ಬೆಂಗಳೂರು: ಮಾಳಗಾಳದ ಇಂದಿರಾ ಕ್ಯಾಂಟೀನ್ ತಿಂಡಿಯಲ್ಲಿ ಜಿರಲೆ ಸಿಕ್ಕ ಕುರಿತು ಬಿಬಿಎಂಪಿ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದು, ಉದ್ದೇಶ ಪೂರ್ವಕವಾಗಿಯೇ ಕೃತ್ಯ ನಡೆದಿದೆ ಎಂದು ಆರೋಪಿಸಿ ಕಾಮಾಕ್ಷಿಪಾಳ್ಳ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕಾಮಾಕ್ಷಿಪಾಳ್ಯ ಪೊಲೀಸರು, ಆಟೋ ಚಾಲಕರಾದ ಹೇಮಂತ್ ಕುಮಾರ್, ದೇವರಾಜ್ ಎಂಬುವವರನ್ನು ಬಂಧಿಸಿದ್ದು ಇನ್ನಿಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಪ್ರಾಥಮಿಕ ತನಿಖೆ ಪ್ರಕಾರ ಆರೋಪಿಗಳು ಯಾವುದೇ ಪಕ್ಷ ಅಥವಾ ಸಂಘಟನೆ ಕಾರ್ಯಕರ್ತರಲ್ಲ ಎಂಬುದು ತಿಳಿದಿದೆ. ಅಲ್ಲದೇ ಉದ್ದೇಶ ಪೂರ್ವಕವಾಗಿ ಮಾಡಿದಂತೆ ಕಾಣುತ್ತಿಲ್ಲ. ಊಟದ ತಟ್ಟೆಯಲ್ಲಿ ಬಿದ್ದಿರುವ ಜಿರಲೆಯ ವಿಡಿಯೋ ಮಾಡಿ ಅದನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅ.20ರ ಬೆಳಗ್ಗೆ 9ರ ವೇಳೆ ಎಂದಿನಂತೆ ಮಾಳಗಾಲದ ಇಂದಿರಾ ಕ್ಯಾಂಟೀನ್‌ನಲ್ಲಿ ತಿಂಡಿ ವಿತರಣೆಯಾಗುತ್ತಿತ್ತು. ಈ ವೇಳೆ ಉಪಹಾರಕ್ಕಾಗಿ ಬಂದ ಹೇಮಂತ್ ಕುಮಾರ್, ದೇವರಾಜ್ ಮತ್ತು ಇತರರು ತಿಂಡಿ ತಟ್ಟೆಯಲ್ಲಿ ಬಿದ್ದಿದ್ದ ಜಿರಲೆ ವಿಚಾರವಾಗಿ ಜಗಳ ತೆಗೆದರು. ಅಲ್ಲದೆ ತಟ್ಟೆಯಲ್ಲಿ ಜಿರಲೆ ಇರುವುದನ್ನು ತೋರಿಸಿ ಅದರ ಫೋಟೋ, ವಿಡಿಯೋ ತೆಗೆದು ಕ್ಯಾಂಟಿನ್‌ನಲ್ಲಿ ಸ್ವತ್ಛತೆ ಕಾಪಾಡಿಕೊಳ್ಳುತ್ತಿಲ್ಲ. ಇಲ್ಲಿನ ಆಹಾರ ತಿಂದರೆ ದೇವರೇ ದಿಕ್ಕು ಎಂದು ಕೂಗಾಡಿದ್ದರು.
ಅಷ್ಟೇ ಅಲ್ಲದೇ, ತಿಂಡಿಯಲ್ಲಿ ಜಿರಳೆ ಇರುವ ಫೋಟೋ ಹಾಗೂ ವಿಡಿಯೋವನ್ನು ಹೇಮಂತ್‌ಕುಮಾರ್ ಫೇಸ್‌ಬುಕ್‌ನಲ್ಲಿ ಹಾಕಿದ್ದರು. ಈ ವಿಷಯ ಸಾರ್ವಜನಿಕ ವಲಯದಲ್ಲಿ ಆತಂಕ ಸೃಷ್ಟಿಸಿತ್ತು. ಅಲ್ಲದೆ, ಬಿಬಿಎಂಪಿ ಅಧಿಕಾರಿಗಳನ್ನೂ ಮುಜುಗರಕ್ಕೀಡು ಮಾಡಿತ್ತು.
ಇದನ್ನು ಗಮನಿಸಿದ ಬಿಬಿಎಂಪಿ ಅಧಿಕಾರಿಗಳು ಕ್ಯಾಂಟಿನ್‌ನಲ್ಲಿನ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದ್ದರು. ಗಲಾಟೆ ಮಾಡಿದ್ದ ನಾಲ್ವರು ಅನುಮಾನಾಸ್ಪದವಾಗಿ ವರ್ತಿಸುತ್ತಿರುವುದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಉದ್ದೇಶಪೂರ್ವಕವಾಗಿ ಜಿರಳೆ ಹಾಕಿದ್ದಾರೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಡವರಿಗೆ ಆಹಾರ ನೀಡುವ ಯೋಜನೆ ವಿರುದ್ಧ ಕೆಲವು ಷಡ್ಯಂತ್ರ ಮಾಡಿರುವ ಅನುಮಾನ ಇದೆ. ಈ ರೀತಿ ಮಾಡುವವರ ವಿರುದ್ಧ ದೂರು ನೀಡುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇಂತಹ ಪ್ರಕರಣಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ.
-ಆರ್.ಸಂಪತ್‌ರಾಜ್, ಮೇಯರ್