ಗುವಾಹಟಿ: ಕಾರೊಂದು ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು, ಬಳಿಕ ವಾಹನವೊಂದಕ್ಕೆ ಗುದ್ದಿದ ಭೀಕರ ಘಟನೆಯಲ್ಲಿ ಕನಿಷ್ಠ ಏಳು ಮಂದಿ ಸಾವನ್ನಪ್ಪಿ ಹಲವು ಗಾಯಗೊಂಡ ಘಟನೆ ಗುವಾಹಟಿಯಲ್ಲಿ ಸೋಮವಾರ ಮುಂಜಾನೆ ನಡೆದಿದೆ.
ಜಲುಕ್ಬಾರಿ ಬಳಿ ಸುಮಾರು ರಾತ್ರಿ ಒಂದು ಗಂಟೆ ಸಮಯದಲ್ಲಿ ಈ ಅಪಘಾತ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಸ್ಸಾಂ ಇಂಜಿನಿಯರಿಂಗ್ ಕಾಲೇಜಿನ ಹತ್ತು ಮಂದಿ ವಿದ್ಯಾರ್ಥಿಗಳಿದ್ದ ಬೊಲೆರೊ ವಾಹನವು ಢಿಕ್ಕಿಯಾಗಿದೆ.
ಬೊಲೆರೊ ವಾಹನವು ಮೊದಲು ಡಿವೈಡರ್ ಗೆ ಢಿಕ್ಕಿ ಹೊಡೆದಿದೆ. ಈ ವೇಳೆ ನಿಯಂತ್ರಣ ತಪ್ಪಿ ಹಲವು ಬಾರಿ ರಸ್ತೆಯಲ್ಲಿ ಪಲ್ಟಿಯಾಗಿದೆ. ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಗೂಡ್ಸ್ ಕ್ಯಾರಿಯರ್ ಗೆ ಢಿಕ್ಕಿ ಹೊಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ವಿದ್ಯಾರ್ಥಿಗಳು ಕಾರನ್ನು ಬಾಡಿಗೆಗೆ ಪಡೆದಿದ್ದರು. ಇವರು ಗುವಾಹಟಿ ವಿಮಾನ ನಿಲ್ದಾಣದ ಕಡೆಯಿಂದ ಬರುತ್ತಿದ್ದರು. ಗೂಡ್ಸ್ ಕ್ಯಾರಿಯರ್ ವಿರುದ್ಧ ಗುವಾಹಟಿ ನಗರದಿಂದ ಬರುತ್ತಿತ್ತು. ಅದರಲ್ಲಿ ಮೂವರು ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಮಕ್ಕಳಿಗೆ ಸಿಹಿ ನೀಡುವ ಮೂಲಕ ಮೇ 31ರಿಂದ ಶಾಲೆ ಆರಂಭ: ಸಚಿವ ಮಧು ಬಂಗಾರಪ್ಪ
ಮೃತಪಟ್ಟ ಏಳು ಮಂದಿಯೂ ಬೂಲೆರೊ ವಾಹನದಲ್ಲಿದ್ದ ವಿದ್ಯಾರ್ಥಿಗಳು. ಅವರನ್ನು ಅರಿಂದಮ್ ಭಲ್ಲಾಲ್, ರಾಜ್ಕಿರಣ್ ಭುಯಾನ್, ನಿಯಾರ್ ದೇಕಾ, ಕೌಶಿಕ್ ಬರುವಾ, ಎಮನ್ ಗಯಾನ್, ಕೌಶಿಕ್ ಮೋಹನ್ ಮತ್ತು ಉಪಂಗ್ಶು ಶರ್ಮಾ ಎಂದು ಗುರುತಿಸಲಾಗಿದೆ.
ಬೊಲೆರೋದಲ್ಲಿದ್ದ ಮೂವರು ವಿದ್ಯಾರ್ಥಿಗಳು ಮತ್ತು ಗೂಡ್ಸ್ ಕ್ಯಾರಿಯರ್ ನಲ್ಲಿದ್ದ ಗಾಯಗೊಂಡವರನ್ನು ಗುವಾಹಟಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.