Advertisement

ನಲುಗುತ್ತಿವೆ ದನ ಕರು

10:46 AM Aug 31, 2019 | Suhan S |

ಚಿಕ್ಕೋಡಿ: ಭೀಕರ ಮಹಾ ಪ್ರವಾಹ ಜನರ ಬದುಕು ಕಸಿದುಕೊಂಡು ಹೋಗಿದೆ. ಜೀವನ ಕಟ್ಟಿಕೊಳ್ಳಲು ಹೆಣಗುತ್ತಿರುವ ಸಂತ್ರಸ್ತರಿಗೆ ಜಾನುವಾರುಗಳ ಮೇವಿನ ಸಮಸ್ಯೆ ತಲೆ ದೋರಿದೆ. ಜಮೀನುಗಳಲ್ಲಿದ್ದ ಮೇವು ಮಹಾಪೂರದಲ್ಲಿ ಕೊಚ್ಚಿ ಹೋಗಿದೆ. ಕಬ್ಬಿನ ಬೆಳೆ ಕೊಳೆತು ದುರ್ನಾತ ಬೀರುತ್ತಿದೆ. ಹೀಗಾಗಿ ಜಾನುವಾರು ಹೊಟ್ಟೆ ತುಂಬಿಸುವುದು ಸಂತ್ರಸ್ತರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

Advertisement

ಹಿಂದೆಂದೂ ಕಂಡು ಕೇಳರಿಯದ ಭೀಕರ ಪ್ರವಾಹ ಬಂದು ಚಿಕ್ಕೋಡಿ ಕೊಚ್ಚಿ ಹೋಗಿದೆ. ಲಕ್ಷಾಂತರ ಜನ ಮನೆ, ಮಠ, ತೋಟ, ರಸ್ತೆ, ಆಸ್ತಿ ಪಾಸ್ತಿ, ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿ ಧ್ವಂಸವಾಗಿದೆ. ಲಕ್ಷಾಂತರ ಹೆಕ್ಟೇರ್‌ದಲ್ಲಿ ಬೆಳೆದ ಕಬ್ಬಿನ ಬೆಳೆ ನೀರು ಪಾಲಾಗಿ ಕೊಳೆತು ಹೋಗುತ್ತಿದೆ. ಅಲ್ಪಸ್ವಲ್ಪ ಇದ್ದ ಕಬ್ಬು ಕಟಾವು ಮಾಡಿ ಜಾನುವಾರುಗಳಿಗೆ ಹಾಕಬೇಕು ಎಂದರೆ ಮೇವು ದುರ್ನಾತ ಬೀರುತ್ತಿವುದರಿಂದ ದನಕರುಗಳು ತಿನ್ನುತ್ತಿಲ್ಲ, ಹೊಸ ಮೇವು ಬರುವ ತನಕ ಆಯಾ ತಾಲೂಕಾಡಳಿತ ಜಾನುವಾರುಗಳಿಗೆ ಮೇವು ಪೂರೈಕೆ ಮಾಡಬೇಕೆನ್ನುವುದು ನದಿ ತೀರದ ಸಂತ್ರಸ್ತರ ಬೇಡಿಕೆಯಾಗಿದೆ. ಸರಕಾರ ಶೀಘ್ರ ಜಾನುವಾರುಗಳಿಗೆ ಮೇವು ಪೂರೈಕೆ ಮಾಡಬೇಕೆಂದು ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ನಿವಾಸಿ ಡಾ. ಅಜಿತಕುಮಾರ ಚಿಗರೆ ಒತ್ತಾಯಿಸಿದ್ದಾರೆ.

