Advertisement

ನೂತನ ಸ್ಟಾರ್ಟಪ್‌ ನೀತಿಗೆ ಸಂಪುಟ ಅಸ್ತು

10:59 PM Dec 22, 2022 | Team Udayavani |

ಬೆಳಗಾವಿ: 2027ರ ಹೊತ್ತಿಗೆ ರಾಜ್ಯದಲ್ಲಿ 25 ಸಾವಿರ ನವೋದ್ಯಮಗಳು ನೆಲೆಯೂರು ವಂತೆ ಮಾಡುವ ಗುರಿಯುಳ್ಳ 2022-27ರ ನಡುವಿನ ಐದು ವರ್ಷಗಳ ಅವಧಿಯ ಹೊಸ ಸ್ಟಾರ್ಟಪ್‌ ನೀತಿಗೆ ರಾಜ್ಯ ಸಚಿವ ಸಂಪುಟವು ಗುರುವಾರ ಅನು ಮೋದನೆ ನೀಡಿದೆ ಎಂದು ಐಟಿ ಮತ್ತು ಬಿಟಿ ಸಚಿವ ಡಾ| ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

Advertisement

ರಾಜ್ಯದಲ್ಲಿ ಸದ್ಯಕ್ಕೆ 15 ಸಾವಿರ ಸ್ಟಾರ್ಟಪ್‌ಗ್ಳಿವೆ. ಹೊಸ ನೀತಿಯಿಂದಾಗಿ ಇನ್ನೂ 10 ಸಾವಿರ ನವೋದ್ಯಮಗಳು ನಮ್ಮಲ್ಲಿ ಅಸ್ತಿತ್ವಕ್ಕೆ ಬರಲಿವೆ. ಎಲೆಕ್ಟ್ರಾನಿಕ್ಸ್‌, ಐಟಿ-ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ ರೂಪಿಸಿರುವ ಈ ನೀತಿಯು ಕರ್ನಾಟಕವನ್ನು ದೇಶದ ಸ್ಟಾರ್ಟಪ್‌ ವಲಯದಲ್ಲಿ “ಚಾಂಪಿಯನ್‌ ರಾಜ್ಯ’ವನ್ನಾಗಿ ಪ್ರತಿಷ್ಠಾಪಿಸುವ ಗುರಿ ಹೊಂದಿದೆ. ಇದರ ಭಾಗವಾಗಿ ಅಧಿಕ ಪ್ರಮಾಣದ ಬೆಳವ ಣಿಗೆ ದಾಖಲಿಸುವಂತಹ ಸ್ಟಾರ್ಟ್‌ಅಪ್‌ಗ್ಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ವಿವರಿಸಿದ್ದಾರೆ.

ಹೊಸ ನೀತಿಯು ಮುಖ್ಯ ವಾಗಿ ಬೆಂಗಳೂರಿನಿಂದ ಹೊರಗಿರುವ ತಂತ್ರಜ್ಞಾನ ಕ್ಲಸ್ಟರ್‌ಗಳಲ್ಲಿ ನವೋದ್ಯಮಗಳನ್ನು ಪ್ರೋತ್ಸಾಹಿ ಸಲಿದ್ದು, ಇದು ನನಸಾಗುವಂಥ ಕಾರ್ಯ ಪರಿಸರವನ್ನು ನಿರ್ಮಿಸಲಿದೆ. ಜತೆಗೆ ಸಾಮಾಜಿಕ ಉದ್ಯಮಶೀಲತೆ, ಅಧುನಿಕ ತಂತ್ರಜ್ಞಾನ ಮತ್ತು ಸಾಮಾಜಿಕ ಆಡಳಿತದಲ್ಲಿ ನಾವೀನ್ಯದ ತಂತ್ರಜ್ಞಾನ ಕ್ಷೇತ್ರಗಳಿಗೆ ಇದು ಇಂಬು ನೀಡಲಿದೆ. ಈ ಮೂಲಕ ಈಗ ನಾವು ಎದುರಿಸುತ್ತಿರುವ ಪರಿಸರ, ಸಾಮಾಜಿಕ ಮತ್ತು ಆಡಳಿತಾತ್ಮಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದ್ದು, ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಬಹುದಾಗಿದೆ ಎಂದರು.

