Advertisement

ಕಟ್ಟುವವರ ಬದುಕು ಕೆಡವಿ ಹೋದರೂ ಕೇಳುವವರಿಲ್ಲ!

08:55 AM Aug 08, 2017 | Harsha Rao |

ಹೊಸದಿಲ್ಲಿ: ಕೃಷಿಯ ಬಳಿಕ ದೇಶದ ಆರ್ಥಿಕ ಚಟುವಟಿಕೆಗೆ ಅತಿ ಹೆಚ್ಚು ಕೊಡುಗೆ ನೀಡುತ್ತಿರುವುದು ಮತ್ತು ಅತಿ ಹೆಚ್ಚು ಉದ್ಯೋಗ ಕಲ್ಪಿಸಿರುವ ಕ್ಷೇತ್ರವೆಂದರೆ, ಅದು ಕಟ್ಟಡ ನಿರ್ಮಾಣ ಉದ್ಯಮ. ಸರಕಾರವೇ ಹೇಳುವ ಪ್ರಕಾರ, ರಿಯಲ್‌ ಎಸ್ಟೇಟ್‌ ಉದ್ದಿಮೆಯು ಕಳೆದ 4 ವರ್ಷಗಳಲ್ಲಿ ಶೇ.80ರಷ್ಟು ಪ್ರಗತಿ ಕಂಡಿದೆ. ಆದರೆ, ದೀಪದ ಬುಡದಲ್ಲಿ ಕತ್ತಲು ಎನ್ನುವಂತೆ ಈ ಸ್ಫೋಟಕ ಬೆಳವಣಿಗೆಯ ಹಿಂದಿನ ಕರಾಳ ಮುಖ ಮಾತ್ರ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ.

Advertisement

ಹೌದು, ಕಟ್ಟಡ ನಿರ್ಮಾಣ ಕಾರ್ಮಿಕರ ಪೈಕಿ ನೂರಾರು ಮಂದಿ ಪ್ರತಿ ವರ್ಷ ಕೆಲಸದ ವೇಳೆಯೇ ಒಂದಿಲ್ಲೊಂದು ಕಾರಣಗಳಿಂದ ಸಾವಿಗೀಡಾಗುತ್ತಿದ್ದಾರೆ. ಕಟ್ಟಡದ ಮೇಲಿಂದ ಬಿದ್ದು, ವಿದ್ಯುತ್‌ ಆಘಾತಕ್ಕೀಡಾಗಿ ಅಥವಾ ಕಟ್ಟಡದ ಅವಶೇಷಗಳಡಿ ಸಿಲುಕಿ ಮೃತಪಡುವ ಕಾರ್ಮಿಕರ ಸಂಖ್ಯೆಗೆ ಲೆಕ್ಕವೇ ಇಲ್ಲ. ಇನ್ನು ಇಂತಹ ಘಟನೆಗಳಿಂದ ಗಾಯಗೊಂಡು, ನರಕದ ಜೀವನ ಅನುಭವಿಸುತ್ತಿರುವವರೂ ಇದ್ದಾರೆ. ಆದರೆ, ಈ ಕಾರ್ಮಿಕರ ಸುರಕ್ಷತೆ ಬಗ್ಗೆ ಸರಕಾರದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ನಿರ್ಮಾಣ ಕಾಮಗಾರಿ ವೇಳೆ ಮೃತಪಟ್ಟ ಕಾರ್ಮಿಕರ ಬಗ್ಗೆ ಅಧಿಕೃತ ಮಾಹಿತಿಯೇ ಸರಕಾರದ ಬಳಿಯಿಲ್ಲ ಎನ್ನುತ್ತದೆ ಎನ್‌ಡಿಟಿವಿ ವರದಿ.

