ಬೆಂಗಳೂರು: ಹಣಕಾಸಿನ ವ್ಯವಹಾರದ ಬಗ್ಗೆ ಮಾತನಾಡುವ ನೆಪದಲ್ಲಿ ಉದ್ಯಮಿಯೊಬ್ಬರನ್ನು ಕರೆದೊಯ್ದ ಪರಿಚಯಸ್ಥರು ಅಪಹರಿಸಿ ಹಲ್ಲೆ ನಡೆಸಿ ನಗದು, ಚಿನ್ನಾಭರಣ ದರೋಡೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಾಗಡಿ ರಸ್ತೆಯ ಚೋಲರ್ ಲೇಔಟ್ ನಿವಾಸಿ ಎಂ.ಡಿ.ಕಿಶೋರ್(33) ಅಪಹರಣಕ್ಕೊಳಗಾದ ಉದ್ಯಮಿ. ಜೂ.21ರಂದು ಘಟನೆ ನಡೆದಿದ್ದು, ಜೂ.26ರಂದು ಸಂದೀಪ್ ಮತ್ತು ಆತನ 10 ಮಂದಿ ತಂಡದ ವಿರುದ್ಧ ಅಪಹರಣ ಮತ್ತು ಚಿನ್ನಾಭರಣ ದರೋಡೆ ಮಾಡಿದ್ದಾರೆಂದು ಕಿಶೋರ್ ದೂರು ನೀಡಿದ್ದಾರೆ. ಆದರೆ, ತಡವಾಗಿ ಪ್ರಕರಣ ದಾಖಲಿಸಲು ನಿಖರ ಕಾರಣ ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ದೂರುದಾರ ಕಿಶೋರ್ ಮತ್ತು ಸಂದೀಪ್ ಪರಿಚಯಸ್ಥರಾಗಿದ್ದು, ಜೂ.21 ರಂದು ಹಣಕಾಸಿನ ವಿಚಾರದ ಕುರಿತು ಮಾತನಾಡಬೇಕೆಂದು ಮೈಸೂರು ರಸ್ತೆಯ ಗಾಳಿ ಆಂಜನೇಯಸ್ವಾಮಿ ದೇವಾಲಯದ ಬಳಿ ಬರುವಂತೆ ಸಂದೀಪ್, ಕಿಶೋರ್ ಅವರನ್ನು ಕರೆಸಿಕೊಂಡಿದ್ದಾನೆ. ನಂತರ ಕಾರಿನಲ್ಲಿ ಹತ್ತಿಸಿಕೊಂಡ ಸಂದೀಪ್, ನೈಸ್ ರಸ್ತೆಗೆ ಕರೆದೊಯ್ದಿದ್ದಾನೆ. ಇದೇ ವೇಳೆ ಹಿಂದಿನಿಂದ ಐದು ಬೈಕ್‌ಗಳಲ್ಲಿ ಬಂದ 10 ಮಂದಿ ಕಾರನ್ನು ನಿಲ್ಲಿಸಿ ಕಿಶೋರ್ ಜತೆ ಸೇರಿ ಕಾರಿನಲ್ಲಿ ಹಲ್ಲೆ ನಡೆಸಿದ್ದಾರೆ.
ದರೋಡೆ: ಹಲ್ಲೆ ಬಳಿಕ ಕಿಶೋರ್ ಬಳಿಯಿದ್ದ ಚಿನ್ನದ ಸರ ಹಾಗೂ ಒಂದೂವರೆ ಲಕ್ಷ ರೂ. ಕಸಿದುಕೊಂಡು, 2015ರಲ್ಲಿ ಪಡೆದಿದ್ದ ಹಣವನ್ನು ವಾಪಸ್ ಕೊಡುತ್ತೇನೆಂದು ಖಾಲಿ ಪತ್ರಕ್ಕೆ ಸಹಿ ಹಾಗೂ ಹೆಬ್ಬೆಟ್ಟು ಹಾಕಿಸಿಕೊಂಡಿದ್ದು, ಬೇರೆಡೆ ಹೇಳದಂತೆ ಪ್ರಾಣ ಬೆದರಿಕೆಯೊಡ್ಡಿದ್ದಾರೆ. ನಂತರ ಮಾರಕಾಸ್ತ್ರ ತೋರಿಸಿ ಕನಕಪುರ ರಸ್ತೆ ನಮ್ಮ ಮೆಟ್ರೋ ನಿಲ್ದಾಣ ಬಳಿ ಇಳಿಸಿ ಪರಾರಿಯಾಗಿದ್ದಾರೆ. ಇಲ್ಲಿಂದ ಮನೆಗೆ ತೆರಳಿದ ಕಿಶೋರ್, ಸ್ನೇಹಿತರ ಜತೆ ಚರ್ಚಿಸಿ ಜೂ.23ರಂದು ದೂರು ನೀಡಿದ್ದಾರೆ ಎಂದು ಬ್ಯಾಟರಾಯನಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಗೊಂದಲದ ಹೇಳಿಕೆ: ದೂರುದಾರ ಕಿಶೋರ್ ವಿಚಾರಣೆ ವೇಳೆ ಗೊಂದಲ ಹೇಳಿಕೆ ನೀಡುತ್ತಿದ್ದಾರೆ. ಒಮ್ಮೆ ಸಂದೀಪ್ ಮತ್ತು ತಮ್ಮ ನಡುವೆ ಹಣಕಾಸಿನ ವಿಚಾರವಾಗಿ ಜಗಳವಾಗಿತ್ತು ಎನ್ನುತ್ತಾರೆ. ಮತ್ತೂಮ್ಮೆ ಬೇರೆಯದ್ದೆ ಕಾರಣಗಳನ್ನು ನೀಡುತ್ತಿದ್ದಾರೆ. ಆರೋಪಿಗಳ ಬಂಧನದ ಬಳಿಕವಷ್ಟೇ ಸತ್ಯಾಂಶ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.