Advertisement

ಬೊಮ್ಮನಹಳ್ಳಿಯಲ್ಲಿ ಸಮಸ್ಯೆಗಳ ಭಾರ

02:49 PM Apr 19, 2022 | Team Udayavani |

ದೇವದುರ್ಗ: ಸಮೀಪದ ಎಸ್‌. ಸಿದ್ದಪೂರು ಗ್ರಾಪಂ ವ್ಯಾಪ್ತಿಯ ಬೊಮ್ಮನಹಳ್ಳಿ ಗ್ರಾಮದಲ್ಲಿ ಹಲವಾರು ಸಮಸ್ಯೆಗಳಿದ್ದು, ಇಲ್ಲಿಯ ಜನರು ಸಮಸ್ಯೆಗಳ ಮಧ್ಯೆಯೇ ಬದುಕು ಸಾಗಿಸುತ್ತಿದ್ದಾರೆ.

Advertisement

ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇದ್ದು, ಹಣ ಕೊಟ್ಟು ನೀರು ತರಲು ಜನರು ಬರುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದರೆ, ಶುದ್ಧ ಕುಡಿವ ನೀರಿನ ಘಟಕ ಕಳೆದ ಆರೇಳು ತಿಂಗಳಿಂದ ಕೆಟ್ಟು ಹೋಗಿದ್ದು, ದುರಸ್ತಿ ಮಾಡಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಶುದ್ಧ ನೀರಿನ ಪೂರೈಸಬೇಕಾದ ಗ್ರಾಪಂ ಆಡಳಿತ ಮಂಡಳಿ ನಿರ್ಲಕ್ಷé ವಹಿಸಿದ ಪರಿಣಾಮ ಕುಡಿಯುವ ನೀರಿನ ಘಟಕ ನಿರುಪಯುಕ್ತವಾಗಿದೆ. ಎರಡು ವಾರ್ಡ್‌ನಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮನೆಗಳ ಗಲೀಜು ನೀರು ರಸ್ತೆ ಮೇಲೆಯೇ ಹರಿಯುತ್ತಿದ್ದು, ಅವ್ಯವಸ್ಥೆಯ ಆಗರವಾಗಿದೆ.

ಕೈಪಂಪ್‌ ಸುತ್ತಲೂ ಎಲ್ಲೆಂದರಲ್ಲಿ ನೀರು ನಿಂತು ಬೋರ್‌ವೆಲ್‌ ಹತ್ತಿರಕ್ಕೆ ಜನರು ಹೋಗಲಾರದಷ್ಟು ವಾತಾವರಣ ನಿರ್ಮಾಣವಾಗಿದೆ. ಇಂತಹದುರಲ್ಲಿಯೇ ಜನರು ನೀರು ತುಂಬಬೇಕಿದೆ. ವಾರ್ಡ್‌ ನ ಸದಸ್ಯರು ಕಣ್ಣಿಗೆ ಕಂಡರೂ ಕಾಣದಂತಿದ್ದಾರೆ. ಎಲ್ಲೆಂದರಲ್ಲಿ ಗಲೀಜು ನೀರು ನಿಂತ ಪರಿಣಾಮ ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳು ಜನರ ಜೀವ ಹಿಂಡುತ್ತಿವೆ. ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ.

ಸಾಂಕ್ರಾಮಿಕ ರೋಗ ಭೀತಿ ಜನರನ್ನು ಕಾಡಲಾರಂಭಿಸಿದೆ. ಗ್ರಾಪಂ ಮೂಲಕ ಸೊಳ್ಳೆ ನಿಯಂತ್ರಿಸಲು ಫಾಗಿಂಗ್‌ ವ್ಯವಸ್ಥೆ ಇಲ್ಲದಂತಾಗಿದೆ. ಬೊಮ್ಮನಹಳ್ಳಿ ಗ್ರಾಮದಲ್ಲಿ ಎರಡು ಸಾವಿರಕ್ಕೂ ಅಧಿಕ ಜನಸಂಖ್ಯೆ ಇದ್ದು, ಜನಸಂಖ್ಯೆ ತಕ್ಕಂತೆ ಸೌಲಭ್ಯ ಇಲ್ಲದಾಗಿದೆ.

Advertisement

ಕುಡಿವ ನೀರು, ಉತ್ತಮ ರಸ್ತೆ, ಬೀದಿದೀಪ, ಶೌಚಾಲಯ ಸೇರಿದಂತೆ ಅಗತ್ಯ ಸೌಲಭ್ಯಗಳ ಕೊರತೆ ಇದೆ. ಗ್ರಾಮದಲ್ಲಿ ಒಂದರಿಂದ ಏಳನೇ ತರಗತಿ ಸರಕಾರಿ ಶಾಲೆ ಇದೆ. 310 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಈ ಮಕ್ಕಳಿಗೆ ಪಾಠ ಮಾಡಲು 10ಜನ ಶಿಕ್ಷಕರು ಬೇಕು ಆದರೆ 4ಜನ ಶಿಕ್ಷಕರಿದ್ದಾರೆ. ಶಾಲೆಯಲ್ಲಿ ಕುಡಿವ ನೀರು, ಕಾಂಪೌಡ್‌ ಸೇರಿದಂತೆ ಅಗತ್ಯ ಸೌಲಭ್ಯಗಳ ಕೊರತೆ ಇವೆ. ಗ್ರಾಮದಲ್ಲಿ ಐದು ಜನ ಸದಸ್ಯರು ಆಯ್ಕೆಗೊಂಡಿದ್ದು, ಇದರಲ್ಲಿ ಒಬ್ಬರು ಗ್ರಾಪಂ ಅಧ್ಯಕ್ಷರಿದ್ದು, ಸ್ವಂತ ಗ್ರಾಮದಲ್ಲಿರುವ ಸಮಸ್ಯೆಗಳ ಬಗ್ಗೆಯೇ ಗಮನ ಹರಿಸುತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ವಾರ್ಡ್‌ನಲ್ಲಿ ರಸ್ತೆ ಮೇಲೆ ನಿಂತಿರುವ ನೀರು, ಸ್ವಚ್ಛತೆಗೆ ಕ್ರಮ ವಹಿಸಲಾಗುತ್ತದೆ. ಶುದ್ಧ ಕುಡಿವ ನೀರಿನ ಘಟಕದಿಂದ ಹಣ ಕೊಟ್ಟು ನೀರು ತರಲು ಜನರು ಬರುತ್ತಿಲ್ಲ. ಸೊಳ್ಳೆ ಫಾಗಿಂಗ್‌ ವ್ಯವಸ್ಥೆ ಕಲ್ಪಿಸಲಾಗುತ್ತದೆ. -ಶಂಕರ ಹಟ್ಟಿ, ಗ್ರಾಪಂ ಅಭಿವೃದ್ಧಿ ಅಧಿಕಾರಿ

ವಾರ್ಡ್‌ನಲ್ಲಿ ಚರಂಡಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಸ್ವಲ್ಪ ಜಾಗದ ಸಮಸ್ಯೆ ತಕರಾರು ಹಿನ್ನೆಲೆಯಲ್ಲಿ ವಿಳಂಬವಾಗಿದೆ. ಸ್ವಚ್ಛತೆ ಕುರಿತು ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ವಹಿಸಲಾಗುತ್ತದೆ. -ಪದ್ಮ ಶಿವಪ್ಪ, ಗ್ರಾಪಂ ಅಧ್ಯಕ್ಷ

-ನಾಗರಾಜ ತೇಲ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next