Advertisement

ತಿದ್ದುಪಡಿ ಗೆಜೆಟ್‌ ಪ್ರತಿ ಸುಟ್ಟು ಆಕ್ರೋಶ

07:47 AM Jul 22, 2020 | Suhan S |

ಮೈಸೂರು: ಪ್ರತಿವರ್ಷ ಜು.21ರಂದು ರೈತ ಹುತಾತ್ಮ ದಿನಾಚರಣೆಗೆ ಬದಲಾಗಿ ಈ ಬಾರಿ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ವಿರೋಧಿಸಿ ಸಾಮೂಹಿಕ ನಾಯಕತ್ವದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ತಿದ್ದುಪಡಿ ಕಾಯ್ದೆ ಗೆಜೆಟ್‌ ಪ್ರತಿ ಸುಟ್ಟು ಪ್ರತಿಭಟನೆ ನಡೆಸಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ರೈತಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ ಟಿ.ರಾಮೇಗೌಡ, ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಯಾವುದೇ ಚರ್ಚೆಗಳಿಲ್ಲದೆ ಸಾಧಕ ಬಾಧಕಗಳನ್ನು ಅವಲೋಕಿಸದೆ ತಮ್ಮ ಸ್ವಾರ್ಥಕ್ಕೆ ತಮ್ಮ ಇಚ್ಛಾನುಸಾರ ತಮಗೆ ಚುನಾವಣೆಗಳಲ್ಲಿ ಹಣ ಸಹಾಯ ಮಾಡಿದ ಮತ್ತು ಸರ್ಕಾರ ರಚಿಸಲು ಅಡ್ಡದಾರಿ ಮೂಲಕ ಬೇಕಾದಷ್ಟು ಹಣ ತೊಡಗಿಸಿದ ಬಂಡವಾಳಶಾಹಿಗಳಿಗೆ ಋಣ ತೀರಿಸಲು ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಾಡಿದ್ದಾರೆಂದು ಆರೋಪಿಸಿದರು.

ಮುಖ್ಯಮಂತ್ರಿಗಳು ಏಕಾಏಕಿ ಸುಗ್ರೀವಾಜ್ಞೆ ಮೂಲಕ ಕಾಯ್ದೆಗೆ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಒಂದು ದಿನದ ಧರಣಿ ನಡೆಸಿದ್ದೇವೆ. ಮನವಿ ಪತ್ರವನ್ನು ಡೀಸಿ ಮೂಲಕ ಸಿಎಂಗೆ ರವಾನಿಸುತ್ತಿದ್ದೇವೆ. ನಮ್ಮ ಹೋರಾಟಕ್ಕೆ ಸೂಕ್ತ ಪ್ರತಿಕ್ರಿಯೆ ಬರದಿದ್ದರೆ ಆ.15ರಂದು ಎಲ್ಲಾ ಜಿಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕರಾಳ ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ಮೂಲಕ ಅನಿರ್ದಿಷ್ಟಾವಧಿ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದರು.

ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ರಘು ಹಿಮ್ಮಾವು, ಮಂಜುಕಿರಣ್‌, ಕಳ್ಳಿಪುರ ಮಹದೇವಸ್ವಾಮಿ ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next