ಬಾಳೆಯ ತೋಟಕೆ ನೀರಿಲ್ಲ
ಹುಯ್ಯೋ ಹುಯ್ಯೋ ಮಳೆರಾಯ
ಹೂವಿನ ತೋಟಕೆ ನೀರಿಲ್ಲ.
ಇದು ನಾವು ಪ್ರಾಥಮಿಕ ಶಾಲೆ ಕನ್ನಡ ಪಠ್ಯ ಪುಸ್ತಕದಲ್ಲಿ ಓದಿದ ಪದ್ಯ. ಬಾಳೆಯ ಹಾಗೂ ಹೂವಿನ ತೋಟಕ್ಕೆ ಜೀವ ತುಂಬಲು ಮಳೆರಾಯನ ಆಗಮನಕ್ಕೆ ಮಕ್ಕಳು ಹಾತೊರೆಯುವ ಚಿತ್ರಣವನ್ನು ಈ ಸುಂದರ ಶಿಶು ಗೀತೆ ನೀಡುತ್ತದೆ. ಆದರೆ ಕಳೆದ 4-5 ವರ್ಷಗಳಿಂದ ಮಳೆಯ ಚಿತ್ರಣವೇ ಬದಲಾಗಿ ಹೋಗಿದೆ. ಮಳೆಗಾಲ ಬಂತೆಂದರೆ, ಎಲ್ಲರ ಎದೆಯಲ್ಲಿ ಢವಢವ. ಅಬ್ಬರಿಸುವ ಮಳೆ ಈ ವರ್ಷ ಇನ್ನೇನು ಅನಾಹುತ ತರುತ್ತದೋ ಎಂಬ ಆತಂಕ ಕವಿಯುತ್ತದೆ. ಗದ್ದೆ ತೋಟಗಳ ಬೆಳೆಗಳನ್ನೆಲ್ಲ ಕೊಚ್ಚಿ ಹಾಕುವ, ಭೀಕರ ಪ್ರವಾಹದಲ್ಲಿ ಜನ ಜಾನುವಾರುಗಳ ಜೀವ ತೆಗೆಯುವ, ಗುಡ್ಡ ಗುಡ್ಡಗಳನ್ನೇ ಅಳಿಸಿ ಹಾಕುವ, ರಸ್ತೆ, ಸೇತುವೆ ಹೆದ್ದಾರಿಗಳನ್ನು ನುಂಗಿ ನೊಣೆಯುವ, ಭೀತಿ ಹುಟ್ಟಿಸುವುದೇ ಇಂದಿನ ಮಳೆಯ ಚಿತ್ರಣವಾಗಿದೆ. ಬರಬೇಕಾದಾಗ ಬರದೇ ಇರುವುದು, ಬರಬಾರದಾಗ ಸುರಿದು ಬಿಡುವುದು, ಒಂದು ತಿಂಗಳಲ್ಲಿ ಬರಬೇಕಾದ ಮಳೆ ಒಂದೇ ದಿನದಲ್ಲಿ ಸುರಿಯುವುದು ಇವೇ 21ನೇ ಶತಮಾನದ ಮಳೆಯ ಪರಿಯಾಗಿದೆ.
Advertisement
ನಮ್ಮ ರಾಜ್ಯ, ನಮ್ಮ ದೇಶ ಅಷ್ಟೇ ಅಲ್ಲದೆ, ಇಡೀ ಜಗತ್ತನ್ನು ಬಗೆಬಗೆಯಾಗಿ ಕಾಡುತ್ತಿವೆ ಹವಾಮಾನ ವೈಪರೀತ್ಯಗಳು. ಈ ವರ್ಷವೇ ನಾವು ನೋಡಿದ ಹವಾಮಾನ ವೈಪರೀತ್ಯಗಳು ದಂಗು ಬಡಿಯುವಂತಿವೆ.
-ಇಂಗ್ಲೆಂಡ್, ಸ್ಪೇನ್, ಇಟಲಿ, ಫ್ರಾನ್ಸ್ ಮುಂತಾದ ಶೀತ ಹವಾಮಾನದ ಯೂರೋಪಿಯನ್ ದೇಶಗಳಲ್ಲಿ ಜುಲೈ ತಿಂಗಳಿನಲ್ಲಿ ಕಂಡು ಕೇಳರಿಯದಂಥ ಉಷ್ಣತೆ. ತಾಪಮಾನ 35-40 ಡಿಗ್ರಿ ಮುಟ್ಟಿದ ಆ ದೇಶಗಳಲ್ಲಿ, ಸಾವಿರಾರು ಜನ ಮರಣ ಹೊಂದಿದರು. ಕಾಡಿನ ಬೆಂಕಿ, ಕರಗಿಹೋದ ಟಾರ್ ರಸ್ತೆಗಳು, ಜನಜೀವನ ವನ್ನೇ ಅಸ್ತವ್ಯಸ್ತಗೊಳಿಸಿದವು.
