ಬೆಂಗಳೂರು: ಅನುಚಿತ ವರ್ತನೆ ಹಾಗೂ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ನೀಡಿರುವ ದೂರಿನ ಅನ್ವಯ ಪಾದ್ರಿ ಪಿ.ಕೆ ಸ್ಯಾಮ್ಯುಯಲ್ ಹಾಗೂ ಅವರ ಸಹಾಯಕ ವಿನೋದ್ ದಾಸನ್ ವಿರುದ್ಧ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ನಗರ ಕೇಂದ್ರ ಅಪರಾಧ ಘಟಕಕ್ಕೆ (ಸಿಸಿಬಿ) ವರ್ಗಾವಣೆಯಾಗಿದೆ.
ಪ್ರಕರಣ ಗಂಭೀರ ಸ್ವರೂಪದ್ದಾಗಿರುವ ಕಾರಣ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್, ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿದ್ದು, ಸಿಸಿಬಿ ಎಸಿಪಿ ನೇತೃತ್ವದ ತಂಡ ತನಿಖೆ ಮುಂದುವರಿಸಲಿದೆ ಎಂದು ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಜ.30ರಂದು ರಾತ್ರಿ ಶಿವಾಜಿನಗರದ ಸಿಎಸ್‌ಐ ಆಸ್ಪತ್ರೆಯಲ್ಲಿ ಸ್ಯಾಮ್ಯುಯಲ್ ಎದುರು ವಾಗ್ವಾದ ನಡೆಸಿದ್ದ ಸಂತ್ರಸ್ಥ ಮಹಿಳೆ ಕ್ರಿಮಿನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ತೀವ್ರ ಅಸ್ವಸ್ಥಗೊಂಡ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಸಂತ್ರಸ್ತೆ ನೀಡಿದ್ದ ದೂರಿನ ಅನ್ವಯ, ಪಿ.ಕೆ.ಸ್ಯಾಮ್ಯುಯಲ್ ಹಾಗೂ ವಿನೋದ್ ದಾಸ್ ವಿರುದ್ಧ ಶಿವಾಜಿನಗರ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
ಸಂತ್ರಸ್ತೆಯ ಆರೋಪಗಳೇನು?: ವಿನೋದ್ ದಾಸನ ವಿರುದ್ಧ 2013ರಲ್ಲಿ ಸಂತ್ರಸ್ತೆ, ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದು, ಈ ಪ್ರಕರಣ ವಿಚಾರಣಾ ಹಂತದಲ್ಲಿದೆ. ಜ.13ರಂದು ಆಕೆ ದೇವನಹಳ್ಳಿ ತಾಲೂಕಿನಲ್ಲಿರುವ ತನ್ನ ತಾಯಿಯ ಮನೆಗೆ ಹೋಗಿದ್ದಳು. ಜ.20ರಂದು ಸಂಜೆ 4 ಗಂಟೆ ಸುಮಾರಿಗೆ ಅಲ್ಲಿಗೆ ತೆರಳಿದ ವಿನೋದ್ ದಾಸ್, ಕೇಸು ವಾಪಾಸ್ ಪಡೆದುಕೊಳ್ಳಲು ತಿಳಿಸಿ, ಮಾತುಕತೆ ನಡೆಸಲು ಪರಿಚಿತರ ಬಳಿ ಕರೆದೊಯ್ಯುವುದಾಗಿ ತಿಳಿಸಿದ್ದ.
ಅದರಂತೆ ಮಹಿಳೆ ಜ.21ರಂದು ರಾತ್ರಿ 8 ಗಂಟೆ ಸುಮಾರಿಗೆ ಚರ್ಚ್ ಒಂದರ ಬಳಿ ಗಂಡನ ಜತೆ ತೆರಳಿದಾಗ ಸ್ಯಾಮ್ಯುಯಲ್‌ರ ಪರಿಚಯವಾಗಿತ್ತು. ಈ ವೇಳೆ ಸಂತ್ರಸ್ತೆಯ ಪತಿ ಹಾಗೂ ವಿನೋದ್ ಗೇಟ್ ಬಳಿ ನಿಂತಿದ್ದರು. ಕಾಂಪೌಂಡ್ ಹೊರಗೆ ಕರೆದೊಯ್ದ ಸ್ಯಾಮ್ಯುಯಲ್, ವಿನೋದ್ ದಾಸ್ ಮೇಲಿರುವ ಕೇಸ್ ವಾಪಾಸ್ ಪಡೆದರೆ ಒಂದು ಕೋಟಿ ರೂ. ಹಾಗೂ ಬಿಷಪ್ ಕೋಟಾದಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿದ್ದರು. ಭುಜದ ಮೇಲೆ ಕೈ ಹಾಕಿ ಅನುಚಿತವಾಗಿ ವರ್ತಿಸಿದ್ದರು.
ಇದರಿಂದ ಗಾಬರಿಯಾಗಿ ಕಿರುಚಿಕೊಂಡಿದ್ದಕ್ಕೆ, ಈ ವಿಚಾರ ಗಂಡನಿಗೆ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಬಳಿಕ ಹೆದರಿ ಪತಿ ಜತೆ ವಾಪಾಸ್ ತೆರಳಿದ್ದೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ. ಜ.30ರಂದು ಸಾಮ್ಯಯೆಲ್‌ರ ತಾಯಿ ಅನಾರೋಗ್ಯದಿಂದ ಸಿಎಸ್‌ಐ ಆಸ್ಪತ್ರೆಯಲ್ಲಿ ದಾಖಲಾದ ಸುದ್ದಿ ಕೇಳಿ, ಸಂಜೆ 7.30ರ ಸುಮಾರಿಗೆ ಅಲ್ಲಿಗೆ ಹೋಗಿದ್ದೆ.
ರಾತ್ರಿ 1 ಗಂಟೆ ಸುಮಾರಿಗೆ ಸ್ಯಾಮ್ಯುಯಲ್ ಬಂದಾಗ ಅವರ ಈ ಹಿಂದಿನ ಅನುಚಿತ ವರ್ತನೆ ಬಗ್ಗೆ ಹೇಳಿದ್ದರಿಂದ ಜಗಳವಾಯಿತು. ಆಗ ಕೀಟನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದೆ. ಹೀಗಾಗಿ ಅನುಚಿತ ವರ್ತನೆ ತೋರಿ, ಪ್ರಾಣ ಬೆದರಿಕೆ ಹಾಕಿದ ಸ್ಯಾಮ್ಯುಯಲ್ ಹಾಗೂ ವಿನೋದ್ ದಾಸ್ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸಂತ್ರಸ್ತೆ ಕೋರಿದ್ದಾರೆ.