Advertisement

ಗುಂಡುಗಳ ಸಂಖ್ಯೆಗಿಂತ ಗುಂಡಿಗೆಗಳು ಹೆಚ್ಚಿವೆ

12:37 PM Sep 07, 2017 | |

ಧಾರವಾಡ: ಹಂತಕರೇ ನಿಮ್ಮ ಬಂದೂಕಿನ ಗುಂಡುಗಳ ಸಂಖ್ಯೆ ಹೆಚ್ಚುತ್ತಲಿವೆ. ಆದರೆ ಅದಕ್ಕೆ ಎದೆ ಕೊಟ್ಟು ನಿಲ್ಲುವ ನಮ್ಮ ಗುಂಡಿಗೆಗಳ ಸಂಖ್ಯೆ ಅದಕ್ಕಿಂತಲೂ ಹೆಚ್ಚಿವೆ. ಬನ್ನಿ ಎಷ್ಟು ಜನರನ್ನು ಕೊಲ್ಲುತ್ತೀರಿ ನೀವು.., ಮೊದಲು ನಮ್ಮನ್ನು ಗುಂಡು ಹಾಕಿ ನೋಡೋಣ. ಹೇಡಿಗಳೇ..ನಿಮ್ಮ ಈ ಕೃತ್ಯವನ್ನು ನಾವು ಖಂಡಿಸುತ್ತೇವೆ. 

Advertisement

ಎಐಡಿಎಸ್‌ಒ, ಎಐಎಂಎಸ್‌ಎಸ್‌, ಎಐಡಿವೈಒ, ಎಸ್‌ಎಫ್‌ಐ, ಡಿವೈಎಫ್‌ಐ ಸೇರಿದಂತೆ ವಿವಿಧ ಸಂಘಟನೆಗಳು ಮತ್ತು ಪ್ರಗತಿಪರ ಚಿಂತಕರು ಹಿರಿಯ ಪತ್ರಕರ್ತೆ ಗೌರಿ ಲಂಕೇಶ ಅವರ ಹತ್ಯೆ ಖಂಡಿಸಿ ಆಡಿದ ಮಾತುಗಳಿವು. ವಿವಿಧ ಪ್ರಗತಿಪರ ಸಂಘಟನೆಗಳು ಮತ್ತು ಧಾರವಾಡದ 15ಕ್ಕೂ ಹೆಚ್ಚು ಕಾಲೇಜುಗಳ ವಿದ್ಯಾರ್ಥಿಗಳು ಬುಧವಾರ ಬೆಳಗ್ಗೆ ಕಲ್ಯಾಣ ನಗರದಲ್ಲಿರುವ ಡಾ|ಎಂ.ಎಂ.ಕಲಬುರ್ಗಿ ಅವರ ನಿವಾಸ “ಸೌಜನ್ಯ’ದಿಂದ ಜುಬಿಲಿ ವೃತ್ತದವರೆಗೂ ಮೌನ ಪ್ರತಿಭಟನೆ ನಡೆಸಿದರು.

ನಂತರ ಒಂದು ಗಂಟೆಗೂ ಅಧಿಕ ಕಾಲ ಮಾನವ ಸರಪಳಿ ನಿರ್ಮಿಸಿ ಗೌರಿ ಲಂಕೇಶ ಹಂತಕರನ್ನು ಪತ್ತೆ ಹಚ್ಚುವಂತೆ ಸರ್ಕಾರಕ್ಕೆ ಆಗ್ರಹಿದರು. ಹಿರಿಯ ಭಾಷಾ ತಜ್ಞ ಡಾ|ಗಣೇಶ ದೇವಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ದಾಬೋಲ್ಕರ್‌, ಪನ್ಸಾರೆ, ಡಾ|ಎಂ.ಎಂ.ಕಲಬುರ್ಗಿ ಮತ್ತು ಗೌರಿ ಲಂಕೇಶ ಹತ್ಯೆಯಲ್ಲಿ ಸಾಮ್ಯತೆಗಳಿವೆ. 