-ಅಮೆರಿಕ ಹಾಗೂ ಆಸ್ಟ್ರೇಲಿಯಾ ದೇಶಗಳಲ್ಲಿ ಸಾವಿರಾರು ಎಕರೆ ಅರಣ್ಯಗಳಲ್ಲಿ ಬೆಂಕಿ ಹೊತ್ತಿ ಉರಿಯುತ್ತಿವೆ.
ಅತಿವೃಷ್ಟಿಯಿಂದ ಕೃಷಿ ನಾಶ: 7 ವರ್ಷಗಳಲ್ಲಿ 339 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಅತಿವೃಷ್ಟಿಯಿಂದ ಕೃಷಿ ನಾಶವಾಗಿದೆ. ಪುನಃ ಭಾರತಕ್ಕೆ ಬರುವುದಾದರೆ ಕೇಂದ್ರ ಸರಕಾರದ ಕೃಷಿ ಮಂತ್ರಾಲಯದ ಒಂದು ವರದಿ ತಿಳಿಸುವಂತೆ, 2015ರಿಂದ 2022ರ 7 ವರ್ಷಗಳ ಅವಧಿಯಲ್ಲಿ ದೇಶಾದ್ಯಂತ 339 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವಿಪರೀತ ಮಳೆ ಕಾರಣದಿಂದ ಸಂಪೂರ್ಣ ಬೆಳೆ ಹಾನಿಯಾಗಿದೆ. ಮಧ್ಯಪ್ರದೇಶ, ಕರ್ನಾಟಕ, ರಾಜಾಸ್ಥಾನ, ಬಿಹಾರ ಮತ್ತು ಪಶ್ಚಿಮ ಬಂಗಾಲ – ಈ 5 ರಾಜ್ಯಗಳು ಭಾರೀ ಮಳೆಯಿಂದ ಅತ್ಯಂತ ಹೆಚ್ಚು ಕೃಷಿ ಹಾನಿಗೆ ಒಳಗಾದ ರಾಜ್ಯಗಳು ಎಂದು ವರದಿ ತಿಳಿಸುತ್ತದೆ. 2019-20ರ ಸಾಲಿನಲ್ಲಿ ಗರಿಷ್ಠ 120 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಮಳೆ ಕಾರಣದಿಂದ ಕೃಷಿ ನಾಶವಾಗಿದೆ. ಅವಿವೇಕದ ನಿರ್ಧಾರ: ಕಳೆದ 5 ವರ್ಷಗಳಿಂದ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಳು ನಿರಂತರವಾಗಿ ಮಳೆ ಅನಾಹುತಗಳನ್ನು ಎದುರಿ ಸುತ್ತಾ ಬಂದಿವೆ. ಮಳೆ ಹಾಗೂ ಪ್ರವಾಹದ ಜತೆಗೆ ಗುಡ್ಡ ಕುಸಿತದ ಸಮಸ್ಯೆಯೂ ವರ್ಷ ವರ್ಷ ಹೆಚ್ಚಾಗುತ್ತಾ ಇದೆ. ಮೇಲ್ಕಂಡ ಎಲ್ಲ ಜಿಲ್ಲೆಗಳು ಪಶ್ಚಿಮ ಘಟ್ಟದ ಜಿಲ್ಲೆಗಳು ಎಂಬುದನ್ನು ಗಮನಿಸಬೇಕು. ಅಭಿವೃದ್ಧಿಯ ಹೆಸರಿನಲ್ಲಿ ಬೇಕಾಬಿಟ್ಟಿ ಅರಣ್ಯ ನಾಶ, ಗಣಿಗಾರಿಕೆ, ಹೆದ್ದಾರಿ ಹಾಗೂ ರೈಲ್ವೇ ನಿರ್ಮಾಣಕ್ಕಾಗಿ ಗುಡ್ಡ ಅಗೆಯುವುದು, ಅತಿಯಾದ ಪ್ರವಾಸೋದ್ಯಮ, ಇತ್ಯಾದಿ ಪರಿಸರನಾಶಕ ಕೆಲಸಗಳಿಂದಲೇ ಎಲ್ಲ ಅನಾಹುತಗಳೂ ಸಂಭವಿಸುತ್ತಿವೆ ಎಂಬುದು ಸಾಮಾನ್ಯ ಜ್ಞಾನ. ಪಶ್ಚಿಮ ಘಟ್ಟಗಳಿಗೆ ಸ್ವಲ್ಪವಾದರೂ ಸಂರಕ್ಷಣೆ ಒದಗಿಸಬೇಕೆಂಬ ಉದ್ದೇಶದಿಂದ ಕಸ್ತೂರಿ ರಂಗನ್ ವರದಿ ಜಾರಿಗೆ ತರುವಂತೆ ಕೇಂದ್ರ ಸರಕಾರ ಹೊರಡಿಸಿದ ಜು. 6ರ 5ನೇ ಅಧಿಸೂಚನೆಯನ್ನು ಘಟ್ಟ ಪ್ರದೇಶಗಳ ಶಾಸಕರ ಒತ್ತಾಯದ ಮೇರೆಗೆ ರಾಜ್ಯ ಸರಕಾರ ತಿರಸ್ಕರಿಸಿದೆ. ಆದರೂ ಪರಿಸರ ಉಳಿಸುವ ಬಗ್ಗೆ ಸರಕಾರ ಆಲೋಚನೆ ನಡೆಸಬಹುದಾಗಿತ್ತು. ಇದರ ಪರಿಣಾಮವಾಗಿ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಹವಾಮಾನ ವೈಪರೀತ್ಯಗಳು ಹಾಗೂ ಗುಡ್ಡ ಕುಸಿತದ ಘಟನೆಗಳು ಹೆಚ್ಚಾಗುತ್ತಲೇ ಹೋಗುತ್ತವೆ. ಇದು ನಿಶ್ಚಿತ. ಕೇರಳ ರಾಜ್ಯಕ್ಕೂ ಈ ಎಚ್ಚರಿಕೆ ಅನ್ವಯವಾಗುತ್ತದೆ.
