Advertisement

ನಗದು ರಹಿತ ವ್ಯವಹಾರದಿಂದ ಪಾರದರ್ಶಕತೆ

12:07 PM Feb 11, 2017 | Team Udayavani |

ಮೈಸೂರು: ನಗದು ರಹಿತ ವಹಿವಾಟಿನಿಂದ ದೇಶದಲ್ಲಿ  ಭ್ರಷ್ಟಾಚಾರ, ಭಯೋತ್ಪಾದನೆ ಹಾಗೂ ಕಪ್ಪುಹಣ ನಿಗ್ರಹಿಸಲು ಸಾಧ್ಯ ಎಂದು ಕೇಂದ್ರ ಯೋಜನಾ, ಸಾಂಖೀಕ ಹಾಗೂ ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು. ನಗರದ ಜೆ.ಕೆ. ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಡಿಜಿ ಧನ್‌ಮೇಳ ಉದ್ಘಾಟಿಸಿ ಮಾತನಾಡಿದರು.

Advertisement

ದೇಶದಲ್ಲಿ ಆರ್ಥಿಕ ಶಿಸ್ತು ತರುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರಮೋದಿ ಅಮಾನ್ಯಿಕರಣದ ತೀರ್ಮಾನ ಕೈಗೊಂಡ ನಂತರ ದೇಶದಲ್ಲಿ ಭಯೋತ್ಪಾದಕರ ಉಪಟಳ ನಿಂತಿದೆ, ಪಾಕಿಸ್ತಾನದಿಂದ ಬಂದ ಕಪ್ಪುಹಣದಿಂದ ಕಾಶ್ಮೀರದ ಶಾಂತಿ ಕದಡಿದ್ದ ಭಯೋತ್ಪಾದಕರು ಹುಟ್ಟಡಗಿದ್ದಾರೆ. ಸುಮಾರು ಮೂರುವರೆ ತಿಂಗಳು ಮಕ್ಕಳು ಶಾಲೆಗೆ ತೆರಳಲು ಆಗದ ಸ್ಥಿತಿ ನಿರ್ಮಾಣವಾಗಿದ್ದ ಕಾಶ್ಮೀರದಲ್ಲೀಗ ಶಾಂತಿ ನೆಲೆಸಿದೆ.

ಜಾರ್ಖಂಡ್‌, ಛತ್ತೀಸ್‌ಗಡ, ಆಂಧ್ರಪ್ರದೇಶಗಳಲ್ಲಿ ನಕ್ಸಲ್‌ರ ಹಾವಳಿ ಇಲ್ಲದಂತಾಗಿದೆ. ಭ್ರಷ್ಟಾಚಾರವೆಂಬ ಸಾಮಾಜಿಕ ಪಿಡುಗಿಗೆ ಕಡಿವಾಣ ಹಾಕಲು ನಗದು ರಹಿತ ವ್ಯವಹಾರದಿಂದ ಸಾಧ್ಯ ಎಂದರು. ದೇಶದಲ್ಲಿ ಆರ್ಥಿಕ ಶಿಸ್ತು ತರಲು ಸರ್ಕಾರ ವೇಗವಾಗಿ ಕೆಲಸ ಮಾಡುತ್ತಿದೆ. ಇದರ ಮೂಲಕ ಬ್ಯಾಂಕ್‌ನಲ್ಲಿ ಸಾಲ ಸೌಲಭ್ಯ ಸುಲಭವಾಗಿ ಸಿಗುವುದಲ್ಲದೆ, ಬಡ್ಡಿ ದರ ಕೂಡ ಮುಂಬರುವ ದಿನಗಳಲ್ಲಿ ಕಡಿಮೆಯಾಗಲಿದೆ. ಈ ಬಗ್ಗೆ ಜನರಿಗೆ ಹೆಚ್ಚಿನ ಅರಿವು ಮೂಡಿಸಬೇಕಿದೆ ಎಂದು ಹೇಳಿದರು.

ಕ್ಯಾಶ್‌ಲೆಸ್‌ಗಿಂತ ಲೆಸ್‌ಕ್ಯಾಶ್‌ ಆರ್ಥಿಕತೆಗೆ ಹಂತ ಹಂತವಾಗಿ ಒಡ್ಡಿಕೊಳ್ಳಬೇಕು. ನವೆಂಬರ್‌ 8ರ ನಂತರ ಪೆಟ್ರೋಲ್‌ ಬಂಕ್‌ಗಳಲ್ಲಿ ಶೇಕಡ 60 ನಗದು ರಹಿತ ವಹಿವಾಟು ನಡೆಯುತ್ತಿದೆ. ಪ್ರವಾಸಿಗರ ಅತ್ಯಂತ ಆಕರ್ಷನೀಯ ಕೇಂದ್ರವಾದ ಮೈಸೂರಿನಲ್ಲಿ ಡಿಜಿಟಲ್‌ ವಹಿವಾಟಿಗೆ ಪ್ರೋತ್ಸಾಹಿಸುವಂತೆ ಕರೆ ನೀಡಿದರು.

