Advertisement

ಸಿಎಎ ಪರ ಬಾರದ ಒಮ್ಮತ ಅಭಿಪ್ರಾಯ

09:46 PM Dec 25, 2019 | Team Udayavani |

ಮೈಸೂರು: ನಿವೃತ್ತ ಮೇಜರ್‌ ಜನರಲ್‌ ಎಸ್‌.ಜಿ. ಒಂಬತ್ಕೆರೆ ನೇತೃತ್ವದಲ್ಲಿ ನಗರದ ಇನ್‌ಸ್ಟಿಟ್ಯೂಟ್‌ ಆಫ್ ಎಂಜಿನಿಯರ್ ಸಭಾಂಗಣದಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ – ಸಂವಿಧಾನ ಉಲ್ಲಂಘನೆಯೇ? ವಿಷಯದ ಕುರಿತು ಆಯೋಜಿಸಿದ್ದ ಸಂವಾದದಲ್ಲಿ ಪರ-ವಿರೋಧ ಚರ್ಚೆಗೆ ಗ್ರಾಸವಾಯಿತು.

Advertisement

ಈ ಸಂದರ್ಭ ಮಾತನಾಡಿದ ನಿವೃತ್ತ ಮೇ.ಜ. ಎಸ್‌.ಜಿ. ಒಂಬತ್ಕೆರೆ, ಯಾವುದೇ ಪೂರ್ವ ತಯಾರಿ ಇಲ್ಲದೆ ರಾಷ್ಟ್ರದಲ್ಲಿ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯಿದೆಯ ಸಮರ್ಪಕ ಅನುಷ್ಠಾನ ತುಂಬಾ ಕಷ್ಟದ ಕೆಲಸ. ಇಡೀ ಕಾಯಿದೆಯ ಇತಿಹಾಸವು ಕೊನೆ ಹಂತ ತಲುಪಿದ್ದು ಧರ್ಮಾನುಸರವಾಗಿ.

ಸಿಎಎ (ಪೌರತ್ವ ತಿದ್ದುಪಡಿ ಕಾಯಿದೆ), ಎನ್‌ಆರ್‌ಸಿ (ರಾಷ್ಟ್ರೀಯ ಪೌರತ್ವ ನೋಂದಣಿ) ಮತ್ತು ಎನ್‌ಪಿಆರ್‌ (ರಾಷ್ಟ್ರೀಯ ಜನಗಣತಿ) ಈ ಮೂರು ಕೂಡ ಗೊಂದಲದಿಂದ ಕೂಡಿವೆ. ಪ್ರಧಾನಮಂತ್ರಿ ಒಂದು ರೀತಿ ಹೇಳಿಕೆ ನೀಡಿದರೆ, ಗೃಹ ಸಚಿವರು ಒಂದು ರೀತಿ ಹೇಳಿಕೆ ನೀಡುತ್ತಾರೆ ಎಂದು ಹೇಳಿದರು.

ಪೂರ್ವ ತಯಾರಿ ಕೊರತೆ: ಪೌರತ್ವ ಪಡೆಯಲು ಅನುಸರಿಸಬೇಕಾದ ಕ್ರಮದಲ್ಲಿ ಲೋಪದೋಷಗಳಿವೆ. ಎನ್‌ಪಿಆರ್‌ನಲ್ಲಿ ಮಾಹಿತಿ ಸಂಗ್ರಹಿಸಿ, ಎನ್‌ಸಿಆರ್‌ನಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಅಲ್ಲಿ ಮಹತ್ವದ ದಾಖಲೆ ನೀಡದಿದ್ದರೆ ಅವರನ್ನು ಸಿಎಎ ಅಡಿ ವಿಚಾರಣೆ ನಡೆಸಲಾಗುತ್ತದೆ.

ಹೊರದೇಶಗಳಿಂದ ಬಂದ ಮುಸ್ಲಿಂ ಅಥವಾ ಇಲ್ಲಿರುವ ನುಸುಳಕೋರರನ್ನು ಡಿಟೇನ್ಶನ್‌ ಕ್ಯಾಂಪ್‌ನಲ್ಲಿಡಲಾಗುತ್ತದೆ. ಆದರೆ ಅಸ್ಸಾಂ ಒಂದರಲ್ಲೆ 3 ಕೋಟಿ ಜನಸಂಖ್ಯೆಯಲ್ಲಿ 19 ಲಕ್ಷ ಮಂದಿ ಸರಿಯಾದ ದಾಖಲೆ ಇಲ್ಲದೆ ಇಂದಿಗೂ ಡಿಟೆನ್ಶನ್‌ ಕ್ಯಾಂಪ್‌ನಲ್ಲಿದ್ದಾರೆ. ಅವರಿಗಾಗಿ ಸರ್ಕಾರ 1600 ಕೋಟಿ ಖರ್ಚು ಮಾಡುತ್ತಿದೆ. ಸರಿಯಾದ ಪೂರ್ವ ತಯಾರಿ ಇಲ್ಲದ್ದು ಇದಕ್ಕೆ ಕಾರಣ ಎಂದು ವಿವರಿಸಿದರು.

