ದಾಂಡೇಲಿ: ಹಿಂಬದಿ ಚಕ್ರ ಸಂಪೂರ್ಣ ದುಸ್ಥಿತಿಯಲ್ಲಿದ್ದರೂ ಪ್ರಯಾಣಿಕರನ್ನು ಕರೆದೊಯ್ದ ಖಾಸಗಿ ಬಸ್ಸನ್ನು ತಡೆದು ನಿಲ್ಲಿಸಿದ ಘಟನೆ ಸೆ.28ರ ಶನಿವಾರ ರಾತ್ರಿ ನಗರದ ಹಳಿಯಾಳ ರಸ್ತೆಯ 3 ನಂ. ಗೇಟ್ ಬಳಿ ನಡೆದಿದೆ.
ನಗರದಿಂದ ಬೆಂಗಳೂರಿಗೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ಬಸ್ಸಿನ ಹಿಂಬದಿ ಚಕ್ರ ಸೀಳಿ ಹೋಗಿರುವುದನ್ನು ಗಮನಿಸಿದ ಗವಿಸಿದ್ದಪ್ಪ ಎಂಬವರು ಕೂಡಲೇ ತಮ್ಮ ದ್ವಿಚಕ್ರ ವಾಹನದ ಮೂಲಕ ಬಸ್ಸನ್ನು ಹಿಂಬಾಲಿಸಿಕೊಂಡು ಹೋಗಿ 3 ನಂ. ಗೇಟ್ ಬಳಿ ತಡೆದು ನಿಲ್ಲಿಸಿದ್ದಾರೆ.
ಬಸ್ ನಗರದಿಂದ ಹೊರಟ ತಕ್ಷಣವೇ ಏನೋ ಶಬ್ದ ಬಂದಿರುವುದನ್ನು ಮತ್ತು ಹಿಂಬದಿ ಚಕ್ರ ದುಸ್ಥಿಯಲ್ಲಿದ್ದ ಪರಿಣಾಮವಾಗಿ ಬಸ್ ವಾಲಿಕೊಂಡು ಹೋಗುತ್ತಿರುವುದನ್ನು ಗಮನಿಸಿದ ಪ್ರಯಾಣಿಕರು ಚಾಲಕ ಮತ್ತು ನಿರ್ವಾಹಕನನ್ನು ಪ್ರಶ್ನಿಸಿದ್ದಾರೆ. ದುರಸ್ತಿ ಮಾಡುವ ಮಾತನ್ನು ಅವರು ಆಡಿದರೂ ದುರಸ್ತಿ ಮಾಡಿರಲಿಲ್ಲ. ಕೊನೆಗೆ ಗವಿಸಿದ್ದಪ್ಪ ಅವರು ಬಸ್ಸನ್ನು 3 ನಂ. ಗೇಟ್ ಬಳಿ ನಿಲ್ಲಿಸಿ, 112 ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಖಾಸಗಿ ಪ್ರಯಾಣಿಕ ವಾಹನದಲ್ಲಿ ಹುಬ್ಬಳ್ಳಿಗೆ ಕಳುಹಿಸಿ ಹುಬ್ಬಳ್ಳಿಯಿಂದ ಮತ್ತೆ ಬಸ್ಸಿನ ಮೂಲಕ ಬೆಂಗಳೂರಿಗೆ ಕಳುಹಿಸಿ ಕೊಡಲು ಬಸ್ಸಿನ ಸ್ಥಳೀಯ ಪ್ರತಿನಿಧಿಗಳಿಗೆ ಸೂಚನೆ ನೀಡಿದರು. ಪ್ರಯಾಣಿಕರ ಪ್ರಾಣದ ಮೇಲೆ ಈ ರೀತಿ ಚೆಲ್ಲಾಟವಾಡದಂತೆ ಬಸ್ಸಿನ ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದಾರೆ.
ಸ್ಥಳೀಯರಾದ ಗವಿಸಿದ್ದಪ್ಪ ಹಾಗೂ ಪ್ರಯಾಣಿಕರು ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿ ಬಸ್ಸಿನ ಸಿಬ್ಬಂದಿಗಳ ನಿಷ್ಕಾಳಜಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಒಂದು ವೇಳೆ ಬಸ್ಸನ್ನು ತಡೆಯದೆ ಇರುತ್ತಿದ್ದಲ್ಲಿ ಬಸ್ ಮುಂದೆ ಹೋಗುತ್ತಿದ್ದಂತೆ ಅನಾಹುತ ನಡೆಯುವ ಸಾಧ್ಯತೆಯಿತ್ತು ಎನ್ನಲಾಗಿದೆ.