Advertisement

ಕಟ್ಟಡ ನೀಡಿದರೂ ತೋಟಗಾರಿಕೆ ಅಧಿಕಾರಿಗಳು ಬಳಸುತ್ತಿಲ್ಲ

12:09 AM Sep 20, 2019 | Sriram |

ಕಡಬ: ಕಡಬ ಗ್ರಾ.ಪಂ.ನ ತ್ತೈಮಾಸಿಕ ಕೆಡಿಪಿ ಸಭೆ ಗ್ರಾ.ಪಂ. ಅಧ್ಯಕ್ಷ ಬಾಬು ಮುಗೇರ ಅಧ್ಯಕ್ಷತೆಯಲ್ಲಿ ಕಡಬ ಅಂಬೇಡ್ಕರ್‌ ಭವನದಲ್ಲಿ ಜರಗಿತು.

Advertisement

ನೂತನ ತಾಲೂಕು ಕೇಂದ್ರವಾಗಿರುವ ಕಡಬದಲ್ಲಿ ತೋಟಗಾರಿಕಾ ಇಲಾಖೆ ಕಚೇರಿ ತೆರೆದಿಲ್ಲ. ಯಾವಾಗಾದರೊಮ್ಮೆ ರೈತ ಸಂಪರ್ಕ ಕೇಂದ್ರಕ್ಕೆ ಬರುತ್ತಾರೆ. ಅದೂ ಜನರಿಗೆ ಮಾಹಿತಿ ಇರುವುದಿಲ್ಲ. ತೋಟಗಾರಿಕಾ ಇಲಾಖೆಯಲ್ಲಿ ವಿವಿಧ ವಿಚಾರಗಳ ಬಗ್ಗೆ ವ್ಯವಹರಿಸಬೇಕಾದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತವಾಯಿತು.

ಅದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್‌, ತೋಟಗಾರಿಕಾ ಇಲಾಖೆಯವರು ವಾರಕ್ಕೆ ಮೂರು ದಿನ ಕಡಬದಲ್ಲಿ ಕರ್ತವ್ಯ ನಿರ್ವಹಿಸಬೇಕೆಂದು ನಿಗದಿಯಾಗಿದೆ. ಮೆಸ್ಕಾಂ ಸಬ್‌ಸ್ಟೇಶನ್‌ ಬಳಿ ಇರುವ ಹಳೆಯ ಜೇನು ಕೃಷಿ ಕಟ್ಟಡವನ್ನು ತೋಟಗಾರಿಕಾ ಇಲಾಖೆಯವರಿಗಾಗಿ ಪೀಠೊಪಕರಣ ಸಹಿತ 4 ಲಕ್ಷ ರೂ. ವೆಚ್ಚದಲ್ಲಿ ನವೀಕರಿಸಿ ನೀಡಲಾಗಿದೆ. ಆದರೆ ಅವರು ಅಲ್ಲಿ ಕಚೇರಿ ತೆರೆದಿಲ್ಲ. ಈ ಕುರಿತು ಸಂಬಂಧಪಟ್ಟವರೊಡನೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

ಅನುದಾನಕ್ಕೆ ಪ್ರಯತ್ನ
ಮೂರಾಜೆ ಕೊಪ್ಪ ಶಾಲೆಯ ಕಟ್ಟಡ ಶಿಥಿಲಗೊಂಡು ಮಕ್ಕಳನ್ನು ಬೇರೆ ತಾತ್ಕಾಲಿಕ ಕಟ್ಟಡಕ್ಕೆ ಸ್ಥಳಾಂತರಿಸಿ ವರ್ಷ ಕಳೆದರೂ ನೂತನ ಕಟ್ಟಡ ನಿರ್ಮಾಣಕ್ಕೆ ಸರಕಾರದಿಂದ ಅನುದಾನ ನೀಡಿಲ್ಲ ಎನ್ನುವ ವಿಚಾರ ಪ್ರಸ್ತಾವವಾಯಿತು. ಶಿಕ್ಷಣ ಇಲಾಖೆ ಆ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದೆ ಎಂದು ತಾ.ಪಂ. ಸದಸ್ಯ ಫಝಲ್‌ ಕೋಡಿಂಬಾಳ ದೂರಿದರು. ಅದಕ್ಕೆ ಪ್ರತಿಕ್ರಿಯಿಸಿದ ಪಿ.ಪಿ. ವರ್ಗೀಸ್‌, ಅನುದಾನ ಬಾರದಿರುವುದಕ್ಕೆ ನಾವು ಇಲಾಖೆಯವರನ್ನು ದೂರಿ ಪ್ರಯೋಜನವಿಲ್ಲ. ಅವರ ವ್ಯಾಪ್ತಿಯಲ್ಲಿ ಪ್ರಯತ್ನಿಸಿದ್ದಾರೆ. ಜನ ಪ್ರತಿನಿಧಿಗಳಾದ ನಾವು ಅನುದಾನದ ವ್ಯವಸ್ಥೆ ಮಾಡಬೇಕು. ಕಳೆದ ವರ್ಷ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕರು ನೂತನ ಕಟ್ಟಡ ನಿರ್ಮಾಣಕ್ಕೆ 10 ಲಕ್ಷ ರೂ. ಅನುದಾನ ನೀಡುವುದಾಗಿ ಪ್ರಕಟಿಸಿದ್ದರು ಎನ್ನುವ ಮಾಹಿತಿ ಇದೆ. ಸಂಬಂಧಪಟ್ಟವರಲ್ಲಿ ವ್ಯವಹರಿಸಿ ಅನು ದಾನಕ್ಕೆ ಪ್ರಯತ್ನಿಸಲಾಗುವುದು ಎಂದರು.