Advertisement

ಬೆಂಕಿ ಹಚ್ಚುವ ಕೆಲಸ: ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ ಮಾತನಾಡಿ, ದೇಶದಲ್ಲಿ ಆರ್ಥಿಕತೆ ಕುಸಿದಿದ್ದು, ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ರೈತರ ಆತ್ಮಹತ್ಯೆಯನ್ನು ಪರಿಹರಿಸುವ ಬದಲು ಜನರನ್ನು ಗೊಂದಲಕ್ಕೀಡು ಮಾಡಿ, ಧರ್ಮವನ್ನು ಮಧ್ಯ ತರುವ ಮೂಲಕ ದೇಶ ಒಡೆಯುವ ಕೆಲಸ ನಡೆಯುತ್ತಿದೆ. ಧರ್ಮದ ಹೆಸರಿನಲ್ಲಿ ಜನರ ಮಧ್ಯೆ ಬೆಂಕಿ ಹಚ್ಚುವ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ. ನಾನು ಸಿಎಎ ವಿರೋಧಿಸುತ್ತೇನೆ ಎಂದರು.

ಮೈಸೂರು ನಿವಾಸಿ ವಾದಿರಾಜ್‌ ರಾವ್‌ ಮಾತನಾಡಿ, ನಾವುಗಳ ಒಂದು ಧರ್ಮದ ಪರವಾಗಿ ಮಾತನಾಡುವುದು ಸರಿಯಲ್ಲ. ದೇಶದ ಭದ್ರತೆ, ಹಿತದೃಷ್ಟಿಯಿಂದ ಸಿಎಎ ಅನುಕೂಲ. ನುಸುಳುಕೋರರಿಗೆ ನಾವೇಕೆ ಪೌರತ್ವ ನೀಡಬೇಕು ಎಂದು ತಮ್ಮ ವಾದ ಮಂಡಿಸಿದರು.

ಪರ, ವಿರೋಧ ಗೊಂದಲ: ನಿವೃತ್ತ ಮೇ.ಜ. ಎಸ್‌.ಜಿ. ಒಂಬತ್ಕೆರೆ ನೀಡಿದ ಉಪನ್ಯಾಸ ಕಾರ್ಯಕ್ರಮದಲ್ಲಿ ಸಿಎಎ ಪರ ಮತ್ತು ವಿರೋಧ ವ್ಯಕ್ತಪಡಿಸುವವರು ನಡುವೆ ವಾಗ್ವಾದ ನಡೆಯಿತು. ಕೆಲವರು “ಮಾತನಾಡಲೇ ಬೇಡಿ’ ಎಂದರೆ, “ಅದನ್ನು ನಿರ್ಧರಿಸುವವರು ನೀವಲ್ಲ, ಮಾತನಾಡುವುದು ನನ್ನ ಹಕ್ಕು’ ಎಂಬಿತ್ಯಾದಿ ವಾಗ್ಬಾಣಗಳು ತೂರಿಬಂದವು. ಕೊನೆಗೆ ಪರ- ವಿರೋಧದವರಿಗೆ ತಲಾ 3 ನಿಮಿಷ ಕಾಲವಾಕಾಶ ನೀಡಲಾಯಿತು.

ಹೊರಗಿನಿಂದ ಬಂದವರು: ಹಿರಿಯ ಪತ್ರಕರ್ತ ಟಿ. ಗುರುರಾಜ್‌ ಮಾತನಾಡಿ, ಸಂವಿಧಾನದಲ್ಲಿ ಧರ್ಮ ನಿರಪೇಕ್ಷತೆಯಿಂದ ನಡೆದುಕೊಳ್ಳಬೇಕೆಂಬ ಆಶಯಕ್ಕೆ ಈ ಕಾಯಿದೆ ಕೊಳ್ಳಿಯಿಟ್ಟಿದೆ. ಈ ದೇಶದ ಮೂಲನಿವಾಸಿಗಳು ಮಾತ್ರ ಇಲ್ಲಿ ಉಳಿಯಬೇಕೆಂದರೆ ಶೇ.8 ರಷ್ಟು ಜನರು ಮಾತ್ರ ಉಳಿಯಬೇಕು. ಉಳಿದ ಶೇ. 92 ರಷ್ಟು ಮಂದಿ ಹೊರಗಿನಿಂದ ಬಂದವರೆ ಎಂದು ತಮ್ಮ ಅಭಿಪ್ರಾಯ ಮಂಡಿಸಿದರು.

ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ.ಕೆ.ಸಿ. ಬಸವರಾಜು ಮಾತನಾಡಿ, ನಾವು ಧರ್ಮದ ದೃಷ್ಟಿಯಿಂದ ಸಿಎಎ ಕಾಯಿದೆ ನೋಡುವುದನ್ನು ಬಿಡಬೇಕು. ಇಂದು ನಾನು ಬದುಕಿದರೆ, ನಾಳೆ ನಮ್ಮ ಮಕ್ಕಳು ಬದುಕಬೇಲ್ಲವೇ? ಭಯೋದ್ಪಾನೆ ನಿಯಂತ್ರಿಸುವ ದೃಷ್ಟಿಯಿಂದ ಕಾಯಿದೆ ಅಗತ್ಯವಿದೆ. 2013ರಲ್ಲಿ ಸಂಸತ್‌ನಲ್ಲಿ ಚರ್ಚೆ ಮಾಡಿ ನಂತರ ಈ ಕಾಯಿದೆ ಹೊರಬಿದ್ದಿದೆ. ನಮ್ಮ ದೇಶದ ಭದ್ರತೆ ದೃಷ್ಟಿಯಿಂದ ಸಿಎಎ ಅಗತ್ಯವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next