Related Articles
Advertisement
ಭೂಮಿಯ ಸರಾಸರಿ ಉಷ್ಣತೆ 1850ರಿಂದ ಈಚೆಗೆ 1.1 ಡಿಗ್ರಿಯಷ್ಟು ಏರಿದೆ. ಈಗಲೇ ಇಷ್ಟೊಂದು ಅನಾಹುತ ಗಳನ್ನು ಕಾಣುತ್ತಿದ್ದೇವೆ. ವಿಶ್ವಸಂಸ್ಥೆಯ ವಿಜ್ಞಾನಿಗಳ ತಂಡ ಐ.ಪಿ.ಸಿ.ಸಿ.ಯ 6ನೇ ವರದಿ ಪ್ರಕಾರ 2030ಕ್ಕೆ ಭೂಮಿಯ ಉಷ್ಣತೆ 1.5 ಡಿಗ್ರಿ ಸೆ. ಹೆಚ್ಚುತ್ತದೆ. ಅಂದರೆ ಇನ್ನು ಕೇವಲ 8 ವರ್ಷಗಳಲ್ಲಿ. ಆಗ ಹವಾಮಾನ ವೈಪರೀತ್ಯಗಳು ಅಂದರೆ ಮಹಾ ಮಳೆ, ಬರಗಾಲ, ಪ್ರವಾಹ, ಚಂಡಮಾರುತಗಳು, ಮೇಘನ್ಪೋಟಗಳು, ಕಾಳಿYಚ್ಚುಗಳು, ಭೂ ಕುಸಿತ ಮುಂತಾದವು ಇಂದಿಗಿಂತ ಹತ್ತಾರು ಪಟ್ಟು ಹೆಚ್ಚುತ್ತವೆ. 2100ಕ್ಕೂ ಮೊದಲೇ ತಾಪಮಾನ 2 ಡಿಗ್ರಿ ಸೆಲ್ಸಿಯಸ್ ಏರುತ್ತದೆ. ಆಗ ಭೂಮಿಯ ಬಹುಪಾಲು ಜೀವಿಗಳು – ಮನುಷ್ಯನೂ ಸೇರಿದಂತೆ – ನಾಶವಾಗುತ್ತವೆ ಎಂದು ಐ.ಪಿ.ಸಿ.ಸಿ. ವರದಿ ತಿಳಿಸುತ್ತದೆ.
ಮುಂದಿನ 70-80 ವರ್ಷಗಳಲ್ಲಿ ಬರಲಿರುವ ಸರ್ವನಾಶಕ್ಕೆ ಈಗ ಕಾಣುತ್ತಿರುವ ಅನಾಹುತಗಳೇ ಎಚ್ಚರಿಕೆ ಗಂಟೆ.ಈ ಅನಾಹುತಗಳನ್ನು ತಪ್ಪಿಸಲು ಐ.ಪಿ.ಸಿ.ಸಿ. ವಿಜ್ಞಾನಿಗಳು ಹೇಳುವುದು ಏನೆಂದರೆ, 1.2025ರ ಹೊತ್ತಿಗೆ ಕಾರ್ಬನ್ ಡೈಆಕ್ಸೆ„ಡ್ ಹೊರಸೂಸುವಿಕೆ ನಿಯಂತ್ರಿತ ಮಟ್ಟದಲ್ಲಿರಬೇಕು.
2.2030ರ ಹೊತ್ತಿಗೆ ಸಿಒ2 ಪ್ರಮಾಣ ಶೇ.43ರಷ್ಟು ಕಡಿಮೆ ಮಾಡಬೇಕು.
3.2050 ರ ಹೊತ್ತಿಗೆ ಸಿಒ2 ಹೊರಸೂಸುವಿಕೆ ಶೂನ್ಯಕ್ಕೆ ಬರಬೇಕು. (ನೆಟ್ ಝೀರೋ) -ಪ್ರೊ |ಬಿ.ಎಂ.ಕುಮಾರಸ್ವಾಮಿ, ಶಿವಮೊಗ್ಗ