Advertisement

52 ಲಕ್ಷ ದೋಚಿದ್ದ ಕಾಫಿ ಎಸ್ಟೇಟ್‌ ಮಾಲೀಕನ ಪುತ್ರ ಸೆರೆ

12:55 PM Apr 01, 2018 | Team Udayavani |

ಬೆಂಗಳೂರು: ಎಟಿಎಂ ಯಂತ್ರವೊಂದಕ್ಕೆ ತುಂಬಬೇಕಿದ್ದ 52 ಲಕ್ಷ ರೂ. ಕದ್ದು ಪರಾರಿಯಾಗಿದ್ದ ಸೋಮವಾರಪೇಟೆ ಮೂಲದ ಕಾಫೀ ಎಸ್ಟೇಟ್‌ ಮಾಲೀಕರ ಪುತ್ರನನ್ನು ಬಂಧಿಸುವಲ್ಲಿ ಮಾರತ್ತಹಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಸಿಎಂಎಸ್‌ ಸೆಕ್ಯೂರಿಟಿ ಏಜೆನ್ಸಿ ಉದ್ಯೋಗಿಯಾಗಿದ್ದ ಕೆ.ಕೆ. ಪರಮೇಶ್‌ ಬಂಧಿತ. ಖಾಸಗಿ ಬ್ಯಾಂಕ್‌ನ ಎಟಿಎಂಗಳಿಗೆ ಹಣ ತುಂಬುವ ಕೆಲಸ ಮಾಡುತ್ತಿದ್ದ ಆರೋಪಿ, ಮಾ.9ರಂದು ಮಾರತ್ತಹಳ್ಳಿಯ ತುಳಸಿ ರಸ್ತೆಯ ಐಸಿಐಸಿಐ ಬ್ಯಾಂಕ್‌ನ ಎರಡು ಎಟಿಎಂಗಳಿಗೆ ತುಂಬಬೇಕಿದ್ದ ಹಣದೊಂದಿಗೆ ಪರಾರಿಯಾಗಿ, ತಮ್ಮ ತೋಟದ ಮನೆಯ ಕೊಟ್ಟಿಗೆಯಲ್ಲಿದ್ದ ಮಣ್ಣಿನ ಮಡಕೆಯಲ್ಲಿ ಹಣ ಬಚ್ಚಿಟ್ಟಿದ್ದ. ಪ್ರಸ್ತುತ ಆರೋಪಿಯಿಂದ 51,500 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಎಲ್‌ಎಲ್‌ಬಿ ಪದವಿ ವಿಧ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದ ಪರಮೇಶ್‌ ರಡು ವರ್ಷಗಳ ಹಿಂದೆ ಸಿಎಂಎಸ್‌ ಸೆಕ್ಯೂರಿಟಿ ಏಜೆನ್ಸಿಯಲ್ಲಿ ಕೆಲಸಕ್ಕೆ ಸೇರಿದ್ದ. ಮಾರತ್ತ‌ಳ್ಳಿ ಸುತ್ತಮುತ್ತಲ ಭಾಗದ ಖಾಸಗಿ ಎಟಿಎಂಗಳಿಗೆ ಹಣ ತುಂಬಿಸುತ್ತಿದ್ದ ವಾಹನಕ್ಕೆ ಡ್ರೈವರ್‌, ಕಸ್ಟೋಡಿಯನ್‌, ಭದ್ರತೆಗಾರ ಸೇರಿ ಮೂರು ಹೊಣೆಗಳನ್ನು ಒಬ್ಬನೇ ನಿರ್ವಹಿಸುತ್ತಿದ್ದ.

ಮಾರ್ಚ್‌ 9ರಂದು ಮಾರತ್ತಹಳ್ಳಿಯ ತುಳಸಿ ರಸ್ತೆಯ ಐಸಿಐಸಿಐ ಬ್ಯಾಂಕ್‌ನ ಎರಡು ಎಟಿಎಂಗಳಿಗೆ ತುಂಬಬೇಕಿದ್ದ 52 ಲಕ್ಷ ರೂ. ಹಣವನ್ನು ಬ್ಯಾಗ್‌ವೊಂದರಲ್ಲಿ ತುಂಬಿಸಿಕೊಂಡಿದ್ದ. ನಂತರ ಕಚೇರಿಗೆ ತೆರಳಿ, ಎಟಿಎಂಗೆ ಹಣ ತುಂಬಿರುವುದಾಗಿ ವರದಿ ಬರೆದು, ವಾಹನವನ್ನು ಅಲ್ಲಿಯೇ ಬಿಟ್ಟು ವಾಪಾಸಾಗಿದ್ದ. ಅದೇ ದಿನ ರಾತ್ರಿ ಗಾರೆಬಾವಿ ಪಾಳ್ಯದಲ್ಲಿದ್ದ ತನ್ನ ರೂಮ್‌ ಖಾಲಿ ಮಾಡಿಕೊಂಡು ಹಣದ ಸಮೇತ ಊರಿಗೆ ತೆರಳಿದ್ದ.

