Advertisement

ರಂಗಲ್ಲಿ ಮಿಂದೇಳಲು ರಾಜಧಾನಿ ಸಜ್ಜು

06:35 AM Mar 20, 2019 | Team Udayavani |

ಬೆಂಗಳೂರು: ಶಾಲಾ-ಕಾಲೇಜು ಪರೀಕ್ಷೆ ಹಾಗೂ ಚುನಾವಣೆ ಬಿಸಿಯ ನಡುವೆಯೇ ರಂಗಿನ ಹಬ್ಬ ಹೋಳಿ ಆಚರಣೆಗೆ ಉದ್ಯಾನ ನಗರಿ ಸಜ್ಜಾಗುತ್ತಿದ್ದು, ನಗರದಲ್ಲಿ ಬಣ್ಣಗಳ ಭರ್ಜರಿ ವ್ಯಾಪಾರ ನಡೆಯುತ್ತಿದೆ.

Advertisement

ಗುರುವಾರ ಹೋಳಿ ಹಬ್ಬವಿರುವ ಹಿನ್ನೆಲೆಯಲ್ಲಿ ನಗರದ ಪ್ರಮುಖ ಮಾರುಕಟ್ಟೆಗಳಿಗೆ ಬಣ್ಣಗಳು ಲಗ್ಗೆ ಇಟ್ಟಿದ್ದು, ಕೆಂಪು, ಹಸಿರು, ಹಳದಿ, ನೀಲಿ, ಗುಲಾಬಿ ಬಣ್ಣಗಳಿಗೆ ಬೇಡಿಕೆ ಹೆಚ್ಚಿದೆ. ನೀರಿನಲ್ಲಿ ಕಲಸಿ ಬಳಸುವ ಬಣ್ಣಗಳು, ಹಿಡಿಯಾಗಿ ಎರಚುವ ಬಣ್ಣಗಳೂ ಸೇರಿದಂತೆ ಹಲವು ಬಗೆಯ ಬಣ್ಣಗಳ ಜತೆಗೆ ಬಣ್ಣ ಎರಚುವ ಆಟಿಕೆ ವಸ್ತುಗಳುನ್ನು ಜನ ಖರೀದಿಸುತ್ತಿದ್ದಾರೆ.

ರೆಸಾರ್ಟ್‌ಗಳಲ್ಲಿ ರಂಗಿನುತ್ಸವ: ಗ್ರಾಮೀಣ ಭಾಗದಲ್ಲಿ ಸಾಂಸ್ಕೃತಿ ಪ್ರತಿಬಿಂಬವಾಗಿ ನಡೆಯುತ್ತಿದ್ದ ಹೋಳಿ, ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶದಲ್ಲಿ ಫ್ಯಾಷನ್‌ ಆಗಿದೆ. ಬೆಂಗಳೂರಿನಲ್ಲಿ ದಸರಾ, ಸಂಕ್ರಾಂತಿ, ಯುಗಾದಿಯಂತಹ ಬಹತೇಕ ಹಬ್ಬಗಳನ್ನು ಪ್ರತಿಷ್ಠಿತ ಹೋಟೆಲ್‌ಗ‌ಳಲ್ಲಿ ಆಚರಿಸುತ್ತಾರೆ.

ಅಂತೆಯೇ ಕೆಲ ಪಂಚತಾರಾ ಹೊಟೇಲ್‌, ಮಾಲ್‌ ಮತ್ತು ರೆಸಾರ್ಟ್‌ಗಳಲ್ಲಿ ಹೋಳಿ ಉತ್ಸವ ಆಯೋಜಿಸಲಾಗಿದೆ. ಈ ಉತ್ಸವದಲ್ಲಿ ರೈನ್‌ ಡಾನ್ಸ್‌, ವಾಟರ್‌ ಬಲೂನ್‌, ಸ್ಟಾಪ್‌ ಮ್ಯೂಸಿಕ್‌ ಫ‌ನ್‌ಗಳನ್ನು ಏರ್ಪಡಿಸಲಾಗಿದ್ದು, ಆಸಕ್ತರು ನಿಗದಿತ ಹಣ ಪಾವತಿಸಿ ಈ ಉತ್ಸವಗಳಲ್ಲಿ ಭಾಗವಹಿಸುತ್ತಿದ್ದಾರೆ.

