Advertisement

ಮಂಗಳೂರಲ್ಲಿ ಶಾಂತಿಸಭೆ, ಪಾದಯಾತ್ರೆ ಅನಿವಾರ್ಯ

05:20 AM Jul 12, 2017 | Team Udayavani |

ಬೆಂಗಳೂರು: ಮಂಗಳೂರು ಭಾಗದಲ್ಲಿ ಪಕ್ಷಾತೀತ ಶಾಂತಿಸಭೆ ಹಾಗೂ ಪಾದಯಾತ್ರೆ ನಡೆಸಿ ಜನರಲ್ಲಿ ವಿಶ್ವಾಸ
ತುಂಬುವ ಕೆಲಸ ಮಾಡಲು ಮುಂದಾಗಬೇಕು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಸೇರಿದಂತೆ ಎಲ್ಲ ಪಕ್ಷಗಳು ರಾಜಕೀಯ ಬದಿಗಿಟ್ಟು ಸರ್ವಧರ್ಮಗಳ ಧಾರ್ಮಿಕ
ಮುಖಂಡರ ಜತೆಗೂಡಿ ಸ್ಥಳೀಯ ಸಂಘಟನೆಗಳನ್ನು ಒಳಗೊಂಡಂತೆ ಶಾಂತಿಸಭೆ ನಡೆಸುವುದು ಇಂದು ಅನಿವಾರ್ಯ. ಮಾಜಿ ಪ್ರಧಾನಿ ಎಚ್‌ .ಡಿ.ದೇವೇಗೌಡರ ನೇತೃತ್ವದಲ್ಲಿ ಆ ಕೆಲಸ ಆಗಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಚರ್ಚಿಸಲಿ ಎಂದು ಹೇಳಿದ್ದಾರೆ.

Advertisement

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೊಮ್ಮೆ ಬಿಜೆಪಿ, ಕಾಂಗ್ರೆಸ್‌ ಒಪ್ಪದಿದ್ದರೂ ನಮ್ಮ ಪಕ್ಷವಂತೂ ಶಾಂತಿ ಸಭೆ ಮತ್ತು ಪಾದಯಾತ್ರೆ ಮಾಡುವುದು ಖಚಿತ. ದೇವೇಗೌಡರ ಬಳಿ ಚರ್ಚಿಸಿ ದಿನಾಂಕ ನಿಗದಿಗೊಳಿಸುತ್ತೇನೆ. ಧಾರ್ಮಿಕ ಮುಖಂಡರಿಗೂ ಆಹ್ವಾನ ನೀಡುತ್ತೇನೆ ಎಂದು ತಿಳಿಸಿದರು. ನಿಷೇಧಾಜ್ಞೆ ಇರುವ ಕಡೆ ಪಾದಯಾತ್ರೆ ಮಾಡಿ ಕಾನೂನು ಉಲ್ಲಂ ಸುವುದಿಲ್ಲ. ನಿಷೇಧಾಜ್ಞೆ ಇಲ್ಲದ ಕಡೆ ಶಾಂತಿ ಸಭೆಗೆ ಅವಕಾಶ ಕೊಡುವುದಾಗಿ
ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ ಎಂದು ಹೇಳಿದರು.

ತಾಯಿ ಹೃದಯದ ಮಾತಾ ಇದು?: ಶೋಭಾ
ಕರಂದ್ಲಾಜೆ ಅವರು ದಕ್ಷಿಣ ಕನ್ನಡದವರು ಷಂಡರಲ್ಲ ಎಂದು ಹೇಳುತ್ತಾರೆ. ತಾಯಿ ಹೃದಯದ ಹೆಣ್ಣು ಮಗಳು ಹೇಳುವ ಮಾತಾ ಇದು ಎಂದು ಪ್ರಶ್ನಿಸಿದ ಅವರು, ಈ ರೀತಿ ಪ್ರಚೋದನಾಕಾರಿ ಹೇಳಿಕೆ ನೀಡಿ ಕತ್ತಿ, ಭರ್ಜಿ ಕೊಟ್ಟು ಪರಸ್ಪರ ಪ್ರಾಣ ತೆಗೆದುಕೊಳ್ಳುವಂತೆ ಮಾಡ್ತೀರಾ ಎಂದರು. ಮತ್ತೂಂದೆಡೆ ಸಂಸದ ಪ್ರಹ್ಲಾದ ಜೋಶಿಯವರು, ಮೃತ ಶರತ್‌ ಓಬಿಸಿ ಎನ್ನುವ ಕಾರಣಕ್ಕಾದರೂ ಕರುಣೆ ಬೇಡವೇ ಎಂದು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದಾರೆ. ಓಬಿಸಿ ಯಾಗಲಿ, ಮುಸ್ಲಿಂ ಆಗಲಿ ಪ್ರಾಣ ಪ್ರಾಣ ಅಲ್ಲವೇ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next