ಸದ್ಯ ಕನ್ನಡ ಚಿತ್ರರಂಗದಲ್ಲಿ ಓಟಿಟಿ ಸದ್ದು ಮಾಡುತ್ತಿದೆ. ನಿಧಾನವಾಗಿ ಪರ ವಿರೋಧಗಳು ಆರಂಭವಾಗಿವೆ. ಓಟಿಟಿ ವಿಷಯದಲ್ಲಿ ರಾಬರ್ಟ್ ಹೆಸರು ಕೂಡಾ ಕೇಳಿಬಂದಿತ್ತು. ದರ್ಶನ್ ನಾಯಕರಾಗಿರುವ ರಾಬರ್ಟ್ ಚಿತ್ರಕ್ಕೆ ಓಟಿಟಿ ಪ್ಲಾಟ್ ಫಾರ್ಮ್ವೊಂದು ದೊಡ್ಡಮೊತ್ತದ ಬೆಲೆಯನ್ನು ಆಫರ್ ಮಾಡಿತ್ತೆಂದು. ಮೂಲಗಳ ಪ್ರಕಾರ, 70 ಕೋಟಿ ರೂಪಾಯಿಯ ಆಫರ್ ನೀಡಿತ್ತು ಎನ್ನಲಾಗಿದೆ. ಆದರೆ, ಚಿತ್ರದ ನಿರ್ಮಾಪಕರು ಓಟಿಟಿ ಆಫರ್ ಅನ್ನು ತಿರಸ್ಕರಿಸಿ,ಸಿನಿಮಾವನ್ನು ಚಿತ್ರಮಂದಿರದಲ್ಲೇ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.
ದರ್ಶನ್ ಅಭಿಮಾನಿಗಳಿಗೆ ಖುಷಿ ನೀಡಿದೆ. ಏಕೆಂದರೆ ದರ್ಶನ್ ಸಿನಿಮಾ ಬಿಡುಗಡೆ ಎಂದರೆ ಅದು ಹಬ್ಬದಂತಿರುತ್ತದೆ. ಅಭಿಮಾನಿಗಳು ಅದನ್ನು ಸಂಭ್ರಮಿಸುತ್ತಾರೆ. ಒಂದು ವೇಳೆ ಓಟಿಟಿಯಲ್ಲಿ ಚಿತ್ರ ಬಿಡುಗಡೆಯಾದರೆ ಆ ಸಂಭ್ರಮ ಮಿಸ್ ಆಗುತ್ತದೆ. ಇನ್ನು ಚಿತ್ರಮಂದಿರಗಳು ಕೂಡಾ ಖುಷಿಯಾಗಿವೆಯಂತೆ. ಸ್ಟಾರ್‌ಗಳ ಚಿತ್ರ ರಿಲೀಸ್ ಆದಾಗ ಚಿತ್ರಮಂದಿರಕ್ಕೆ ಜನ ದೊಡ್ಡ ಮಟ್ಟದಲ್ಲಿ ಬರುತ್ತಾರೆ ಮತ್ತು ಕಲೆಕ್ಷನ್ ಕೂಡಾ ಜೋರಾಗಿರುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ರಾಬರ್ಟ್ ನಿರ್ಮಾಪಕರ ನಿರ್ಧಾರವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ.
ಇನ್ನು, ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ರಾಬರ್ಟ್ ಚಿತ್ರ ಇಷ್ಟೊತ್ತಿಗೆ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾದಿಂದಾಗಿ ಚಿತ್ರ ಬಿಡುಗಡೆ ಮುಂದಕ್ಕೆ ಹೋಗಿದೆ. ಹಾಗಾದರೆ ಸಿನಿಮಾ ಬಿಡುಗಡೆ ಯಾವಾಗ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಅನೇಕರು ಚಿತ್ರ ಆಗಸ್ಟ್ 15ರಂದು ತೆರೆಕಾಣುತ್ತದೆ ಎನ್ನುತ್ತಿದ್ದಾರೆ. ಈ ಬಗ್ಗೆ ನಿರ್ದೇಶಕ ತರುಣ್ ಸುಧೀರ್ ಏನು ಹೇಳುತ್ತಾರೆ ಎಂದು ನೀವು ಕೇಳಬಹುದು. ಆದರೆ ತರುಣ್ ಮಾತ್ರ ಈ ಬಗ್ಗೆ ಈಗಲೇ ಹೇಳಲು ತಯಾರಿಲ್ಲ.