ದೌರ್ಜನ್ಯಕ್ಕೆ ಒಳಗಾದ ಬಾಲಕಿಗೆ ರಕ್ಷಣೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಹೇಮಾ ರಾಮದಾಸ್‌ ಮಾಹಿತಿ ನೀಡಿ, ಪಿಜಕಳ ಹಾಗೂ ಕಳಾರ ಅಂಗನವಾಡಿಗೆ ನೂತನ ಕಟ್ಟಡಕ್ಕಾಗಿ ಬೇಡಿಕೆ ಸಲ್ಲಿಸಲಾಗಿದೆ. ಪಿಜಕಳ ಅಂಗನವಾಡಿಯ ಕಟ್ಟಡ ಶಿಥಿಲಗೊಂಡಿರುವ ಕಾರಣ ಮಕ್ಕಳನ್ನು ಹತ್ತಿರದ ಶಾಲಾ ಕಟ್ಟಡಕ್ಕೆ ಸ್ಥಳಾಂತರಿಸಿ ಅಂಗನವಾಡಿ ನಡೆಸಲಾಗುತ್ತಿದೆ ಎಂದರು. ಎರಡೂ ಅಂಗನವಾಡಿಗಳಿಗೆ ಶೀಘ್ರ ನೂತನ ಕಟ್ಟಡ ನಿರ್ಮಿಸಲು ಅನುದಾನ ಒದಗಿಸುವಂತೆ ಅವರು ಜನಪ್ರತಿನಿಧಿಗಳಿಗೆ ಮನವಿ ಮಾಡಿದರು.

Advertisement

ಅಡ್ಡಗದ್ದೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ 7ನೇ ತರಗತಿಯ ವಿದ್ಯಾರ್ಥಿನಿಗೆ ಆಕೆಯ ಮಲತಾಯಿ ದೈಹಿಕ ಹಲ್ಲೆ ಮಾಡಿ ಹಿಂಸಿಸುತ್ತಿದ್ದ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಲಾಗಿತ್ತು. ಅವರು ಕಡಬ ಪೊಲೀಸರ ನೆರವಿನೊಂದಿಗೆ ಬಾಲಕಿಯನ್ನು ರಕ್ಷಣೆ ಮಾಡಿ ಮಂಗಳೂರಿನ ಸಮಾಜ ಸೇವಾ ಸಂಸ್ಥೆಯೊಂದರಲ್ಲಿ ವಸತಿ ಕಲ್ಪಿಸಿ ಅಲ್ಲಿಯೇ ಶಾಲೆಗೆ ಸೇರಿಸಿದ್ದಾರೆ ಎಂದು ಹೇಮಾ ರಾಮದಾಸ್‌ ಮಾಹಿತಿ ನೀಡಿದರು.

ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ಚಾಕೋ ಕೆ.ಎಂ. ಮಾತನಾಡಿ, ಸಂಘದ ಪಡಿತರ ವಿತರಣೆ ವ್ಯವಸ್ಥೆಗೆ ಇಂಟರ್ನೆಟ್‌ ಸಮಸ್ಯೆಯಿಂದಾಗಿ ತೊಂದರೆ ಎದುರಿಸುತ್ತಿದ್ದೇವೆ. ಗ್ರಾಮ ಪಂಚಾಯತ್‌ಗೆ ನೀಡಿರುವ ರೀತಿ ನಮಗೂ ಒಎಫ್‌ಸಿ ಇಂಟರ್ನೆಟ್‌ ಸಂಪರ್ಕ ಕಲ್ಪಿಸುವಂತೆ ಮನವಿ ಮಾಡಿದರು.

ಮೆಸ್ಕಾಂ ಎಂಜಿನಿಯರ್‌ ಸತ್ಯನಾರಾಯಣ ಅವರು ಮಾಹಿತಿ ನೀಡುತ್ತಿದ್ದ ವೇಳೆ ಮಾತನಾಡಿದ ಜಿ.ಪಂ .ಸದಸ್ಯ ಪಿ.ಪಿ. ವರ್ಗೀಸ್‌, ಕಡಬ ಪೇಟೆಯಲ್ಲಿ ನಿರ್ಮಾಣ ಹಂತದಲ್ಲಿರುವ ಸೊಸೈಟಿ ವಾಣಿಜ್ಯ ಸಂಕೀರ್ಣದ ಸಮೀಪ ಮಣ್ಣಿನ ದಿಬ್ಬ ವನ್ನು ತೆರವುಗೊಳಿಸಲು ವಿದ್ಯುತ್‌ ಲೈನ್‌ ತೊಡಕಾ ಗಿದೆ. ಅದನ್ನು ತೆರವುಗೊಳಿಸುವ ವಿಚಾರ ಯಾವ ಹಂತದಲ್ಲಿದೆ ಎಂದು ಪ್ರಶ್ನಿಸಿದರು. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಶೀಘ್ರ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಎಂಜಿನಿಯರ್‌ ಭರವಸೆ ನೀಡಿದರು.