ರಾಸಾಯನಿಕ ಬಣ್ಣ – ಎಚ್ಚರ ಅಗತ್ಯ: ಮರ್ಕ್ನೂರಿಕ್‌ ಆಕ್ಸೈಡ್‌, ಕಾಪರ್‌, ರೊಡಮೈನ್‌ ಬಿ, ಕ್ರೋಮಿಯಂ ಆಯೋಡೈಡ್‌, ಸೀಸದಂತಹ ರಾಸಾಯನಿಕಗಳಿಂದ ಬಣ್ಣಗಳನ್ನು ತಯಾರಿಸಲಾಗುತ್ತದೆ. ಈ ಬಣ್ಣಗಳನ್ನು ಬಳಸಿದರೆ ಚರ್ಮದ ತೊಂದರೆ ಉಂಟಾಗುತ್ತದೆ. ಇನ್ನು ಈ ರಾಸಾಯನಿಕ ಬಣ್ಣ ಕಣ್ಣಿಗೆ ಬಿದ್ದ ಕೂಡಲೇ ಕಣ್ಣು ಕೆಂಪಗಾಗುವುದು, ನೋಯುವುದು, ಇಲ್ಲವೇ ಕಣ್ಣಿನ ಕಾರ್ನಿಯಾಗೆ ಹಾನಿ ಆಗುವ ಸಾಧ್ಯತೆಗಳಿರುತ್ತವೆ.

Advertisement

ಜತೆಗೆ ಅಸ್ತಮಾ ಉಸಿರಾಟ ತೊಂದರೆ ಸೇರಿದಂತೆ ನಾನಾ ರೀತಿಯ ಆರೋಗ್ಯ ಸಮಸ್ಯೆ ಎದುರಾಗುತ್ತವೆ. ಹೀಗಾಗಿ, ಬಣ್ಣ ಬಳಸುವಾಗ ಎಚ್ಚರ ಅಗತ್ಯವಿದೆ. ಇದೇ ವೇಳೆ ಅಕ್ಕಿ ಹಿಟ್ಟು, ಬೇವು, ತುಳಸಿಯಂತಹ ಎಲೆಗಳು, ಅರಿಶಿನ ಕೊಂಬು, ಹೂವಿನ ದಳಗಳಿಂದ ಸಿದ್ಧಪಡಿಸಡಿರುವ ಪರಿಸರ ಸ್ನೇಹಿ ಬಣ್ಣಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಅವುಗಳ ಆಯ್ಕೆ ಉತ್ತಮ ಎನ್ನುತ್ತಾರೆ ವೈದ್ಯರು.

ಕಾಲೇಜು, ಹಾಸ್ಟೆಲ್‌, ಹಳೇ ಬಡಾವಣೆಗಳು ಸೇರಿ ಪ್ರಮುಖ ಪ್ರದೇಶಗಳನ್ನು ಈಗಾಗಲೇ ಗುರುತಿಸಿ ಅಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಒತ್ತಾಯದಿಂದ ಬಣ್ಣ ಹಾಕುವರು ಹಾಗೂ ಸಾರ್ವಜನಿಕರಿಗೆ ತೊಂದರೆ ಕೊಡುವವರ ವಿರುದ್ಧ ಕಾನೂನು ಕ್ರಮಕ್ಕೆ ಸೂಚಿಸಲಾಗಿದೆ.
-ಸೀಮಂತ ಕುಮಾರ್‌ ಸಿಂಗ್‌, ಹೆಚ್ಚುವರಿ ಪೊಲೀಸ್‌ ಆಯುಕ್ತರು

Advertisement

Udayavani is now on Telegram. Click here to join our channel and stay updated with the latest news.

Next