ಕೃಷ್ಣಾ ನದಿ ತೀರದ ಚಿಕ್ಕೋಡಿ ತಾಲೂಕಿನ ಚೆಂದೂರ, ಯಡೂರ, ಕಲ್ಲೋಳ, ಅಂಕಲಿ, ಮಾಂಜರಿ, ಇಂಗಳಿ, ಯಡೂರವಾಡಿ, ಸದಲಗಾ, ಮಲಿಕವಾಡ, ಜನವಾಡ, ರಾಯಬಾಗ ತಾಲೂಕಿನ ಜುಗುಳ, ಮಂಗಾವತಿ, ಶಹಾಪುರ, ಕುಸನಾಳ, ಮಳವಾಡ, ಸತ್ತಿ, ಸಪ್ತಸಾಗರ, ನದಿ-ಇಂಗಳಗಾಂವ, ಮಹಿಷವಾಡಗಿ, ನಂದೇಶ್ವರ ಮುಂತಾದ ಹಳ್ಳಿಗಳು, ರಾಯಬಾಗ ತಾಲೂಕಿನ ಬಾ. ಸವದತ್ತಿ, ದಿಗ್ಗೇವಾಡಿ, ಜಲಾಲಪೂರ, ಚಿಂಚಲಿ, ನಸಲಾಪುರ, ಬಿರಡಿ, ದೂಧಗಂಗಾ ಮತ್ತು ವೇದಗಂಗಾ ನದಿ ತೀರದ ನಿಪ್ಪಾಣಿ ತಾಲೂಕಿನ ಕಾರದಗಾ, ಭೋಜ, ಹುನ್ನರಗಿ, ಜತ್ರಾಟ, ಭೀವಸಿ, ಯಮಗರ್ಣಿ, ಕೊಗನ್ನೋಳ್ಳಿ, ಬಾರವಾಡ, ಮುಂತಾದ ಗ್ರಾಮಗಳ ನಿರಾಶ್ರಿತರ ಪರಿಸ್ಥಿತಿ ಚಿಂತಾಜನಕವಾಗಿದೆ.

ಪ್ರವಾಹ ಸಂದರ್ಭದಲ್ಲಿ ಪರಿಹಾರ ಕೇಂದ್ರದಲ್ಲಿ ಇರುವ ತನಕ ಆಯಾ ತಾಲೂಕಾಡಳಿತ ಸಂತ್ರಸ್ತರ ಜಾನುವಾರುಗಳಿಗೆ ಸಮರ್ಪಕವಲ್ಲದ್ದಿದ್ದರೂ ಅಲ್ಪ ಸ್ವಲ್ಪವಾದರೂ ಮೇವು ಒದಗಿಸಿದ್ದರು. ಈಗ ಪ್ರವಾಹ ಕಡಿಮೆಯಾಗಿ ಸಂತ್ರಸ್ತರು ಮನೆಗೆ ಹೋಗಿ ಬದುಕು ಕಟ್ಟಿಕೊಳ್ಳಲು ಎಲ್ಲ ರೀತಿಯ ಕಸರತ್ತು ನಡೆಸಿದ್ದಾರೆ. ಆದರೆ ಜಾನುವಾರುಗಳಿಗೆ ಮೇವಿನ ಸಮಸ್ಯೆ ಮಾತ್ರ ನೀಗುತ್ತಿಲ್ಲ, ಹೇಗಾದರೂ ಮಾಡಿ ನಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತೇವೆ. ಆದರೆ ಜಾನುವಾರುಗಳ ಪರಿಸ್ಥಿತಿ ಹೇಗೆ ಎಂಬ ಚಿಂತೆಯಲ್ಲಿ ಸಂತ್ರಸ್ತರು ಇದ್ದಾರೆ.

ಒಂದು ತಿಂಗಳ ಹಿಂದೇಯಷ್ಟೇ ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿ ತೀರದ ಕಬ್ಬು, ಗೋವಿನಜೋಳ, ಬಿಳಿಜೋಳ ಹಚ್ಚ ಹಸುರಿನಿಂದ ಕಂಗೊಳಿಸುತ್ತಿದ್ದವು. ಈಗ ಮಹಾಪೂರ ಬಂದು ಹೋದಾಗಿನಿಂದ ಕಬ್ಬಿನ ಬೆಳೆ ಕೊಳೆತು ಗಬ್ಬೆದ್ದು ನಾರುತ್ತಿದೆ. ನದಿ ತೀರದ ಜಮೀನುಗಳಲ್ಲಿ ಬಹಳಷ್ಟು ಕಡೆಗಳಲ್ಲಿ ನೀರು ಆವರಿಸಿಕೊಂಡಿದೆ. ಕೆಲ ಪ್ರದೇಶಗಳಲ್ಲಿ ಕೆಸರು ತುಂಬಿಕೊಂಡಿದೆ. ಹೀಗಾಗಿ ರೈತರು ಜಮೀನುಗಳ ಕಡೆ ಹೋಗದ ಪರಿಸ್ಥಿತಿ ಇದೆ. ಇಂತಹ ಸನ್ನಿವೇಶದಲ್ಲಿ ದನಕರುಗಳ ಹೊಟ್ಟೆ ಪಾಡೇನು ಎಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ.

Advertisement

 

•ಮಹಾದೇವ ಪೂಜೇರಿ

Advertisement

Udayavani is now on Telegram. Click here to join our channel and stay updated with the latest news.

Next