ಪಶು ವೈದ್ಯಾಧಿಕಾರಿ ಡಾ| ಅಜಿತ್‌, ಜಿ.ಪಂ. ಎಂಜಿನಿಯರ್‌ ಭರತ್‌, ಕೃಷಿ ಅಧಿಕಾರಿ ತಿಮ್ಮಪ್ಪ ಗೌಡ, ಕಡಬ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಕುಂಞಣ್ಣ ಕುದ್ರಡ್ಕ, ಆರೋಗ್ಯ ಇಲಾಖೆ ಸಿಬಂದಿ ಅನ್ನಮ್ಮ, ಎಲಿಯಮ್ಮ, ಗ್ರಾಮ ಕರಣಿಕ ಪುಷ್ಪರಾಜ್‌, ಗ್ರಂಥಪಾಲಕಿ ಸಮೀಮಾ ಹಾಜರಿದ್ದರು. ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್‌, ತಾ.ಪಂ. ಸದಸ್ಯ ಫಝಲ್‌ ಕೋಡಿಂಬಾಳ, ಗ್ರಾ.ಪಂ. ಸದಸ್ಯರಾದ ಆದಂ ಕುಂಡೋಳಿ, ಅಶ್ರಫ್‌ ಶೇಡಿಗುಂಡಿ, ನೀಲಾವತಿ ಶಿವರಾಂ, ಕೆ.ಎಂ. ಹನೀಫ್‌, ಶರೀಫ್‌ ಎ.ಎಸ್‌., ಜಯಂತಿ ಗಣಪಯ್ಯ, ರೇವತಿ, ಶಾಲಿನಿ, ಸುಶೀಲಾ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ಗೌಡ ಕಜೆಮೂಲೆ ಸ್ವಾಗತಿಸಿದರು. ಕಾರ್ಯದರ್ಶಿ ಸಂತೋಷ್‌ ವಂದಿಸಿದರು.

ಹೊಳೆಗೆ ಹಾರುವುದಾಗಿ ಬೆದರಿಸುವ ಮಕ್ಕಳು!
ಶಿಕ್ಷಣ ಇಲಾಖೆಯ ಕುರಿತು ಮಾಹಿತಿ ನೀಡಿದ ಕಡಬ ಸಿಆರ್‌ಪಿ ಕುಮಾರ್‌ ಕೆ.ಜೆ. ಅವರು ಕಡಬ ಗ್ರಾ.ಪಂ. ವ್ಯಾಪ್ತಿಯಲ್ಲಿ ಒಟ್ಟು 8 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಅವರನ್ನು ಶಾಲೆಗೆ ಕರೆತರಲು ಶಿಕ್ಷಕರು ಜನಪ್ರತಿನಿಧಿಗಳ ನೆರವಿನೊಂದಿಗೆ ಹಲವು ಬಾರಿ ಪ್ರಯತ್ನ ನಡೆಸಿದರೂ ಫಲ ದೊರೆತಿಲ್ಲ ಎಂದರು. ಈ ಕುರಿತು ಹೆಚ್ಚಿನ ಪ್ರಯತ್ನ ನಡೆಸುವಂತೆ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಪ್ರತಿಕ್ರಿಯಿಸಿದ ಸಿಆರ್‌ಪಿ, ಬಹಳ ನಾಜೂಕಿನಿಂದ ಮಕ್ಕಳ ಮನವೊಲಿಸುವ ಕೆಲಸ ಮಾಡಬೇಕಾಗಿದೆ. ಹೆಚ್ಚಿನ ಒತ್ತಡ ಹೇರಿದರೆ ಮಕ್ಕಳು ಅಪಾಯ ತಂದುಕೊಳ್ಳುವ ಭೀತಿ ಇದೆ. ಕೆಲವು ಮಕ್ಕಳು ಶಾಲೆಗೆ ಹೋಗುವಂತೆ ಒತ್ತಾಯಿಸಿದರೆ ಹೊಳೆಗೆ ಹಾರುವುದಾಗಿ ಹೆತ್ತವರನ್ನು ಹೆದರಿಸಿದ್ದಾರೆ. ಏನಾದರೂ ಅನಾಹುತಗಳು ನಡೆದರೆ ಅದಕ್ಕೂ ನಾವೇ ತಲೆ ಕೊಡಬೇಕಾಗುತ್ತದೆ ಎಂದು ಅಳಲು ತೋಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next