Advertisement

ಸಂಜೆ ಬಳಿಕ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಸ್‌ ನಂಬುವಂತಿಲ್ಲ

06:00 AM Apr 19, 2018 | |

ಉದಯವಾಣಿ ವಿಶೇಷ
ಸುಬ್ರಹ್ಮಣ್ಯ: ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಜೆ ಬಳಿಕ ಬಸ್‌ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣ ವಾಗಿದೆ. ಮಂಗಳೂರು ಡಿಪೋಗೆ ಒಳಪಟ್ಟ ಮಂಗಳೂರು- ಕುಕ್ಕೆ ಸುಬ್ರಹ್ಮಣ್ಯ ಮಾರ್ಗ ದಲ್ಲಿ ಬಸ್‌ಗಳ ಓಡಾಟದ ಸಮಯದಲ್ಲಿ ಬದಲಾವಣೆ ಮಾಡಿದ ಬಳಿಕ ಪರಿಸ್ಥಿತಿ ಬಿಗಡಾಯಿಸಿದೆ. 

Advertisement

ಈ ಮೊದಲು ಮಂಗಳೂರು- ಸುಬ್ರಹ್ಮಣ್ಯ ನಡುವೆ ಅರ್ಧ ತಾಸಿಗೆ ಒಂದರಂತೆ ಬಸ್‌ ಓಡಾಟವಿತ್ತು.  ಎ. 1ರಿಂದ ಈ ರೂಟ್‌ಗಳಲ್ಲಿ ಬಸ್‌ ಓಡಾಟದ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಕೆಲವೊಂದು ಅವಧಿಯಲ್ಲಿ ಮುಕ್ಕಾಲು ಗಂಟೆಗೊಮ್ಮೆ ಹಾಗೂ ಕೆಲವೊಮ್ಮೆ 2 ಗಂಟೆಗೆ ಒಂದು ಬಸ್‌ ಓಡಾಡುತ್ತಿದ್ದು, ಸ್ಥಳೀಯರು ಮತ್ತು ಯಾತ್ರಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪ್ರಸ್ತುತ ಸಂಜೆ 5.45ರ ಬಳಿಕ ಸುಬ್ರಹ್ಮಣ್ಯದಿಂದ ಮಂಗಳೂರಿಗೆ ತೆರಳುವ ಕೊನೆಯ ಬಸ್‌ ಸಂಚಾರ ಆರಂಭಿಸುತ್ತದೆ. ಆದರೆ ಇದೂ ಮಂಗಳೂರಿಗೆ ಬರುವುದಿಲ್ಲ. ಉಪ್ಪಿನಂಗಡಿವರೆಗೆ ಬಂದು ಅಲ್ಲಿಂದ ಬೇರೆ ಬಸ್‌ ಮೂಲಕ ಪ್ರಯಾಣಿಕರನ್ನು ಕಳುಹಿಸಲಾಗು ತ್ತದೆ. ಅದೇ ರೀತಿ ಮಂಗಳೂರಿನಿಂದ ಸಂಜೆ 6 ಗಂಟೆಯ ಬಳಿಕ ಸುಬ್ರಹ್ಮಣ್ಯಕ್ಕೆ ಬಸ್‌ ಇಲ್ಲ.

ದಿನವಿಡೀ ವ್ಯಯ
ಜಿಲ್ಲಾ ಕೇಂದ್ರ ಮಂಗಳೂರು 105 ಕಿ.ಮೀ. ದೂರದಲ್ಲಿದೆ. ಸ್ಥಳೀಯರು ಆವಶ್ಯಕತೆಗಳಿಗಾಗಿ ಇಲ್ಲಿಗೆ ಬಂದು ಹೋಗಲು ದಿನ ವಿಡೀ ವ್ಯಯವಾಗುತ್ತದೆ. ಇನ್ನು ಕೆಲವೊಮ್ಮೆ ಕೆಲಸವನ್ನು ಪೂರ್ತಿಗೊಳಿಸದೆ ಬಸ್‌ ಇಲ್ಲ ಎಂಬ ಕಾರಣಕ್ಕೆ ಅರ್ಧದಲ್ಲಿಯೇ ಊರಿಗೆ ತೆರಳಿ ಮತ್ತೂಮ್ಮೆ ಬರಬೇಕಾದ ಅನಿವಾರ್ಯತೆ ಇದೆ.

ಬಸ್‌ಗಳಿದ್ದರೂ ಚಾಲಕರಿಲ್ಲ: ಸಮಸ್ಯೆಗೆ ಮೂಲ ಕಾರಣ ಸಿಬಂದಿ ಕೊರತೆ. ಮಂಗಳೂರು ಡಿಪೋದಲ್ಲಿದ್ದ 440 ಚಾಲಕ-ನಿರ್ವಾಹಕ ಸಿಬಂದಿಯಲ್ಲಿ  45 ಮಂದಿ ರಜೆ/ಕರ್ತವ್ಯಕ್ಕೆ ಗೈರು ಹಾಜರಾಗಿದ್ದಾರೆ. ಇದರಿಂದಾಗಿ ಬಸ್‌ಗಳಿದ್ದರೂ ಚಾಲಕರಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

