Advertisement

ಸುಡು ಬಿಸಿಲು: ಜೇಬು ಸುಡುತ್ತೆ ಎಳನೀರು ಬೆಲೆ 

01:41 PM Dec 06, 2017 | |

ಬಜಪೆ: ತೆಂಗಿನ ಮರಗಳಿಗೆ ಕೊಳೆರೋಗ ತಗುಲಿದೆ. ಗರಿಗಳು ಉದುರುತ್ತಿದ್ದು, ಫ‌ಸಲು ಕಡಿಮೆಯಾಗಿದೆ. ಹವಾಮಾನ ವೈಪರಿತ್ಯ ಹಾಗೂ ಮಳೆ ಕೊರತೆ ಕಾರಣ ಎನ್ನಲಾಗಿದ್ದು, ತೆಂಗಿನಕಾಯಿ ಹಾಗೂ ಎಳನೀರು ವ್ಯಾಪಾರಿಗಳಿಗೆ ಭಾರೀ ಹೊಡೆತ ಬಿದ್ದಿದೆ. ಕಾಯಿ-ಎಳನೀರಿನ ದರವೂ ಹಠಾತ್‌ ಏರಿಕೆ ಕಂಡಿದೆ.

Advertisement

ಎರಡು ವರ್ಷಗಳಿಂದ ಮಳೆ ಪ್ರಮಾಣ ಕಡಿಮೆಯಾಗಿದೆ. ಈ ಬಾರಿಯೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಉತ್ತಮ ಮಳೆಯಾಗಬೇಕಿದ್ದ ಜೂನ್‌-ಆಗಸ್ಟ್‌ ಅವಧಿಯಲ್ಲಿ ಮಳೆ ಕೊರತೆಯಾಗಿ ತೆಂಗಿನ ಫ‌ಸಲು ಕುಂಠಿತವಾಗಿದೆ.

ಈ ವರ್ಷ ನೆರೆಯೇ ಬಂದಿಲ್ಲ ಎಂದರೆ ಮಳೆ ಕೊರತೆ ಎಷ್ಟಿತ್ತೆಂದು ಊಹಿಸಬಹುದು. ನದಿಗಳಲ್ಲಿ ಪ್ರವಾಹ ಬಂದರೂ ಒಂದು ದಿನವೂ ನೀರು ನಿಂತಿಲ್ಲ. ಕೆಲವೆಡೆ ಈಗಲೇ ತೋಡುಗಳಿಗೆ ಕಟ್ಟ, ಕಿಂಡಿ ಅಣೆಕಟ್ಟಿಗೆ ತಡೆ ಕಟ್ಟುವ ಕಾರ್ಯ ಆರಂಭವಾಗಿದ್ದು, ತೀವ್ರವಾದ ಬೇಸಗೆಯನ್ನು ಸೂಚಿಸುತ್ತಿದೆ.

ತೆಂಗಿನ ಕಾಯಿ ದರವೂ ಏರಿಕೆ ಕಂಡಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಕೆಜಿಗೆ 15ರಿಂದ 20 ರೂ. ದರವಿತ್ತು. ಈ ಸಲ 40 ರೂಪಾಯಿ. ತೆಂಗಿನ ಎಣ್ಣೆ ದರವೂ ಕಳೆದ ವರ್ಷ 120 ರೂಪಾಯಿ ಇದ್ದುದು ಈ ಸಲ 200 ರೂ. ತನಕ ಆಗಿದೆ. ಇತ್ತೀಚಿನ ವರ್ಷಗಳಲ್ಲೇ ಇದು ಗರಿಷ್ಠ. ತೆಂಗಿನಕಾಯಿ, ಸೀಯಾಳ ಹಾಗೂ ಎಣ್ಣೆಯ ದರ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ.

ತೆಂಗಿನಕಾಯಿಗೂ ದರ ಏರಿಕೆ ಆಗಿರುವುದರಿಂದ ರೈತರು ಎಳನೀರು ತೆಗೆಯಲು ಹಿಂಜರಿಯುತ್ತಿದ್ದಾರೆ. ಹಿಂದೆಲ್ಲ ಅಷ್ಟಮಿ ಸಂದರ್ಭದಲ್ಲಿ ತೆಂಗಿನ ಸಸಿ ನೆಡುವ ಕ್ರಮ ಇತ್ತು. ಈಗ ಅದು ಕಣ್ಮರೆಯಾಗಿದೆ. ದೇಹಾರೋಗ್ಯಕ್ಕೆ, ದಾಹ – ದಣಿವಿನ ಪರಿಹಾರಕ್ಕೆ ಬಳಕೆಯಾಗುತ್ತಿದ್ದ ಶುದ್ಧ ಪಾನೀಯ ಎಳನೀರಿನ ಅಭಾವ ಎಲ್ಲರನ್ನೂ ಕಾಡುತ್ತಿದೆ.

