆಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಒಟ್ಟಾರೆ ವಿ’ಚಿತ್ರ’ ಹೆಸರಟನ್ನಿಟ್ಟುಕೊಂಡು ತೆರೆಗೆ ಬರುತ್ತಿರುವ ‘ಕಿರು ಮಿನ್ಕಣಜ’ ಚಿತ್ರ ಪ್ರೇಕ್ಷಕರಿಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ ಅನ್ನೋದು ಗೊತ್ತಾಗಬೇಕಾದರೆ, ಇನ್ನೊಂದು ತಿಂಗಳು ಕಾಯಬೇಕು.•

Advertisement

ಜಿ.ಎಸ್‌.ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next