Advertisement

ಸತ್ತವರ ಲೆಕ್ಕಾಚಾರ ಸೇನೆಯದ್ದಲ್ಲ , ಗುರಿ ತಲುಪುವುದಷ್ಟೇ ನಮ್ಮ ಹೊಣೆ

01:00 AM Mar 05, 2019 | Team Udayavani |

ಕೊಯಮತ್ತೂರು: ದಾಳಿ ಮಾಡುವುದು ಮತ್ತು ಇಟ್ಟ ಗುರಿ ತಲುಪಿದೆಯೇ ಎಂದು ವಿಶ್ಲೇಷಿಸುವುದಷ್ಟೇ ನಮ್ಮ ಕೆಲಸ ಎಂದು ಐಎಎಫ್ ಮುಖ್ಯಸ್ಥ ಬಿ.ಎಸ್‌. ದನೋವಾ ಹೇಳಿದ್ದಾರೆ.

Advertisement

ದಾಳಿಯಲ್ಲಿ ಎಷ್ಟು ಜನ ಅಸುನೀಗಿದ್ದಾರೆ ಎಂಬ ವಿವರಗಳನ್ನು ಸರಕಾರ ನೀಡುತ್ತದೆ ಎಂದಿದ್ದಾರೆ.
ಬಾಲಾಕೋಟ್‌ ದಾಳಿಯಲ್ಲಿ ಎಷ್ಟು ಉಗ್ರರು ಸಾವನ್ನಪ್ಪಿದ್ದಾರೆ ಎಂಬುದಾಗಿ ಕೇಂದ್ರ ಸರಕಾರ ಸ್ಪಷ್ಟನೆ ನೀಡಬೇಕೆಂದು ವಿಪಕ್ಷಗಳು ಆಗ್ರಹಿಸುತ್ತಿರುವ ಬೆನ್ನಲ್ಲೇ ಪತ್ರಿಕಾಗೋಷ್ಠಿಯಲ್ಲಿ ಐಎಎಫ್ ಮುಖ್ಯಸ್ಥರು ಹೀಗೆ ಪ್ರತಿಕ್ರಿಯಿಸಿದ್ದಾರೆ.

ದಾಳಿಯ ಅನಂತರ ನಡೆಸುವ ವಿಶ್ಲೇಷಣೆಯಲ್ಲಿ ಗುರಿಯನ್ನು ಸಂಪೂರ್ಣವಾಗಿ ಧ್ವಂಸ ಮಾಡಿದ್ದೇವೆಯೇ ಇಲ್ಲವೇ ಎಂಬುದನ್ನು ನೋಡುತ್ತೇವೆ. ದಾಳಿಯಲ್ಲಿ ಎಷ್ಟು ಜನರು ಸಾವನ್ನಪ್ಪಿದ್ದಾರೆ ಎಂದು ಲೆಕ್ಕ ಮಾಡುವುದಿಲ್ಲ. ನಿಗದಿಪಡಿಸಿದ ಸ್ಥಳದಲ್ಲಿ ಬಾಂಬ್‌ ದಾಳಿ ನಡೆಸಿದ್ದೇವೆ ಎಂಬುದು ಸ್ಪಷ್ಟವಿದೆ. ಯೋಜಿಸಿ ದಂತೆಯೇ ದಾಳಿ ಯಶಸ್ಸು ಕಂಡಿದೆ. ನಾವು ಕಾಡಿನಲ್ಲಿ ಬಾಂಬ್‌ ಹಾಕಿದ್ದೇವೆ ಎಂದಾದರೆ ಪಾಕಿಸ್ಥಾನ ಏಕೆ ಪ್ರತಿಕ್ರಿಯಿಸುತ್ತಿತ್ತು ಎಂದು ಧನೋವಾ ಪ್ರಶ್ನಿಸಿದ್ದಾರೆ.

ಫಿಟ್‌ ಆದ ಮೇಲೆ ಹಾರಾಟ
ವಿಂಗ್‌ ಕಮಾಂಡರ್‌ ಅಭಿನಂದನ್‌ ಪುನಃ ಹಾರಾಟ ನಡೆಸುತ್ತಾರೆಯೇ ಅಥವಾ ಇಲ್ಲವೇ ಎಂಬುದು ಅವರ ವೈದ್ಯಕೀಯ ಫಿಟ್‌ನೆಸ್‌ ಅವಲಂಬಿಸಿದೆ. ಇದಕ್ಕೇ ನಾವು ಅವರ ಸಮಗ್ರ ವೈದ್ಯಕೀಯ ತಪಾಸಣೆ ನಡೆಸುತ್ತಿದ್ದೇವೆ. ಅಗತ್ಯವಿರುವ ಎಲ್ಲ ಚಿಕಿತ್ಸೆಯನ್ನೂ ನೀಡುತ್ತಿದ್ದೇವೆ ಎಂದಿದ್ದಾರೆ.

ಇನ್ನೂ ಚಾಲ್ತಿಯಲ್ಲಿದೆ!
ಧನೋವಾ ಅವರು, ಇನ್ನೂ ಚಾಲ್ತಿಯಲ್ಲಿರುವ ಆಪರೇಶನ್‌ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿರುವುದು ಕುತೂಹಲ ಕೆರಳಿಸಿದೆ. ಉಗ್ರ ನೆಲೆಗಳ ಮೇಲೆ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ ಎಂಬುದರ ಸೂಚನೆ ಇದು ಎಂದು ವಿಶ್ಲೇಷಿಸಲಾಗುತ್ತಿದೆ. ಬಾಲಾಕೋಟ್‌ನಲ್ಲಿ ಐಎಎಫ್ ದಾಳಿ ಮಾಡಿದ ಮರುದಿನ ಭಾರತದ ಮೇಲೆ ದಾಳಿ ಮಾಡಲು ಪಾಕ್‌ ಯತ್ನಿಸಿದ ಬಳಿಕ ಗಡಿಯಲ್ಲಿ ಸೇನೆ ಅತ್ಯಂತ ಕಟ್ಟೆಚ್ಚರ ವಹಿಸಿದೆ. ವಿಂಗ್‌ ಕಮಾಂಡರ್‌ ಅಭಿನಂದನ್‌ ಬಿಡುಗಡೆ ಬಳಿಕ ಪರಿಸ್ಥಿತಿ ತಣ್ಣಗಾಗಿದೆ ಎನ್ನಲಾಗಿದೆ ಯಾದರೂ ಸೇನೆ ಸನ್ನದ್ಧ ಸ್ಥಿತಿಯಲ್ಲಿದೆ ಎಂಬುದು ಧನೋವಾ ಹೇಳಿಕೆಯಲ್ಲಿ  ಪ್ರತಿಫ‌ಲಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next