ಈ ಸಾಮ್ಯತೆಯಲ್ಲಿ ಗುಂಡುಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿವೆ. ಇದು ಸಂಚು ರೂಪಿಸಿ ಮಾಡಿದ ಕೊಲೆಯಾಗಿದೆ. ಅಷ್ಟೇಯಲ್ಲ ಇದು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಪತ್ರಿಕೋದ್ಯಮದ ಕೊಲೆಯಾದಂತೆ. ಇದನ್ನು ಎಂದಿಗೂ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದರು. ನಮಗೆ ಬದುಕುವ ಹಕ್ಕಿದೆ. ಭಯ ಹುಟ್ಟಿಸುವುದರಿಂದ ಸಿದ್ಧಾಂತಗಳನ್ನು ಕೊಲ್ಲಲು ಸಾಧ್ಯವಿಲ್ಲ. 

ಇಂತಹ ಕೆಲಸವನ್ನು ಮಾಡುವವರನ್ನು ಹೇಡಿಗಳು ಎನ್ನುತ್ತಾರೆ ಹೊರತು ಬೇರೇನೂ ಅನ್ನಲು ಸಾಧ್ಯವಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಡಾ| ಕಲಬುರ್ಗಿ ಮತ್ತು ಗೌರಿ ಹತ್ಯೆಗೆ ಕಾರಣರಾದವರನ್ನು ನವೆಂಬರ್‌ 18ರೊಳಗೆ ಸರ್ಕಾರ ಬಂಧಿಸದೇ ಹೋದಲ್ಲಿ ಜ್ಯುಬಿಲಿ ವೃತ್ತದಲ್ಲಿ ನೂರಾರು ಸಾಹಿತಿಗಳೊಂದಿಗೆ ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಹೇಳಿದರು. 

Advertisement

ಇದೇ ವೇಳೆ ಮಾತನಾಡಿದ ಸಾಹಿತಿ ಡಾ|ವಿನಯಾ ವಕ್ಕುಂದ, ಚಿಂತಕರನ್ನು ಕೊಲೆ ಮಾಡುವ ಹಂತಕ್ಕೆ ಒಂದು ಸಾಮಾಜಿಕ ವ್ಯವಸ್ಥೆ ಇಳಿದಿದೆ ಎಂದರೆ, ಇದರಲ್ಲಿ ಕೇವಲ ಸರ್ಕಾರ ಮತ್ತು ಪೊಲೀಸರನ್ನು ದೂಷಿಸಿದರೆ ತಪ್ಪಾಗುತ್ತದೆ. ಇಂತಹ ಸ್ಥಿತಿಗೆ ಬಾಯಿ ಮುಚ್ಚಿಕೊಂಡು ಕುಳಿತ ಮಧ್ಯಮ ವರ್ಗದ ಜನರನ್ನೂ ದೂಷಿಸಬೇಕಾಗುತ್ತದೆ. ಅವರು ತೀಕ್ಷ್ಣವಾಗಿ ಸ್ಪಂದಿಸಿದರೆ ಇಂದು ಇಂತಹ ಸ್ಥಿತಿ ಬರುತ್ತಿರಲಿಲ್ಲ ಎಂದರು.  

ಹಂತಕರ ವಿರುದ್ಧ ಧಿಕ್ಕಾರ: ಜುಬಿಲಿ ವೃತ್ತದಲ್ಲಿ ಸೇರಿದ್ದ ನೂರಾರು ವಿದ್ಯಾರ್ಥಿಗಳು ಗೌರಿ ಲಂಕೇಶ ಮತ್ತು ಡಾ|ಎಂ. ಎಂ.ಕಲಬುರ್ಗಿ ಹಂತಕರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಡಾ|ಎಂ.ಡಿ.ವಕ್ಕುಂದ, ಬಿ.ಐ.ಈಳಿಗೇರ, ಎಚ್‌.ಸಿ.ದೇಸಾಯಿ, ಭುವನಾ, ಪ್ರಭಾವತಿ ಗೂಗಲ್‌, ಭವಾನಿ ಶಂಕರ, ರಮೇಶ ಹೊಸಮನಿ, ಅಕ್ಷಯ ತಳಕಲ್‌, ಕಿರಣ, ವಿ.ಆರ್‌.ಪಾಟೀಲ, ಡಾ| ಗೋಪಾಲ ದಾಬಡೆ, ಡಾ|ಮಾಲತಿ ಪಟ್ಟಣಶೆಟ್ಟಿ ಸೇರಿದಂತೆ ವಿವಿಧ ಕಾಲೇಜುಗಳು ವಿದ್ಯಾರ್ಥಿಗಳು, ಪ್ರಗತಿಪರ ಚಿಂತಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next