Advertisement
ಹುಂಝ ಅಥವಾ ಬುರುಷೋ ಜನಾಂಗವು ನೆರೆರಾಷ್ಟ್ರವಾದ ಪಾಕಿಸ್ತಾನದ ಉತ್ತರಕ್ಕೆ ಇರುವ ಚಿತ್ರಾಲ್ ಜಿಲ್ಲೆಯ ಹುಂಝ ಕಣಿವೆ ಪ್ರದೇಶದಲ್ಲಿ ವಾಸ ಮಾಡುತ್ತಾರೆ. 2000ನೇ ವರ್ಷದಲ್ಲಿ ಈ ಪಂಗಡದ ಒಟ್ಟು ಜನಸಂಖ್ಯೆ ಸುಮಾರು 87,000 ರಷ್ಟು ಇದ್ದು, ಈ ಪಂಗಡದ ಸ್ತ್ರೀ ಹಾಗೂ ಪುರುಷರು ಬೇರೆ ಜನರಿಗೆ ಹೋಲಿಸಿದರೆ ಹೆಚ್ಚು ಆರೋಗ್ಯವಂತರು. ಈ ಜನಾಂಗದ ಜನರ ಜೀವನಶೈಲಿಯೂ ಅತ್ಯಂತ ವಿಭಿನ್ನವಾಗಿದೆ. ಈ ಜನಾಂಗದ ಮಹಿಳೆಯರು ಅವರ 65 ರಿಂದ 75ನೆಯ ವಯಸ್ಸಿನವರೆಗೂ ಮಕ್ಕಳಿಗೆ ಜನ್ಮ ನೀಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಪುರುಷರು ಸುಮಾರು 90ರ ವಯಸ್ಸಿನವರೆಗೂ ಸಂತಾನೋತ್ಪತ್ತಿಯ ಶಕ್ತಿಯನ್ನು ಹೊಂದಿದ್ದಾರೆ.
Related Articles
ಈ ಜನಾಂಗದ ಅಬ್ದುಲ್ ಮೊಬುಡು ಎಂಬ ವ್ಯಕ್ತಿಯು ಲಂಡನ್‌ಗೆ ಹೋದಾಗ ಲಂಡನ್ ವಿಮಾನ ನಿಲ್ದಾಣದ ವಲಸೆ (ಇಮಿಗ್ರೇಶನ್) ವಿಭಾಗದಲ್ಲಿ ಈತನ ಪಾಸ್‌ಪೋರ್ಟ್‌ನಲ್ಲಿ ಇದ್ದ ಜನನ ದಿನಾಂಕಕ್ಕೂ ಆತನ ದೇಹಾಕೃತಿಗೂ ಹೋಲಿಕೆ ಕಷ್ಟವಾಗಿತ್ತು. ನಂತರ ಜನನ ದಿನಾಂಕದ ಸತ್ಯಾಸತ್ಯತೆಯ ಪರೀಕ್ಷೆಯನ್ನು ಮಾಡುವ ಸಲುವಾಗಿ ವಿವರಗಳನ್ನು ಪರೀಕ್ಷಿಸಿದಾಗ ತಿಳಿದು ಬಂದ ವಿಷಯ ಎಲ್ಲರಿಗೂ ಅಚ್ಚರಿಯನ್ನು ತಂದಿತ್ತು. ಇದರ ನಂತರವೇ ಹುಂಝ ಜನಾಂಗದ ಬಗ್ಗೆ ಅನೇಕರು ಅಧ್ಯಯನ ಮಾಡಿ ಅವರ ಜೀವನ ಶೈಲಿ ಮತ್ತು ಆರೋಗ್ಯಯುತ ಜೀವನದ ಕುರಿತಾಗಿ ಹೊರಜಗತ್ತಿಗೆ ತಿಳಿಯುವಂತೆ ಮಾಡಿದರು.
