ಬೀಳಗಿ: ಇಲ್ಲಿಯ ಬಸ್ ನಿಲ್ದಾಣ ಮೂಲಕಸೌಕರ್ಯಗಳಿಲ್ಲದೆ ಸೊರಗಿ ನಿಂತಿದೆ. ಅವ್ಯವಸ್ಥೆ ಆಗರವಾಗಿರುವ ಬಸ್ ನಿಲ್ದಾಣದಿಂದಾಗಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಹೆಸರಿಗೆ ಹೈಟೆಕ್ ಬಸ್ ನಿಲ್ದಾಣ, ಕುಡಿಯಲು ಹನಿ ನೀರಿಲ್ಲ ಎಂದು ಪ್ರಯಾಣಿಕರು ನಿತ್ಯವೂ ಹಿಡಿಶಾಪ ಹಾಕುವಂತಾಗಿದೆ.
ನಿಲ್ದಾಣಕ್ಕೆ ಬೇಕಿದೆ ಚಿಕಿತ್ಸೆ: ಬಸ್ ನಿಲ್ದಾಣದಲ್ಲಿ ಕುಡಿವ ನೀರು ಎಂದು ನಾಮಫಲಕವಿರುವ ನಳಗಳು ಇವೆ. ಆದರೆ, ಆ ನಳದ ಕೊಳವೆಯಲ್ಲಿ ಅದೆಷ್ಟೋ ದಿನಗಳಿಂದ ಹನಿ ನೀರು ಕೂಡ ಬರದೆ ನಳಗಳು ಜಂಗು ಹಿಡಿದಿವೆ. ಪ್ರಯಾಣಿಕರು ಕುಡಿಯುವ ನೀರಿಗಾಗಿ ಹೋಟೆಲ್ಗಳನ್ನೇ ಆಶ್ರಯಿಸುವುದು ಅನಿವಾರ್ಯವಾಗಿದೆ.
ಈ ಕುರಿತು ಸ್ಥಳೀಯ ಬಸ್ ಘಟಕ ವ್ಯವಸ್ಥಾಪಕರನ್ನು ಕೇಳಿದರೆ, ಅರೇ..ನಿಲ್ದಾಣದಲ್ಲಿ ಕುಡಿವ ನೀರಿನ ನಳಗಳಿವೆ, ಕುಡಿಯುವ ನೀರು ಎಂದು ಬೋರ್ಡ್ ಕೂಡ ಹಾಕಿದೆ ನೀರಿನ ವ್ಯವಸ್ಥೆಯಿದೆ ಎಂದು ಸಾರ್ವಜನಿಕರಿಗೆ ಸುಳ್ಳು ಮಾಹಿತಿ ನೀಡುತ್ತಾರೆ.
ರಾತ್ರಿ ವೇಳೆ ದೀಪಗಳು ಉರಿಯುವುದಿಲ್ಲ: ರಾತ್ರಿ 9 ಗಂಟೆಯೊಳಗೆ ಬಸ್ ನಿಲ್ದಾಣ ಆವರಣದೊಳಗಿನ ಎಲ್ಲ ವಿದ್ಯುದ್ದೀಪಗಳು ಆಫ್ ಆಗುತ್ತವೆ. ರಾತ್ರಿ ವೇಳೆ ಬಸ್ ನಿಲ್ದಾಣದಲ್ಲಿ ಕತ್ತಲೆಯದ್ದೇ ಸಾಮ್ರಾಜ್ಯ. ಪರಿಣಾಮ, ಇಲ್ಲಿನ ಮೂತ್ರಾಲಯದಲ್ಲಿಯೂ ಕೂಡ ಬಹಿರ್ದೆಸೆ ಮಾಡಿ ಹೋಗುತ್ತಾರೆ. ನಿಲ್ದಾಣದಲ್ಲಿ ಸಂಪೂರ್ಣ ಕತ್ತಲೆ ಆವರಿಸುವುದರಿಂದ ನಿಲ್ದಾಣ ಆವರಣ ಹಲವು ಕಿಡಿಗೇಡಿಗಳಿಗೆ ಅನೈತಿಕ ಚಟುವಟಿಕೆ ತಾಣವಾಗಿ ಪರಿಣಮಿಸಿದೆ. ಶೌಚಕ್ಕೆ 7 ರೂಪಾಯಿ: ಬಸ್ ನಿಲ್ದಾಣದಲ್ಲಿರುವ ಶೌಚಾಲಯ ನಿರ್ವಹಿಸುವವರು ಶೌಚಕ್ಕೆ 7 ರೂಪಾಯಿ ಪಡೆಯುತ್ತಿದ್ದಾರೆ . ಹಾಗೂ ಮಹಿಳೆಯರು ಮೂತ್ರಿ ಮಾಡಬೇಕೆಂದರೂ 2 ರೂ. ಕೊಡಬೇಕು. ಇಲ್ಲಿ
ಮೂತ್ರಿ ಕೂಡ ಉಚಿತವಿಲ್ಲ. ಇದರಿಂದ ಪ್ರಯಾಣಿಕರು ತೊಂದರೆ ಪಡುವಂತಾಗಿದೆ. ಶೌಚಾಲಯಗಳ ಸೆಫ್ಟಿ ಟ್ಯಾಂಕ್ ಯುಜಿಡಿ ಕನೆಕ್ಸನ್ ಹೊಂದಿಲ್ಲ. ಪರಿಣಾಮ, ಶೌಚಾಲಯದ ಮಲಮೂತ್ರ ಒಂದೊಂದು ಬಾರಿ ರಸ್ತೆಗೆ ನುಗ್ಗುತ್ತದೆ.
•ರವೀಂದ್ರ ಕಣವಿ