ಕೇಂದ್ರ ಹಣಕಾಸು ಹಾಗೂ ಔಧ್ಯಮಿಕ ವ್ಯವಹಾರಗಳ ಖಾತೆ ರಾಜ್ಯ ಸಚಿವ ಅರ್ಜುನ್‌ ಮೇಘವಾಲ ಮಾತನಾಡಿ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಜನರು ತೆರಿಗೆ ಕಟ್ಟಲು ಮುಂದೆ ಬರುತ್ತಾರೆ. ಆದರೆ, ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಜನರು ತೆರಿಗೆ ಕಟ್ಟಲು  ಮುಂದಾಗುವುದಿಲ್ಲ. ಹೀಗಾಗಿ ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕೆ ಸಂಪನ್ಮೂಲಗಳ ಕೊರತೆ ಎದುರಾಗಿದೆ. ಹೀಗಾಗಿ ಈ ಕೊರತೆ ನೀಗಿಸಲು ಜನರಲ್ಲಿ ತೆರಿಗೆ ಕಟ್ಟಿಸಬೇಕಿದೆ ಎಂದು ಹೇಳಿದರು.

Advertisement

ಸಂಸದ ಪ್ರತಾಪ್‌ ಸಿಂಹ ಮಾತನಾಡಿ, ಸ್ಮಾರ್ಟ್‌ಫೋನ್‌ ಇದ್ದರೆ ಕೈಯಲ್ಲಿ ಪ್ರಪಂಚವೇ ಇದ್ದಂತೆ. ತೆರಿಗೆ ಹಣದಿಂದ ಮುಂದಿನ ದಿನಗಳಲ್ಲಿ ದೇಶದ ಅಭಿವೃದ್ಧಿಗೆ ಸಂಪನ್ಮೂಲ ಕ್ರೋಢೀಕರಣ ವಾಗಲಿದೆ. 2019ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನೋಟು ಅಮಾನ್ಯಿàಕರಣ ಮಾಡಿಲ್ಲ. ದೇಶದ ಭವಿಷ್ಯದ ದೃಷ್ಟಿಯಿಂದ ಡಿಜಿಟಲೀ ಕರಣ ಮಾಡಲಾಗುತ್ತಿದೆ ಎಂದು ಹೇಳಿದರು.

ಮೈಸೂರು ತಾಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ನೀತಿ ಆಯೋಗದ ಸದಸ್ಯರಾದ ಯೋಗೀಶ್‌ ಸೂರಿ, ಎನ್‌.ಕೆ.ಸಂತೋಷಿ, ಆದಾಯ ತೆರಿಗೆ ಇಲಾಖೆ ಹಿರಿಯ ನಿರ್ದೇಶಕ ಡಾ. ಆರ್‌. ಪಿಚ್ಚಯ್ಯ, ಸುನಿಲ್‌ ಪನ್ವಾಲ್‌, ಜ್ಯೋತಿ ಕುಲಕರ್ಣಿ, ಅತುಲ್‌ ಕುಮಾರ್‌, ಜಿಲ್ಲಾಧಿಕಾರಿ ಡಿ.ರಂದೀಪ್‌ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ದೇಶದಲ್ಲಿ ಶೇಕಡ 0.5ರಷ್ಟು ಜನರು ಕೂಡ ತೆರಿಗೆ ಪಾವತಿಸುತ್ತಿರಲಿಲ್ಲ. ನಗದು ರಹಿತ ವಹಿವಾಟು ಜಾರಿಯಿಂದ ಇಡೀ ವ್ಯವಹಾರ ಪಾರದರ್ಶಕವಾಗಲಿದೆ. ಸರ್ಕಾರದ ಹಣ ರಾಜಕಾರಣಿಗಳಿಂದ ಹಿಡಿದು ಎಲ್ಲ ಮಧ್ಯವರ್ತಿಗಳ ಪಾಲಾಗುತ್ತಿತ್ತು. ನರೇಗಾ ಯೋಜನೆಯಲ್ಲಂತೂ ಹಣ ಲೂಟಿ ಹೊಡೆಯಲಾಗುತ್ತಿತ್ತು. ನೇರ ನಗದು ಮೂಲಕ ಅವರ ಖಾತೆಗೆ ಹಣ ಜಮೆಯಾಗುವುದರಿಂದ ಭ್ರಷ್ಟಾಚಾರಕ್ಕೆ ಹೊಡೆತ ಬಿದ್ದಿದೆ.
-ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ

ಭಾರತದಂತಹ ಅಭಿವೃದ್ಧಿಶೀಲ ದೇಶದಲ್ಲಿ ಜನತೆ  ತೆರಿಗೆ ಕಟ್ಟಲು ಹಿಂದೇಟು ಹಾಕುತ್ತಾರೆ. ಇದರಿಂದ ಮೂಲಭೂತ ಸೌಕರ್ಯ ಒದಗಿಸಲು ಸಂಪನ್ಮೂಲದ ಕೊರತೆ ಸೃಷ್ಟಿಯಾಗುತ್ತಿದೆ.
-ಅರ್ಜುನ್‌ಮೇಘವಾಲ, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next