Advertisement

ಪತ್ರಕರ್ತ ಅಗ್ನಿ ಶ್ರೀಧರ್ ವಿರುದ್ಧದ ಪ್ರಕರಣ ರದ್ದು

11:15 AM Jun 14, 2018 | Team Udayavani |

ಬೆಂಗಳೂರು: ರಿಯಲ್‌ ಎಸ್ಟೇಟ್‌ ಉದ್ಯಮಿ ಟಾಟಾ ರಮೇಶ್‌ಗೆ ಜೀವ ಬೆದರಿಕೆ ಹಾಕಿದ ಆರೋಪ ಸಂಬಂಧ ಪತ್ರಕರ್ತ ಅಗ್ನಿ ಶ್ರೀಧರ್‌ ಹಾಗೂ ಇತರರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್‌ ರದ್ದುಪಡಿಸಿದೆ. ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣ ರದ್ದು ಕೋರಿ ಅಗ್ನಿ ಶ್ರೀಧರ್‌, ಒಂಟೆ ರೋಹಿತ್‌, ವಿಷ್ಣುವರ್ಧನ್‌ ಮತ್ತಿತರರು ಹೈಕೋರ್ಟ್‌ ಮೆಟ್ಟಿಲೇರಿದ್ದರು. 

Advertisement

ಈ ಅರ್ಜಿಗಳ ವಿಚಾರಣೆಯನ್ನು ಬುಧವಾರ ನ್ಯಾಯಮೂರ್ತಿ ಕೆ.ಎನ್‌ ಫ‌ಣೀಂದ್ರ ಅವರಿದ್ದ ಏಕಸದಸ್ಯ ಪೀಠ ನಡೆಸಿತು.
ಜೀವ ಬೆದರಿಕೆ ಆರೋಪ ಸಂಬಂಧ ಒಂಟೆ ರೋಹಿತ್‌ ಹಾಗೂ ಇತರರ ವಿರುದ್ಧ ದಾಖಲಿಸಿದ್ದ ದೂರನ್ನು ವಾಪಸ್‌
ಪಡೆಯುವುದಾಗಿ ಹಾಗೂ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದಾಗಿ ದೂರುದಾರ ಟಾಟಾ ರಮೇಶ್‌ ಹೈಕೋರ್ಟ್ ಗೆ ಪ್ರಮಾಣಪತ್ರ ಸಲ್ಲಿಸಿದರು. 

ಈ ಪ್ರಮಾಣಪತ್ರ ದಾಖಲಿಸಿಕೊಂಡ ನ್ಯಾಯಪೀಠ, ಅರ್ಜಿದಾರರಾದ ಅಗ್ನಿ ಶ್ರೀಧರ್‌, ಒಂಟೆ ರೋಹಿತ್‌, ವಿಷ್ಣುವರ್ಧನ್‌, ಸತೀಶ್‌, ಎಂ.ಸಿ ಉಮೇಶ್‌, ಎನ್‌ ನರಸಿಂಹಮೂರ್ತಿ ಅವರ ವಿರುದ್ಧ ಯಲಹಂಕ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ರದ್ದುಪಡಿಸಿತು.

ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್‌ ಪರ ಪ್ರಚಾರ ಮಾಡಿದ್ದರಿಂದ ತಮ್ಮನ್ನು ಕೊಲೆಮಾಡುವುದಾಗಿ ಒಂಟೆ ರೋಹಿತ್‌ ಹಾಗೂ ಸತೀಶ್‌ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಟಾಟಾ ರಮೇಶ್‌, 2017ರ ಫೆಬ್ರವರಿಯಲ್ಲಿ ಯಲಹಂಕ ಪೊಲೀಸರಿಗೆ ದೂರು ನೀಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರು, ಆರೋಪಿಗಳನ್ನು ಹಾಗೂ ಅವರಿಗೆ ರಕ್ಷಣೆ ಒದಗಿಸಿದ ಆರೋಪ ಸಂಬಂಧ ಅಗ್ನಿ ಶ್ರೀಧರ್‌ರನ್ನೂ ಆರೋಪಿ ಎಂದು ಪರಿಗಣಿಸಿ ಬಂಧಿಸಿದ್ದರು.

ಇದೇ ವೇಳೆ, ಫೆ.3ರಂದು ಕೋಗಿಲು ಕ್ರಾಸ್‌ ಬಳಿ ನಡೆದಿದ್ದ ದಾಸನಪುರ ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್‌ ಮೇಲಿನ ಗುಂಡಿನ ದಾಳಿ ಪ್ರಕರಣದಲ್ಲೂ ಇವರ ಕೈವಾಡ ಇರಬಹುದು ಎಂಬ ಶಂಕೆ ಮೇರೆಗೆ ಪೊಲೀಸರು ತನಿಖೆ ನಡೆಸಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next