Advertisement

ಶಿರಾಡಿ ಬಂದ್‌ ಪರಿಣಾಮ: ಶಿರಾಡಿ ಘಾಟಿಯಲ್ಲಿ 2ನೇ ಹಂತದ ಕಾಂಕ್ರೀಟ್‌ ಕಾಮಗಾರಿ ನಡೆಯುತ್ತಿರುವುದರಿಂದ ಬೆಂಗಳೂರು- ಮಂಗಳೂರು ನಡುವೆ ಸಂಚರಿಸುತ್ತಿದ್ದ ಬಸ್‌ಗಳ ಓಡಾಟವೂ ಈಗ ಬಂದ್‌ ಆಗಿದೆ. ಇಲ್ಲವಾದಲ್ಲಿ ಸುಬ್ರಹ್ಮಣ್ಯದಿಂದ ಧರ್ಮಸ್ಥಳಕ್ಕೆ ಹೋಗುವ ಬಸ್‌ಗಳಲ್ಲಿ ಗುಂಡ್ಯವರೆಗೆ ಬಂದು ಅಲ್ಲಿಂದ ಬೇರೆ ಬಸ್‌ ಹಿಡಿದು ಮಂಗಳೂರು, ಬೆಂಗಳೂರು ಕಡೆಗಿನ ಪ್ರಯಾಣಿಕರು ಸಂಚರಿಸಬಹುದಿತ್ತು. 

ಆನೆಕಾಟ: ಈ ನಡುವೆ ಸುಬ್ರಹ್ಮಣ್ಯ ಪರಿಸರದಲ್ಲಿ ಇತ್ತೀಚೆಗೆ ಕಾಡಾನೆಗಳ ಓಡಾಟ ಹೆಚ್ಚಿರುವುದರಿಂದ ಖಾಸಗಿ ವಾಹನಗಳಲ್ಲಿಯೂ ರಾತ್ರಿ ವೇಳೆ ಸಂಚರಿಸಲು ಜನರು ಹಿಂದೇಟು ಹಾಕುತ್ತಿದ್ದಾರೆ. ಹಲವಾರು ಬಾರಿ ಆನೆ ಎದುರಾದ ಬಳಿಕ ದ್ವಿಚಕ್ರ ಸವಾರರು ಸೂರ್ಯಾಸ್ತದ ಬಳಿಕ ಇಲ್ಲಿನ ರಸ್ತೆಯಲ್ಲಿ ಸಂಚರಿಸುತ್ತಿಲ್ಲ. ಅಕಸ್ಮಾತ್‌ ಇಲ್ಲಿ ಅಪಾಯ ಎದುರಾದರೆ ಮೊಬೈಲ್‌ ನೆಟ್‌ವರ್ಕ್‌ ಕೂಡ ಇಲ್ಲದಿರುವುದರಿಂದ ಯಾರನ್ನೂ ತುರ್ತಾಗಿ ಕರೆಯುವುದಕ್ಕೂ ಅಸಾಧ್ಯವಾಗಿದೆ.

ಮಂಗಳೂರು ಡಿಪೋದ ಸಿಬಂದಿ 440
ರಜೆಯಲ್ಲಿ  ತೆರಳಿರುವ ಸಿಬಂದಿ 45

ಎ. 1ರಿಂದ ವೇಳಾಪಟ್ಟಿ  ಬದಲು
ಸುಬ್ರಹ್ಮಣ್ಯ-ಮಂಗಳೂರು ಕೊನೆಯ ಬಸ್‌ ಸಂಚಾರ 5.45 ಸಂಜೆ
ಮಂಗಳೂರು-ಸುಬ್ರಹ್ಮಣ್ಯ ಕೊನೆಯ ಬಸ್‌ ಸಂಚಾರ 6.00 ಸಂಜೆ

ಪರಿಹಾರ ಕಲ್ಪಿಸುತ್ತೇವೆ 
ಚಾಲಕರು-ನಿರ್ವಾಹಕರು ಕಾರಣ ನೀಡದೆ ಸುದೀರ್ಘ‌ ಗೈರು ಹಾಜರಾಗಿದ್ದರಿಂದ ವೇಳಾಪಟ್ಟಿಯಲ್ಲಿ ಕೆಲ ಬದಲಾವಣೆಗಳು ಆಗಿವೆ. ಆದಷ್ಟು ಬೇಗನೆ ಕ್ರಮ ವಹಿಸುತ್ತೇವೆ.
ಜಯಶಾಂತ್‌ ವಿಭಾಗ ಸಂಚಾರಣಾಧಿಕಾರಿ- ಮಂಗಳೂರು

ಸಮಸ್ಯೆ ನಿವಾರಿಸಿ
ಸಾರಿಗೆ ಬಸ್‌ಗಳನ್ನೇ ಆಶ್ರಯಿಸಿದ್ದೇವೆ. ಬಸ್‌ಗಳು ಸಮಯಕ್ಕೆ ಸರಿಯಾಗಿ ಓಡಾಟ ನಡೆಸದಿದ್ದರೆ ಸಮಯ, ಹಣ ಎಲ್ಲ ವ್ಯರ್ಥವಾಗುತ್ತದೆ. ಸಂಚಾರ ಬದಲಾವಣೆ ಬವಣೆ ಅರಿತು ಪ್ರಾಮಾಣಿಕವಾಗಿ ಸ್ಪಂದಿಸುವ ಆವಶ್ಯಕತೆ ಇದೆ.
ಕೃಷ್ಣಪ್ರಸಾದ್‌ ಎಂ., ನಾಗರಿಕ

ಬಾಲಕೃಷ್ಣ  ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next