Advertisement

ದರ ಜಿಗಿತ: ಸೀಯಾಳಕ್ಕೆ 35 ರೂ.
ಕಳೆದ ಬಾರಿ ಈ ಸಮಯದಲ್ಲಿ ಸೀಯಾಳಕ್ಕೆ ರಖಂ 16ರಿಂದ 20 ರೂಪಾಯಿ ದರವಿತ್ತು. ಈ ಬಾರಿ 25ರಿಂದ 30 ರೂಪಾಯಿ ಆಗಿದೆ. ಗ್ರಾಹಕರಿಗೆ 30ರಿಂದ 35 ರೂ.ಗೆ ಒಂದರಂತೆ ಎಳನೀರು ಸಿಗುತ್ತಿದೆ. ಊರಿನ ಸೀಯಾಳದ ಜತೆಗೆ ಲಾರಿಯಲ್ಲಿ ಬೇರೆ ಊರುಗಳಿಂದ ಬರುವ ಎಳನೀರುಗಳೂ ಈ ಹಿಂದೆ ನವೆಂಬರ್‌- ಡಿಸೆಂಬರ್‌ ತಿಂಗಳಲ್ಲಿ ಸಿಗುತ್ತಿದ್ದವು. ತಮಿಳುನಾಡಿನಿಂದ ಲಾರಿಗಟ್ಟಲೆ ಬರುತ್ತಿದ್ದ ಗೆಂದಾಳಿ ಸೀಯಾಳಗಳು ಈ ಬಾರಿ ಕಾಣಸಿಗುತ್ತಿಲ್ಲ. ತಮಿಳುನಾಡಿನಲ್ಲಿ ವಿದೇಶ ಕಂಪನಿಗಳ ತಂಪು ಪಾನೀಯಗಳ ಮೇಲೆ ನಿಷೇಧ ಹೇರಿದ್ದರಿಂದ ಅಲ್ಲಿ ಎಳನೀರಿಗೆ ಬೇಡಿಕೆ ಹೆಚ್ಚಿರುವುದೂ ಒಂದು ಕಾರಣವಾಗಿದೆ. ಈ ಬಾರಿ ಸಾಕಷ್ಟು ಪ್ರಮಾಣದಲ್ಲಿ ಎಳನೀರು ಲಭ್ಯವಾಗದೆ ಒಂದೇ ವಾರದಲ್ಲಿ 5 ರೂ. ದರ ಏರಿಕೆಯಾಗಿದೆ.

ವ್ಯಾಪಾರಸ್ಥರಿಗೆ ಕಷ್ಟ
ಸೀಯಾಳದ ಅಭಾವದಿಂದಾಗಿ ಅವುಗಳನ್ನು ಮಾರುವ ಗೂಡಂಗಡಿ ಹಾಗೂ ಗಾಡಿ ವ್ಯಾಪಾರಿಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ಇದರಿಂದ ರಸ್ತೆ ಬದಿಗಳಲ್ಲಿ, ಬಸ್‌ ನಿಲ್ದಾಣಗಳ ಬಳಿ ಗಾಡಿಗಳಲ್ಲಿ ಸೀಯಾಳ ಮಾರಿ ಜೀವನ ಸಾಗಿಸುತ್ತಿ¨ ಹಲವಾರು ವ್ಯಾಪಾರಿಗಳಿಗೆ ದರ ಏರಿಕೆ ಹಾಗೂ ಎಳನೀರು ಕೊರತೆ ಸಂಕಷ್ಟದ ಪರಿಸ್ಥಿತಿ ತಂದಿಟ್ಟಿದೆ.

ಮಾರುಕಟ್ಟೆಯಲ್ಲಿ ಇಳಿಕೆ
ಮಂಗಳೂರು ಸೀಯಾಳಕ್ಕೆ ಅತಿಹೆಚ್ಚು ಬೇಡಿಕೆ ಇರುವ ನಗರ. ಇಲ್ಲಿಗೆ ಕೆ.ಆರ್‌. ಪೇಟೆಯಿಂದ 30 ಲಾರಿ ಎಳನೀರು ಬರುತ್ತಿದ್ದವು. ಈಗ ಒಂದೆರಡು ಲಾರಿಗಳಷ್ಟು ಮಾತ್ರ ಬರುತ್ತಿವೆ. ಬಿಡಿ ಬಿಡಿಯಾಗಿ ಸೀಯಾಳಗಳು ಬರುತ್ತಿಲ್ಲ. ಗೊಂಚಲುಗಳು ಮಾತ್ರ ಕಾಣಸಿಗುತ್ತವೆ.
ಪದ್ಮನಾಭ, ಸೀಯಾಳ ವ್ಯಾಪಾರಿ 

ಸುಬ್ರಾಯ ನಾಯಕ್‌, ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next