Advertisement

ಬಿರುಕು ಬಿಟ್ಟಿದೆ ಬಡಗನ್ನೂರು ಸರಕಾರಿ ಶಾಲೆಯ ಕಟ್ಟಡ

11:47 PM Aug 20, 2019 | mahesh |

ಬಡಗನ್ನೂರು: ಶತಮಾನದ ಅಂಚಿನಲ್ಲಿರುವ ಬಡಗನ್ನೂರು ದ.ಜಿ.ಪಂ.ಉ.ಹಿ.ಪ್ರಾ. ಶಾಲೆಯ ಹಳೆಯ ಕಟ್ಟಡದ ಒಳಗಿನ ಹಾಗೂ ಹೊರಗಿನ ನೆಲ ಬಿರುಕು ಬಿಟ್ಟು ಅಪಾಯಕಾರಿ ಸ್ಥಿತಿಯಲಿದೆ. ಹೊರಗಿನ ಭಾಗದ ನೆಲದಲ್ಲಿ ಬಿರುಕು ಬಿಟ್ಟು ಕಂಬಗಳು ಇಂದೋ ನಾಳೆಯೋ ಬೀಳುವ ಹಂತದಲ್ಲಿರುವುದು ಶಿಕ್ಷಕರಲ್ಲಿ ಅತಂಕ ಸೃಷ್ಟಿ ಮಾಡಿದೆ.

Advertisement

ಎರಡು ವರ್ಷಗಳ ಹಿಂದೆ ಇದೇ ಕಟ್ಟಡದ ಛಾವಣಿ ಪಕ್ಕಾಸು ಗೆದ್ದಲು ಹಿಡಿದ ಸಂದರ್ಭ ಸಂಬಂಧಪಟ್ಟ ಇಲಾಖೆ, ಶಾಸಕರಿಗೆ, ಜಿ.ಪಂ., ತಾ.ಪಂ. ಸದಸ್ಯರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಯಾರೊಬ್ಬ ಅಧಿಕಾರಿಯಾಗಲಿ, ಜನಪ್ರತಿನಿಧಿಗಳಾಗಲಿ ಇತ್ತ ಗಮನಹರಿಸಿಲ್ಲ. ಈ ವರ್ಷ ಸುರಿದ ಭೀಕರ ಮಳೆ ಪ್ರವಾಹದಿಂದ ಕಟ್ಟಡ ಒಳಭಾಗದಿಂದಲೇ ನೀರು ವಸರಿನ ರೂಪದಲ್ಲಿ ಬಂದ ಪರಿಣಾಮ ನೆಲದಲ್ಲಿ ಬಿರಕು ಉಂಟಾಗಿ ಬೀಳುವ ಹಂತದಲ್ಲಿದೆ.

ಕೊಠಡಿ ಹೊರಗೆ ಪಾಠ
ಕಟ್ಟಡ ಬೀಳುವ ಹಂತದಲ್ಲಿರುವ ಕಾರಣ ಮಕ್ಕಳನ್ನು ಇನ್ನೊಂದು ಕಟ್ಟಡದ ಜಗಲಿಯಲ್ಲಿ ನೆಲದ ಮೇಲೆ ಕುಳಿತುಕೊಳ್ಳಿಸಿ ಪಾಠ ಹೇಳಿ ಕೊಡುವ ಹಂತಕ್ಕೆ ತಲುಪಿದೆ. ಇಷ್ಟರವರೆಗೆ ಶಿಕ್ಷಕರ ಕೊರತೆ ಇತ್ತು. ಆದರೆ ಈ ವರ್ಷದಲ್ಲಿ ಎಲ್ಲ ಖಾಲಿ ಹುದ್ದೆಗೆ ಶಿಕ್ಷಕ ನೇಮಕಾತಿ ಅಗುವ ಮೂಲಕ ಶಿಕ್ಷಕ ಕೊರತೆ ನೀಗಿದೆ. ಆದರೆ ಅದಕ್ಕಿಂತ ದೊಡ್ಡ ಸಮಸ್ಯೆ ಎದುರಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣಗೊಂಡಿರುವ ಈ ಕಟ್ಟಡವನ್ನು ಕೆಡವದೆ ಬೇರೆ ಯಾವುದೇ ಉಪಾಯ ಇಲ್ಲ.

ಸಮಾರಂಭಗಳಿಗೆ ಯೋಗ್ಯ
ಶಾಲೆಯಲ್ಲಿ ನಡೆಯುವ ಎಲ್ಲ ಕಾರ್ಯಕ್ರಮ ಹಾಗೂ ಇತರ ಸಂಘಸಂಸ್ಥೆಗಳು ಈ ಶಾಲಾ ಕಟ್ಟಡವನ್ನು ಅವಲಂಬಿಸಿದ್ದರು. ಸುಮಾರು 150ರಿಂದ 200 ಜನರಿಗೆ ಯಾವುದೇ ಕಾರ್ಯಕ್ರಮಕ್ಕೆ ಅನುಕೂಲಕರವಾಗಿತ್ತು. ಈ ಕಟ್ಟಡ ಪುನರ್‌ ನಿರ್ಮಾಣ ಮಾಡುವುದಾದರೆ ಅಂದಾಜು 8ರಿಂದ 10 ಲಕ್ಷ ರೂ. ಬೇಕಾಗುತ್ತದೆ. ಇಲ್ಲಿ 1ರಿಂದ 8ನೇ ತರಗತಿಯ ವರೆಗೆ ಇದ್ದು, ಸುಮಾರು 95 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಪ್ರಸ್ತಾವನೆ ಕಳುಹಿಸಲಾಗಿದೆ

ತಾಲೂಕಿನ ಸರಕಾರಿ ಶಾಲೆಗಳಲ್ಲಿ ಬೀಳುವ ಹಂತಗಳಲ್ಲಿರುವ ಹಳೆಯ ಕಟ್ಟಡಗಳ ದುರಸ್ತಿಯ ಬಗ್ಗೆ ಡಿಡಿಪಿಐ ಮುಖಾಂತರ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಸರಕಾರ ಎಷ್ಟು ಅನುದಾನ ಬಿಡುಗಡೆ ಮಾಡುತ್ತದೆ ಎಂದು ನೋಡಿಕೊಂಡು ಅಭಿವೃದ್ಧಿ ಪಡಿಸಲಾಗುವುದು. ನನ್ನ ಕ್ಷೇತ್ರಾಭಿವೃದ್ದಿ ನಿಧಿಯಲ್ಲಿ ಈ ಸಲ ಶಾಲಾ ದುರಸ್ತಿಗೆ 1 ಲಕ್ಷ ರೂ. ಇಡಲಾಗಿದೆ. ಈ ಬಗ್ಗೆ ಶೀಘ್ರದಲ್ಲೇ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ ಸರಕಾರಕ್ಕೆ ವರದಿ ಕಳಿಸಲಾಗುವುದು. – ಅನಿತಾ ಹೇಮನಾಥ ಶೆಟ್ಟಿ ಜಿ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷರು
ದಿನೇಶ್‌ ಪೇರಾಲು
Advertisement
Advertisement

Udayavani is now on Telegram. Click here to join our channel and stay updated with the latest news.

Next