ಸದ್ಯಕ್ಕೆ ಲಾಕ್‌ಡೌನ್ ಯಾವಾಗ ಕ್ಲಿಯರ್ ಆಗುತ್ತದೆ ಎಂಬುದು ಸ್ಪಷ್ಟವಿಲ್ಲ. ಹಾಗಾಗಿ ಈಗಲೇ ನಾವು ಚಿತ್ರ ಬಿಡುಗಡೆಯ ದಿನಾಂಕ ಹೇಳ್ಳೋದು ಸರಿಯಲ್ಲ. ಆದರೆ, ನಾವಂತೂ ರೆಡಿ. ಸಿನಿಮಾ ಬಿಡುಗಡೆಗೆ ಅನುಮತಿ ಸಿಕ್ಕ ಮೂರು ವಾರಗಳ ನಂತರ ನಾವು ಬರುತ್ತೇವೆ. ಆ ಮೂರು ವಾರ ಪಬ್ಲಿಸಿಟಿ ಮಾಡುತ್ತೇವೆ ಎನ್ನುವುದು ತರುಣ್ ಮಾತು. ರಾಬರ್ಟ್ ಚಿತ್ರದ ಮೇಲೆ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿದೆ. “ರಾಬರ್ಟ್’ ಮೇಲೆ ಅಭಿಮಾನಿಗಳು ಎಷ್ಟರ ಮಟ್ಟಿಗೆ ಪ್ರೀತಿ ತೋರಿಸುತ್ತಾರೋ ಅದಕ್ಕಿಂತ ಹೆಚ್ಚಿನ ನಿರೀಕ್ಷೆ ಇಡೀ ಚಿತ್ರರಂಗ ಇಟ್ಟಿದೆ.
ಈ ವರ್ಷದ ಬಿಗ್ ರಿಲೀಸ್ ಸಾಲಿನಲ್ಲಿ “ರಾಬರ್ಟ್’ ನಿಂತಿದೆ. ಸಾಮಾನ್ಯವಾಗಿ ದರ್ಶನ್ ಸಿನಿಮಾ ಬಿಡುಗಡೆಯಾಗುತ್ತದೆ ಎಂದರೆ ಅದು ಅವರ ಅಭಿಮಾನಿಗಳ ಪಾಲಿಗೆ ದೊಡ್ಡ ಹಬ್ಬವಾಗಿರುತ್ತದೆ. ಆದರೆ, “ರಾಬರ್ಟ್’ ಚಿತ್ರ ಅತಿ ದೊಡ್ಡ ಹಬ್ಬವಾಗುವ ಲಕ್ಷಣಗಳನ್ನು ತೋರುತ್ತಿದೆ. ಈಗಾಗಲೇ ಈ ಚಿತ್ರದ ಪ್ರೀರಿಲೀಸ್ ಬಿಝಿನೆಸ್ ವಿಚಾರಗಳು ಕೂಡಾ ದೊಡ್ಡ ಮೊತ್ತದಲ್ಲೇ ಕೇಳಿಬರುತ್ತಿದೆ. ಜೊತೆಗೆ ಸ್ಯಾಟ್‌ಲೆçಟ್, ಡಿಜಿಟಲ್ ರೈಟ್ಸ್ ಗಳು ಕೂಡಾ ದಾಖಲೆ ಬೆಲೆಗೆ ಮಾರಾಟವಾಗಿವೆ ಎಂಬ ಸುದ್ದಿಯೂ ಗಾಂಧಿನಗರದಲ್ಲಿ ಕೇಳಿಬರುತ್ತಿದ್ದು, ಸದ್ಯ “ರಾಬರ್ಟ್’ ಟಾಕ್ ಆಫ್ ದಿ ಟೌನ್ ಆಗಿರೋದಂತೂ ಸುಳ್ಳಲ್ಲ.