ಸತ್ತವರೆಷ್ಟೋ?: ಕಟ್ಟಡ ನಿರ್ಮಾಣ ಕಾರ್ಮಿಕರ ಸಾವಿಗೆ ಸಂಬಂಧಿಸಿ ಹೊರಬಿದ್ದ ಏಕೈಕ ಮಾಹಿತಿಯೆಂದರೆ 2015ರ ಮಾ.16ರಂದು ಲೋಕಸಭೆಯಲ್ಲಿ ಸರಕಾರ ನೀಡಿದ ಲಿಖೀತ ಉತ್ತರ. ಅದರಲ್ಲಿ 2012ರಿಂದ 2015ರವರೆಗೆ ದೇಶಾದ್ಯಂತ 77 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಆರ್‌ಟಿಐ ಅನ್ವಯ ಮಾಹಿತಿ ಕೋರಿ 17 ರಾಜ್ಯಗಳಿಗೆ ಪತ್ರ ಬರೆದಾಗ, ಸಿಕ್ಕ ಉತ್ತರವೇನೆಂದರೆ, 2013ರಿಂದ 2016ರ ಅವಧಿಯಲ್ಲಿ 452 ಕಟ್ಟಡ ಕಾರ್ಮಿಕರು ಮೃತಪಟ್ಟರೆ, 212 ಮಂದಿ ಗಾಯಗೊಂಡಿದ್ದಾರೆ ಎಂದು. ಅಂದರೆ, ಸರಕಾರ ನೀಡಿರುವ ಅಂಕಿ ಸಂಖ್ಯೆಗಿಂತ 6 ಪಟ್ಟು ಅಧಿಕ.

ಇನ್ನೂ ಅಚ್ಚರಿಯ ವಿಚಾರವೆಂದರೆ, ಇಂಥ ಕಾರ್ಮಿಕರ ಸಾವಿನ ಸಂಖ್ಯೆಯನ್ನು ಸಂಗ್ರಹಿಸುತ್ತಿ ರುವ ಎನ್‌ಜಿಒವೊಂದು ನೀಡಿರುವ ಮಾಹಿತಿ ಪ್ರಕಾರ, 2013-2016ರ ಅವಧಿಯಲ್ಲಿ ಮೃತ ಪಟ್ಟ ಕಾರ್ಮಿಕರ ಸಂಖ್ಯೆ 1,092. ಗಾಯ 
ಗೊಂಡವರು 377. ವಿವರವಾಗಿ ಈ ಕುರಿತು ಮಾಹಿತಿ ಸಂಗ್ರಹಿಸಲು ಹೋದರೆ, ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೇ ಅಧಿಕ ಎಂದು ಅಹಮದಾಬಾದ್‌ ಮೂಲದ ಸಾಮಾಜಿಕ ಹೋರಾಟಗಾರ ವಿಪುಲ್‌ ಪಾಂಡ್ಯ ಹೇಳುತ್ತಾರೆ. ಇದಕ್ಕೆ ಕಾರ್ಮಿಕರ ಸುರಕ್ಷತೆಗಾಗಿ ಯಾವುದೇ ಕ್ರಮ ಕೈಗೊಳ್ಳದೇ ಇರುವುದು, ಇಂಥ ಕಾರ್ಮಿಕರ ಬಗ್ಗೆ ಸರಕಾರ ದೂರದೃಷ್ಟಿ ಹೊಂದಿರದೇ ಇರುವುದು ಕಾರಣ ಎಂದೂ ಅವರು ಹೇಳುತ್ತಾರೆ.

ಇವರ ನೋವು ಕೇಳ್ಳೋರ್ಯಾರು?
– ಕಟ್ಟಡ ಕಾರ್ಮಿಕರ ಸಾವಿಗೆ ಹೆಚ್ಚಾಗಿ ಎತ್ತರದಿಂದ ಬೀಳುವುದು, ಗೋಡೆ ಕುಸಿತ ಕಾರಣ
– ಶೇ.15ರಷ್ಟು ಮಂದಿ ವಿದ್ಯುತ್‌ ಆಘಾತದಿಂದ ಸಾವು
– ಮೃತರಲ್ಲಿ ಹೆಚ್ಚಿನವರು ವಲಸೆ ಕಾರ್ಮಿಕರು
– ಹೆಚ್ಚು ಸಾವು ನೋವು ಸಂಭವಿಸಿದ್ದು ವಿದ್ಯುತ್‌ ಸ್ಥಾವರ, ಏರ್‌ಪೋರ್ಟ್‌, ರಾಷ್ಟ್ರೀಯ ಹೆದ್ದಾರಿ, ರಸ್ತೆ ನಿರ್ಮಾಣ ಕಾಮಗಾರಿಗಳ ಸಂದರ್ಭದಲ್ಲಿ

Advertisement
Advertisement

Udayavani is now on Telegram. Click here to join our channel and stay updated with the latest news.

Next