ರಾಜ್ಯವು ಜಾಗತಿಕ ಮಟ್ಟದಲ್ಲಿ ಸ್ಟಾರ್ಟಪ್‌ ಹಬ್‌ ಆಗಬೇಕೆನ್ನುವುದು ಸರಕಾರದ ಗುರಿಯಾಗಿದೆ. ಇದಕ್ಕಾಗಿ ಈ ವಲಯದ ಬೆಳವಣಿಗೆ ಮತ್ತು ವಹಿವಾಟಿಗೆ ಮುಕ್ತ ಉತ್ತೇಜನ ಕೊಡಲಾಗುವುದು. ಒಟ್ಟು 9 ಅಂಶಗಳ ಆಧಾರದ ಮೇಲೆ ರೂಪಿಸಿರುವ ಈ ನೀತಿಯು ಸರಕಾರಿ ಸಂಸ್ಥೆಗಳಲ್ಲಿ ಮೂಲಸೌಲಭ್ಯ ಅಭಿವೃದ್ಧಿ ಪಡಿಸುವ ಮತ್ತು “ಬಿಯಾಂಡ್‌ ಬೆಂಗಳೂರು’ ಉಪಕ್ರಮವನ್ನು ಸಾಕಾರಗೊಳಿಸುವ ಗುರಿಯನ್ನೂ ಹೊಂದಿದೆ ಎಂದು ಹೇಳಿದರು.

ಇದಲ್ಲದೆ, ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯ ಕೌಶಲಗಳಿಗೆ ಪ್ರೋತ್ಸಾಹ ನೀಡುವುದು, ಸಾಮಾಜಿಕ ಆಡಳಿತ ವಲಯದಲ್ಲಿ ತಂತ್ರಜ್ಞಾನ ಆಧಾರಿತ ಪರಿಹಾರ ರೂಪಿಸುವುದು, ಇನ್ಕ್ಯುಬೇಷನ್‌ ಕೇಂದ್ರಗಳ ಸ್ಥಾಪನೆ ಮತ್ತು ಅಭಿವೃದ್ಧಿ, ಸಾಂಸ್ಥಿಕ ಹೂಡಿಕೆದಾರರು ಮತ್ತು ಏಂಜೆಲ್‌ ಹೂಡಿಕೆದಾರರ ಜತೆಗೆ ಸರಕಾರದ ಮೂಲಕವೂ ನವೋದ್ಯಮಗಳಲ್ಲಿ ಬಂಡವಾಳ ಹೂಡಲು ಅವಕಾಶಗಳನ್ನು ಸೃಷ್ಟಿಸುವ ಗುರಿಗಳನ್ನೂ ಹೊಸ ಸ್ಟಾರ್ಟಪ್‌ ನೀತಿ ಹೊಂದಿದೆ ಎಂದು ವಿವರಿಸಿದರು.

Advertisement

ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ 11 ವಸತಿ ಶಾಲೆ
ವಿಶ್ವ ಬ್ಯಾಂಕ್‌ ನೆರವಿನೊಂದಿಗೆ ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆ ಅನುಷ್ಠಾನದ 3740 ಕೋಟಿ ರೂ.ಗಳ ಪರಿಷ್ಕೃತ ಯೋಜನಾ ವೆಚ್ಚಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ. 2022-23ನೇ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆಯಿಂದ 198 ಕೋಟಿ ರೂ. ಮೊತ್ತದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳ 11 ವಸತಿ ಶಾಲೆಗಳನ್ನು ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

