ಬೆಂಗಳೂರು: ಕಂಠಪೂರ್ತಿ ಮದ್ಯ ಸೇವಿಸಿದ್ದ ವ್ಯಕ್ತಿಯೊಬ್ಬ ಒಂಟಿ ಯುವತಿ ವಾಸವಿದ್ದ ಮನೆ ಬಾಗಿಲು ತಟ್ಟಿ ಕಿರಿಕಿರಿ ನೀಡಿದ್ದಾನೆ. ಈ ಆರೋಪದ ಮೇಲೆ ಜಯನಗರ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ. ಜೆ.ಪಿ.ನಗರದ ನಿವಾಸಿ ಕಿರಣ್ ಬಂಧಿತ. ಜಯನಗರದ 6ನೇ ಹಂತದಲ್ಲಿ ಮುನಿರತ್ನ ಎಂಬುವರಿಗೆ ಸೇರಿದ ಕಟ್ಟಡದಲ್ಲಿ ಮೊದಲ ಮಹಡಿಯಲ್ಲಿ ನಾಲ್ಕು ವರ್ಷಗಳಿಂದ ಕಿರಣ್ ನೆಲೆಸಿದ್ದಾನೆ.
ಎಂಜಿನಿಯರಿಂಗ್ ಮುಗಿಸಿರುವ ಈತ, ಮನೆಯಲ್ಲೇ ಕುಳಿತು ಸಾಫ್ಟ್ವೇರ್ ಕಂಪೆನಿಯೊಂದಕ್ಕೆ ಕೆಲಸ ಮಾಡುತ್ತಿದ್ದಾನೆ. ಸೋಮವಾರ ತಡರಾತ್ರಿ 2 ಗಂಟೆ ಸುಮಾರಿಗೆ ಕಂಠಪೂರ್ತಿ ಮದ್ಯ ಸೇವಿಸಿರುವ ಕಿರಣ್, ಇದೇ ಕಟ್ಟಡದ ಎರಡನೇ ಮಹಡಿಯ ಮನೆಗೆ ನಾಲ್ಕು ದಿನಗಳ ಹಿಂದಷ್ಟೇ ಬಾಡಿಗೆಗೆ ಬಂದಿದ್ದ ಗದಗ ಮೂಲದ ವಿದ್ಯಾರ್ಥಿನಿಯ ಮನೆಯ ಬಾಗಿಲು ಬಡಿದ್ದಾನೆ.
ಇದರಿಂದ ಗಾಬರಿಗೊಂಡ ವಿದ್ಯಾರ್ಥಿನಿ ಕೂಡಲೇ ಕಟ್ಟಡ ಮಾಲೀಕ ಮುನಿರತ್ನಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಬಳಿಕ ಮುನಿರತ್ನ ಇದೇ ಕಟ್ಟಡದಲ್ಲಿ ವಿದ್ಯಾರ್ಥಿನಿಯ ಮನೆ ಪಕ್ಕದಲ್ಲಿ ವಾಸವಾಗಿರುವ ಕಿರುತೆರೆ ನಟ ಶ್ರೀಧರ್ ಎಂಬುವರಿಗೆ ನೆರವಿಗೆ ಧಾವಿಸುವಂತೆ ತಿಳಿಸಿದ್ದಾರೆ. ಅದರಂತೆ ಯುವತಿಯ ಮನೆ ಬಳಿ ಹೋದ ಶ್ರೀಧರ್ ಆರೋಪಿಯನ್ನು ಪ್ರಶ್ನಿಸಿದ್ದಾರೆ. ಅಲ್ಲದೇ ಆತನ ಚಲನವಲನಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ಈ ವೇಳೆ ಕಿರಣ್ ಮೊಬೈಲ್ ಕಸಿದುಕೊಳ್ಳಲು ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದಾರೆ.
ಈ ಸಂಬಂಧ ಮಂಗಳವಾರ ಬೆಳಗ್ಗೆ ಯುವತಿ ದೂರು ನೀಡಿದ್ದು, ಆರೋಪಿ ಕಿರಣ್‌ನನ್ನು ಬಂಧಿಸಲಾಗಿದೆ. ಮತ್ತೂಂದೆಡೆ ಕಟ್ಟಡದ ಮಾಲೀಕ ಮುನಿರತ್ನ ಮತ್ತು ಕಿರುತೆರೆ ನಟ ಶ್ರೀಧರ್ ಅವರ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಆರಂಭದಲ್ಲಿ ಕಿರಣ್ ತಪ್ಪು ಮಾಡಿಲ್ಲ. ತಾನೂ ಹೋಗಿಯೇ ಇಲ್ಲ ಎಂದು ವಾದ ಮಾಡುತ್ತಿದ್ದ.
ಬಳಿಕ ವಿಚಾರಣೆ ತೀವ್ರಗೊಳಿಸಿದಾಗ, ವಿದಾರ್ಥಿನಿ ಒಂಟಿಯಾಗಿ ಇರುವುದನ್ನು ಗಮನಿಸಿಯೇ ಬಾಗಿಲು ಬಡಿದಿದ್ದು, ಮದ್ಯ ಸೇವಿಸಿ ಕೃತ್ಯವೆಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಇತ್ತ ವಿದ್ಯಾರ್ಥಿನಿ ಮಂಗಳವಾರ ಬೆಳಗ್ಗೆಯೇ ಮನೆ ಖಾಲಿ ಮಾಡಿಕೊಂಡು ಹೋಗಿದ್ದಾರೆ. ಆರೋಪಿಯ ವಿರುದ್ಧ ಐಪಿಸಿ 354ರ(ಉದ್ದೇಶ ಪೂರ್ವಕವಾಗಿಯೇ ಮಹಿಳೆಗೆ ಕಿರುಕುಳ)ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.