Advertisement

ಸಾರ್ವಜನಿಕರ ಅಸಡ್ಡೆ ಮುಂಜಾಗ್ರತೆ ಮುಖ್ಯ

09:51 AM Mar 28, 2020 | mahesh |

ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಎಷ್ಟೊಂದು ಏರುಗತಿ ಪಡೆಯುತ್ತಿವೆಯೆಂದರೆ, ಈಗಲೇ ಸಕಲ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ಪರಿಸ್ಥಿತಿ ಕೈಜಾರುವ ಅಪಾಯವಿದೆ. ಅಪಾಯದ ಮುನ್ಸೂಚನೆ ಅರಿತು ಸಂಪೂರ್ಣ ದೇಶವೇ ಈಗ ಲೌಕ್‌ಡೌನ್‌ಗೆ ಒಳಗಾಗಿದೆ. ಈ ಹಿಂದೆ ರಾಜ್ಯದಲ್ಲಿ 9 ಜಿಲ್ಲೆಗಳನ್ನು ಲಾಕ್‌ಡೌನ್‌ ಮಾಡುವ ಘೋಷಣೆ ಮಾಡಿದ್ದ ರಾಜ್ಯ ಸರ್ಕಾರವೂ, ಈಗ ಎಲ್ಲಾ ಜಿಲ್ಲೆಗಳನ್ನೂ ಲೌಕ್‌ಡೌನ್‌ ಮಾಡಿದೆ. ಈಗ ದೇಶದ ಯಾವುದೇ ರಾಜ್ಯದ ವ್ಯಕ್ತಿಯೂ ಈ ರೋಗದಿಂದ ಮುಕ್ತವಾಗಿಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಗುಜರಾತ್‌ನಿಂದ ಪಶ್ಚಿಮ ಬಂಗಾಳ ಮತ್ತು ಅಸ್ಸಾಂವರೆಗೆ ಕೊರೊನಾ ಸೋಂಕಿತ ರೋಗಿಗಳ ಬೆಳೆಯುತ್ತಿರುವ ಸಂಖ್ಯೆ ಭಾರತದಂಥ ಬೃಹತ್‌ ಜನಸಂಖ್ಯೆಯಿರುವ ರಾಷ್ಟ್ರಕ್ಕೆ ಅತಿ ಆತಂಕದ ವಿಷಯ. ಅದರಲ್ಲೂ ನೆರೆಯ ಮಹಾರಾಷ್ಟ್ರದಲ್ಲಿ ರೋಗಪೀಡಿತರ ಸಂಖ್ಯೆ 100ರ ಗಡಿ ದಾಟಿದೆ.

Advertisement

ಕೇಂದ್ರ, ರಾಜ್ಯ ಸರ್ಕಾರಗಳು, ಆರೋಗ್ಯ ಇಲಾಖೆಗಳು, ಮಾಧ್ಯಮಗಳು ಪರಿಸ್ಥಿತಿಯ ಗಾಂಭೀರ್ಯತೆಯ ಬಗ್ಗೆ ನಿರಂತರವಾಗಿ ಎಚ್ಚರಿಸುತ್ತಲೇ ಇವೆ. ಕೈ ತೊಳೆಯುವುದರಿಂದ ಹಿಡಿದು. ಮಾಸ್ಕ್ಧರಿಸುವ, ಸ್ವ-ದಿಗ್ಬಂಧನ ಹಾಕಿಕೊಳ್ಳುವ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ ಇದರ ಹೊರತಾಗಿಯೂ ಸಾರ್ವಜನಿಕರ ಬೇಜವಾಬ್ದಾರಿ ವರ್ತನೆ ಮುಂದುವರಿದೇ ಇದೆ. ಪರಿಸ್ಥಿತಿ ಹೀಗೇ ಮುಂದುವರಿದರೆ, ಈ ರೋಗವನ್ನು ತಡೆಯುವ ಪ್ರಯತ್ನವೆಲ್ಲ ವ್ಯರ್ಥವಾಗಿ ಹೋಗುತ್ತವೆ.