ಘಟನೆ ನಡೆದ ಎರಡು ದಿನಗಳ ಬಳಿಕ ಎಟಿಎಂಗೆ ಹಣ ತುಂಬದೇ ಇರುವ ವಿಷಯ ಬ್ಯಾಂಕ್‌ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಏಜೆನ್ಸಿಗೆ ವಿಷಯ ತಿಳಿಸಿದ್ದರು. ಕೂಡಲೆ ಎಚ್ಚೆತ್ತುಕೊಂಡ ಸಿಎಂಎಸ್‌ ಕಂಪನಿ, ಈ ಬಗ್ಗೆ ದೂರು ದಾಖಲಿಸಿತ್ತು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು. 
ಆರೋಪಿ ಪರಮೇಶ್‌ ಮೇಲೆ ಅನುಮಾನವಿದ್ದ ಕಾರಣ ಆತನ ಮೊಬೈಲ್‌ ಸಿಡಿಆರ್‌ ಪರಿಶೀಲನೆಗೆ ಮುಂದಾದೆವು.

Advertisement

ಆದು, ಸೋಮವಾರ ಪೇಟೆಯಲ್ಲಿ ಲೋಕೇಶನ್‌ ತೋರಿಸುತ್ತಿದ್ದರಿಂದ ಆತನನ್ನು ವಶಕ್ಕೆ ಪಡೆಯಲು ಒಂದು ತಂಡ ತೆರಳಿತ್ತು. ಆದರೆ ಆತ ಪರಾರಿಯಾಗಿದ್ದ. ಕುಟುಂಬದ ಸದಸ್ಯರನ್ನು ವಿಚಾರಿಸಿದಾಗ ಮಗ ಹಣ ತಂದಿರುವ ವಿಷಯ ನಮಗೆ ಗೊತ್ತಿಲ್ಲ ಎಂದಿದ್ದರು. ಈ ಮಧ್ಯೆ ಆತ ತನ್ನ ಸಂಬಂಧಿಕರೊಬ್ಬರಿಗೆ ಬೇರೊಂದು ನಂಬರ್‌ನಿಂದ ಕರೆ ಮಾಡಿದ್ದ, ಈ ಮಾಹಿತಿ ಆಧರಿಸಿ ಆತನನ್ನು ಬಂಧಿಸಿದಾಗ ಕಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡ ಎಂದು ಅಧಿಕಾರಿ ಹೇಳಿದರು.

ಹಣ ಕಂಡು ಬೆಸ್ತು: ಪರಮೇಶ್‌ ಕೊಟ್ಟಿಗೆಯಲ್ಲಿ ಹಣ ಬಚ್ಚಿಟ್ಟ ಸಂಗತಿ ಮನೆಯಲ್ಲಿ ಯಾರಿಗೂ ಗೊತ್ತಿರಲಿಲ್ಲ. ತೋಟದ ಕೆಲಸಗಾರರಿಗೂ ಇದರ ಅರಿವಿರಲಿಲ್ಲ. ಪೊಲೀಸರೊಂದಿಗೆ ಕೊಟ್ಟಿಗೆಗೆ ಬಂದ ಆತ ಮೂಲೆಯೊಂದರಲ್ಲಿದ್ದ ಮಡಕೆಯಲ್ಲಿದ್ದ ಹಣ ತೆಗೆದಾಗ ಕೆಲಸಗಾರರು ಬೆಚ್ಚಿಬಿದ್ದರು. ಕದ್ದಿದ್ದ ಹಣದಲ್ಲಿ ಖರ್ಚಿಗೆಂದು 50 ಸಾವಿರ ರೂ. ತೆಗೆದುಕೊಂಡಿದ್ದ ಆರೋಪಿ, ಉಳಿದ ಹಣವನ್ನು ಅಲ್ಲಿಯೇ ಇಟ್ಟಿದ್ದ.

ನಿಯಮ ಉಲ್ಲಂ ಸಿದ ಏಜೆನ್ಸಿ: ಪರಮೇಶ್‌ನನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ ಸಿಎಂಎಸ್‌ ಏಜೆನ್ಸಿ ನಿಯಮಗಳನ್ನು ಉಲ್ಲಂ ಸಿದೆ. ಭದ್ರತೆಗಾರ, ಕಸ್ಟೋಡಿಯನ್‌, ಚಾಲಕ ಮೂರು ಹುದ್ದೆಗಳಿಗೆ ಒಬ್ಬನನ್ನೇ ನೇಮಿಸಿಕೊಂಡಿರುವುದು ಕಾನೂನು ಬಾಹಿರ. ಹೀಗಾಗಿ ಠಾಣೆಗೆ ಹಾಜರಾಗಿ ಉತ್ತರಿಸುವಂತೆ  ಏಜೆನ್ಸಿಗೆ ನೋಟಿಸ್‌ ನೀಡಲಾಗಿದೆ ಎಂದು ಅಧಿಕಾರಿ ಸ್ಪಷ್ಟಪಡಿಸಿದರು.

ನಿಯಮ ಉಲ್ಲಂ ಸುವ ಹಾಗೂ ಸಾರ್ವಜನಿಕರ ಹಣಕ್ಕೆ ಭದ್ರತೆ ಒದಗಿಸದ ಏಜೆನ್ಸಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪ್ರಸ್ತುತ ಪ್ರಕರಣದ ತನಿಖೆ ಮುಂದುವರಿದಿದ್ದು, ಕೃತ್ಯದಲ್ಲಿ ಶಾಮೀಲಾಗಿರುವ ಎಲ್ಲರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು.
ಅಬ್ದುಲ್‌ ಅಹ್ಮದ್‌, ಡಿಸಿಪಿ, ವೈಟ್‌ಫೀಲ್ಡ್‌ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next