2022-23ನೇ ಸಾಲಿಗೆ ರಾಜ್ಯದ ಸರಕಾರಿ ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳು ಹಾಗೂ ಪ.ಪೂ. ಕಾಲೇಜುಗಳಿಗೆ 100 ಕೋಟಿ ರೂ. ವೆಚ್ಚದಲ್ಲಿ ಪೀಠೊಪಕರಣ ಖರೀದಿಗೆ ಸಂಪುಟ ಒಪ್ಪಿಗೆ ನೀಡಿದ್ದು, ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 620 ವಿವಿಧ ಮಾದರಿಯ ಹೊಸ ಬಿಎಸ್‌-6 ಬಸ್‌ಗಳನ್ನು 269.75 ಕೋ. ರೂ. ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇ ಖಾತಾ: ಇಪ್ಪಿಗೆ
ಸ್ಥಳಿಯ ಯೋಜನಾ ಪ್ರದೇಶದ ವ್ಯಾಪ್ತಿಯ ಹೊರಭಾಗದಲ್ಲಿ ಬರುವ ನಗರ ಸ್ಥಳಿಯ ಸಂಸ್ಥೆಗಳು 2017ರ ಮಾ.22ರ ಪೂರ್ವದಲ್ಲಿ ತೆರೆದಿರುವ ಖಾತೆಗಳನ್ನು ಇ ಆಸ್ತಿ ತಂತ್ರಾಂಶದಲ್ಲಿ ಮುಂದುವರಿಸಲು ಅವಕಾಶ ನೀಡಲಾಗಿದೆ. ಹಾಗೂ ಸ್ಥಳಿಯ ಯೋಜನಾ ಪ್ರದೇಶವ್ಯಾಪ್ತಿಯ ಹೊರಭಾಗದಲ್ಲಿ ಬರುವ ಗ್ರಾಪಂಗಳನ್ನು ನಗರ ಸ್ಥಳಿಯ ಸಂಸ್ಥೆಗಳಾಗಿ ಮೇಲ್ದರ್ಜೆಗೇರಿಸಿದ ಬಳಿಕ ಈ ಹಿಂದೆ ಗ್ರಾಪಂಗಳು ಇಸ್ವತ್ತು ತಂತ್ರಾಂಶದಡಿ ನಿರ್ವಹಿಸಿದ್ದ ಖಾತೆಗಳನ್ನು ಇಆಸ್ತಿ ತಂತ್ರಾಂಶದಲ್ಲಿ ದಾಖಲಿಸುವುದಕ್ಕೆ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಹೇಳಲಾಗಿದೆ.
**
ಪ್ರಮುಖ ನಿರ್ಣಯಗಳು
– ಮಂಗಳೂರು ಮಹಾನಗರ ಪಾಲಿಕೆ ಸುರತ್ಕಲ್‌ ಮಾರುಕಟ್ಟೆ ಸಂಕೀರ್ಣ ನಿರ್ಮಾಣ ಯೋಜನೆಯ 82 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ.

– ಉಡುಪಿ ಜಿಲ್ಲೆ ಬೈಂದೂರು ವಿಧಾನಸಭಾ ಕ್ಷೇತ್ರದ ಗುಡಿ ಮಹಾಲಿಂಗೇಶ್ವರ ಏತ ನೀರಾವರಿ ಯೋಜನೆಯನ್ನು 72 ಕೋಟಿ ರೂ. ಮೊತ್ತದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮತಿ.

– ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಬಂಡವಾಳ ವೆಚ್ಚಗಳಡಿ ಕೈಗೊಂಡಿದ್ದ ಉಡುಪಿ ಗ್ರಾಮಾಂತರ ಬಸ್‌ ನಿಲ್ದಾಣಕ್ಕೆ 31.34 ಕೋಟಿ ರೂ., ಕನಕಪುರ ತಾಲೂಕು ಕೇಂದ್ರ ಬಸ್‌ ನಿಲ್ದಾಣಕ್ಕೆ 29.58 ಕೋಟಿ ರೂ. ಹಾಗೂ ನೆಲಮಂಗಲ ಬಸ್‌ ನಿಲ್ದಾಣಕ್ಕೆ 47.54 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಘಟನೋತ್ತರ ಅನುಮೋದನೆ.

-ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಬಸರಕೋಡು ಗ್ರಾಮದ ನಡಹಳ್ಳಿ ಎಥೆನಾಲ್‌ ಮತ್ತು ಅಲೈಡ್‌ ಕಾರ್ಖಾನೆಗೆ ಕಬ್ಬು ಮೀಸಲು ಕ್ಷೇತ್ರ ನಿಗದಿ

– ಬೀದರ್‌ ಜಿಲ್ಲೆಯ ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆ ಸರಕಾರಕ್ಕೆ ಪಾವತಿಸಬೇಕಿರುವ 19.08 ಕೋಟಿ ರೂ. ಕಬ್ಬು ಖರೀದಿ ಮೊತ್ತವನ್ನು ಬಡ್ಡಿರಹಿತ ಸಾಲವನ್ನಾಗಿ ಪರಿವರ್ತಿಸಲು ಅನುಮತಿ.

– ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಮೈಪಾಲ ಎಂಬಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟನ್ನು 72 ಕೋಟಿ ರೂ. ಅಂದಾಜು ಮೊತ್ತದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ

– ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕು ಕುಮದ್ವತಿ ನದಿಯಿಂದ ಕೊಪ್ಪದ ಕೆರೆಗೆ ನೀರು ತುಂಬಿಸುವ 11.87 ಕೋಟಿ ರೂ. ವೆಚ್ಚದ ಏತ ನೀರಾವರಿ ಯೋಜನೆಯ ಪರಿಷತ್‌ ಅಂದಾಜಿಗೆ ಒಪ್ಪಿಗೆ.

– ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ 2022-23ನೇ ಸಾಲಿನ ಮ್ಯಾಕ್ರೋ ಕ್ರಿಯಾ ಯೋಜನೆಯಡಿ ಬೀದರ್‌ ಜಿಲ್ಲೆ ಚಿಕ್ಕಪೇಟೆ ವರ್ತುಲ ರಸ್ತೆಯಿಂದ ನೌಬಾದ್‌ವರೆಗೆ ರಸ್ತೆ ನಿರ್ಮಾಣ ಕಾಮಗಾರಿಯನ್ನು 15.49 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ

– ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಮೇಳವಂಕಿ ಹಾಗೂ ಇತರ 40 ಗ್ರಾಮ (86 ಜನವಸತಿ)ಹಾಗೂ ಮೂಡಲಗಿ ತಾಲೂಕಿನ 32 ಗ್ರಾಮ (62 ಜನವಸತಿ)ಗಳಿಗೆ ಡಿಬಿಒಟಿ ಆಧಾರದ ಮೇಲೆ ಜಲಜೀವನ್‌ ಮಿಷನ್‌ ಅಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು 475 ಕೋಟಿ ರೂ.ಗಳಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ.

– ಕೇಂದ್ರ ಸರಕಾರದ ಪ್ರಾಯೋಜಿತ ಗಡಿ ಪ್ರದೇಶ ಯೋಜನೆಯ ಅನುಷ್ಠಾನ ಸಂಬಂಧ ಆನೇಕಲ್‌ ತಾಲೂಕಿನ ಬಾಲವಾಡಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅನಂತರ 2015ರ ಎ.1ರಿಂದ ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಸಲಹಾ ಮಂಡಳಿಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ 6 ಸಿಬಂದಿಯನ್ನು ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇವೆಗಳಲ್ಲಿ ಕೆಎಟಿ ಹಾಗೂ ಹೈಕೋರ್ಟ್‌ ಆದೇಶದಂತೆ ಖಾಯಂ ಆಗಿ ವಿಲೀನಗೊಳಿಸಲು ಪ್ರಸ್ತಾಪಿಸಲಾಗಿರುವ ವಿಶೇಷ ವಿಲೀನಾತಿ ನಿಯಮಗಳಿಗೆ ಅನುಮೋದನೆ.

– ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವತಿಯಿಂದ ಕಲಬುರಗಿ ಸೂಪರ್‌ ಮಾರ್ಕೆಟ್‌ ಪ್ರದೇಶದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಮತ್ತು ರಾಯಚೂರು ನಗರದಲ್ಲಿ 18 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ನಗರ ಸಾರಿಗೆ ಬಸ್‌ ನಿಲ್ದಾಣ ಕಾಮಗಾರಿಗೆ ಘಟನೋತ್ತರ ಅನುಮೋದನೆ.

Advertisement

Udayavani is now on Telegram. Click here to join our channel and stay updated with the latest news.

Next