ಭಾನುವಾರ ಕೇಂದ್ರ ಸರ್ಕಾರ ಜನತಾ ಕರ್ಫ್ಯೂ ಪಾಲನೆಗಾಗಿ ಜನರಿಗೆ ಕರೆಕೊಟ್ಟಾಗ ದೇಶಾದ್ಯಂತ ಉತ್ತಮ ಸ್ಪಂದನೆಯೇನೋ ಸಿಕ್ಕಿತು. ಆದರೆ ಈಗ ಲಾಕ್‌ಡೌನ್‌ನ ಹೊರತಾಗಿಯೂ ಹಲವು ನಗರಗಳಲ್ಲಿ ಜನರೆಲ್ಲ ಜಗತ್ತಿನಲ್ಲಿ ಏನೂ ಆಗೇ ಇಲ್ಲವೇನೋ ಎಂಬಂತೆ ನಿಶ್ಚಿಂತೆಯಿಂದ ಹೊರಗೆ ಬರುತ್ತಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಸಹ ಈ ಬೇಜವಾಬ್ದಾರಿ ವರ್ತನೆ ಢಾಳಾಗಿಯೇ ಕಾಣಿಸುತ್ತಿದೆ. ಸೂಪರ್‌ ಮಾರುಕಟ್ಟೆಗಳಿಗೆ ಜನ ಮುಗಿ ಬೀಳುತ್ತಿದ್ದಾರೆ, ಅಲ್ಲಲ್ಲಿ ತೆರೆದಿರುವ ತರಕಾರಿ, ಬೇಕರಿ ಅಂಗಡಿಗಳ ಮುಂದೆ ಜಮಾಯಿಸುತ್ತಿದ್ದಾರೆ. ಅಗತ್ಯ ವಸ್ತುಗಳ ಅಭಾವ ಎದುರಾಗದಂತೆ ನೋಡಿಕೊಳ್ಳುವುದಾಗಿ ಸರ್ಕಾರ ಎಷ್ಟೇ ಖಾತ್ರಿ ನೀಡಿದರೂ ಜನ ಎಲ್ಲವನ್ನೂ ಪೇರಿಸಿಕೊಳ್ಳುವ ಅವಸರದಲ್ಲಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಕೆಲವರು ಕೆಮ್ಮುತ್ತಾ, ಮೂಗೇರಿಸುತ್ತಲೇ ಈ ಗುಂಪಿನಲ್ಲಿ ನಿಂತದ್ದು ಕಳವಳ ಹೆಚ್ಚಿಸುವಂತಿದೆ.

ಆರೋಗ್ಯ ಸೇವೆಯಲ್ಲಿ ಐರೋಪ್ಯ ರಾಷ್ಟ್ರಗಳಿಗೆ ಮಾದರಿಯಾಗಿದ್ದ ಇಟಲಿಯಂಥ ದೇಶವೇ ಇಂದು ಮೃತ್ಯುಕೂಪವಾಗಿ ಬದಲಾಗಿದೆ. ಜರ್ಮನಿ, ಅಮೆರಿಕದಂಥ ರಾಷ್ಟ್ರಗಳೂ ತತ್ತರಿಸಿರುವ ಉದಾಹರಣೆ ನಮ್ಮ ಕಣ್ಣ ಮುಂದೆಯೇ ಇದೆ. ನಮ್ಮ ದೇಶದಲ್ಲಿ ಆರೋಗ್ಯ ವ್ಯವಸ್ಥೆಯ ಸ್ಥಿತಿ ಇನ್ನೂ ಅಧೋಗತಿಯಲ್ಲೇ ಇದೆ. ಕೋವಿಡ್-19ಕ್ಕೆ ಇನ್ನು ನಿರ್ದಿಷ್ಟ ಲಸಿಕೆ ಅಥವಾ ಔಷಧಿಯೂ ಕಂಡುಹಿಡಿಯಲಾಗಿಲ್ಲ. ಪರಿಸ್ಥಿತಿ ಹೀಗಿರುವಾಗ, ಸ್ವ-ದಿಗ್ಬಂಧನವೇ ರೋಗ ನಿಯಂತ್ರಣಕ್ಕೆ ಇರುವ ಪರಿಣಾಮಕಾರಿ ಅಸ್ತ್ರ. ಈ ವಿಷಯದಲ್ಲಿ ಸಾರ್ವಜನಿಕರ ಬೇಜಾವಾಬ್ದಾರಿ ವರ್ತನೆ ಮುಂದುವರಿದರೆ, ಎಲ್ಲರೂ ಪಶ್ಚಾತ್ತಾಪಪಡಲೇಬೇಕಾಗುತ್ತದೆ. ಪರಿಸ್ಥಿತಿ ಕೈತಪ್ಪಿದರೆ, ನಿಯಂತ್ರಣಕ್ಕೆ ತರುವುದು, ಅದೂ ನಮ್ಮಂಥ ಅಪಾರ ಜನಸಂಖ್ಯೆ ಇರುವ ರಾಷ್ಟ್ರದಲ್ಲಿ ಕಷ್ಟವಾಗುತ್ತದೆ. ಮುಂಜಾಗ್ರತೆ ಇರಲಿ. ಸರ್ಕಾರ, ಆರೋಗ್ಯ ಇಲಾಖೆಯ ನಿರ್ದೇಶನಗಳನ್ನು ತಪ್ಪದೇ ಪಾಲಿಸಿದರೆ ಮಾತ್ರ, ಉಳಿವು.

Advertisement

Udayavani is now on Telegram. Click here to join our channel and stay updated with the latest news.

Next