Advertisement
ಹುಂಝ ಕಣಿವೆಯಲ್ಲಿ ಇಲ್ಲಿನ ಜನರು ತಮ್ಮದೇ ಆದ ಶೈಲಿಯಲ್ಲಿ ಆಹಾರವನ್ನು ಬೆಳೆಯುತ್ತಾರೆ. ಇಲ್ಲಿನ ಶುದ್ಧ ಹಿಮನದಿಯ ನೀರನ್ನು ಕುಡಿಯಲು ಮತ್ತು ಸ್ನಾನ ಮಾಡಲು ಬಳಸುತ್ತಾರೆ. ನಗರಗಳು ಅಥವಾ ವಾಣಿಜ್ಯ ಕೇಂದ್ರಗಳಲ್ಲಿ ದೊರೆಯುವ ಯಾವುದೇ ರೀತಿಯ ಕತ್ತರಿಸಿದ ಅಥವಾ ಯಾವುದೇ ಸಂಸ್ಕರಿಸಿದ ಆಹಾರಗಳನ್ನು ಇವರು ಸೇವಿಸುವುದೇ ಇಲ್ಲ. ತಾಜಾ ತರಕಾರಿಗಳು, ಹಾಲು, ಧಾನ್ಯಗಳು ಮತ್ತು ಹಣ್ಣುಗಳನ್ನಷ್ಟೇ ಇವರು ಆಹಾರವಾಗಿ ಬಳಸುತ್ತಾರೆ. ಏಪ್ರಿಕಾಟ್‌ಗಳಿಂದ ಸಮೃದ್ಧವಾಗಿರುವ ಆಹಾರವನ್ನು ಇವರು ಪ್ರಧಾನ ಆಹಾರವಾಗಿ ಬಳಸುತ್ತಾರೆ. ಇವರು ವರ್ಷಕ್ಕೆ ಕೆಲವು ತಿಂಗಳುಗಳ ಕಾಲ ಕೇವಲ ಏಪ್ರಿಕಾಟ್‌ರಸದಿಂದ ತಯಾರಿಸಿದ ಆಹಾರಗಳನ್ನೇ ಬಳಸುತ್ತಾರೆ.
ವಿಶ್ವದ ಕೆಲವು ಪ್ರದೇಶಗಳನ್ನು ಹಸಿರು ವಲಯಗಳೆಂದು (ಬ್ಲೂಝೋನ್) ಕರೆಯಲಾಗುತ್ತದೆ, ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನರು ಶತಾಯುಷಿಗಳು ಅಥವಾ ದೀರ್ಘಾವಧಿಯ ಆಯಸ್ಸನ್ನು ಹೊಂದಿರುತ್ತಾರೆ. ಹುಂಝಾಗಳಿರುವ ಕಣಿವೆ ಪ್ರದೇಶವನ್ನು ಹಸಿರುವಲಯ ಪಟ್ಟಿಗೆ ಸೇರಿಸಿಲ್ಲವಾದರೂ ಹುಂಝಗಳು ಹಸಿರು ವಲಯದಲ್ಲಿನ ನಿವಾಸಿಗಳ ಬಹುತೇಕ ಗುಣಲಕ್ಷಣಗಳನ್ನು ಹೋಲುತ್ತಾರೆ. ಇವರು ಸಮುದ್ರ ಮಟ್ಟಕ್ಕಿಂತ ಅತಿ ಹೆಚ್ಚು ಎತ್ತರದ ಪ್ರದೇಶದಲ್ಲಿ ವಾಸಿಸುತ್ತಾರೆ. ಪರ್ವ ತ ಗಳ ಹಾದಿ ಯಲ್ಲಿ ದಿನಕ್ಕೆ 15ರಿಂದ 20 ಕಿ. ಮೀ. ನಡೆಯುತ್ತಾರೆ. ಇವರು ಧಾರ್ಮಿಕ ಸಂಪ್ರದಾಯವನ್ನು ಸಹ ಅನುಸರಿಸುತ್ತಾರೆ. ಈ ಅವಧಿಯ 4-5 ತಿಂಗಳವರೆಗೆ ಇವರು ಘನ ಆಹಾರವನ್ನು ಸೇವಿಸದೇ ಒಣಗಿದ ಏಪ್ರಿಕಾಟ್ ರಸವನ್ನು ಮಾತ್ರ ಕುಡಿಯುತ್ತಾರೆ. ಜಾಗತೀಕರಣದ ಬಿಸಿಯು ಈ ಸಮುದಾಯಕ್ಕೂ ನಿಧಾನವಾಗಿ ವ್ಯಾಪಿಸುತ್ತಿದೆ. ಇದರಿಂದಾಗಿ ಇವರು ಕೈಗಾರಿಕೆಗಳಲ್ಲಿ ತಯಾರಾದ ಸಂಸ್ಕರಿಸಿದ ಆಹಾರಗಳನ್ನೂ ಬಳಸಲು ಪ್ರಾರಂಭಿಸಿದ್ದು ಕ್ಷಯ ಮತ್ತು ಜಠರದ ಸಮಸ್ಯೆಗಳು, ಹಿಂದೆಂದೂ ಕಾಣದ ಕಾಯಿಲೆಗಳು ಕಾಣಿಸಿಕೊಳ್ಳಲಾರಂಭಿಸಿದೆ.
ಸಂತೋಷ್ ರಾವ್